ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್‌ ಸೂಪರ್‌ ಟೆನ್‌ಗೆ ಒಲಿದ ಜಯ

ಪ್ರೊ ಕಬಡ್ಡಿ ಲೀಗ್‌ ಬೆಂಗಳೂರು ಲೆಗ್‌: ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಕ್ಕೆ ಮತ್ತೊಂದು ಸೋಲು
Last Updated 4 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ನವೀನ್‌ಕುಮಾರ್ ಅವರ ಅದ್ಭುತ ಸೂಪರ್‌ ಟೆನ್‌ (ಒಟ್ಟು 16 ಪಾಯಿಂಟ್‌) ಬಲದಿಂದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ದಬಂಗ್‌ ಡೆಲ್ಲಿ ತಂಡ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 46–44 ಪಾಯಿಂಟ್‌ಗಳಿಂದ ರೋಚಕ ಜಯ ಸಾಧಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ರೈಡ್‌ ಮಾಡಿದ ಜೈಪುರ ತಂಡದ ನಾಯಕ ಡೆಲ್ಲಿ ಬಲೆಯೊಳಗೆ ಬಂಧಿಯಾದರು. ಆ ಬಳಿಕದ ರೈಡ್‌ನಲ್ಲೇ ಡೆಲ್ಲಿ ತಂಡದ ಚಂದ್ರನ್‌ ರಂಜಿತ್‌ ಸೂಪರ್‌ ರೈಡ್‌ ಮಾಡಿ ಸಂಚಲನ ಸೃಷ್ಟಿಸಿದರು. ನಾಲ್ಕು ಆಟಗಾರರನ್ನು ಔಟ್‌ ಮಾಡಿದ ಅವರು ಆರಂಭದಲ್ಲೇ ತಂಡಕ್ಕೆ ಆರು ಪಾಯಿಂಟ್‌ ಸಿಗುವಂತೆ ಮಾಡಿದರು. ಈ ವೇಳೆ ಪ್ರೊ ಕಬಡ್ಡಿಯಲ್ಲಿ 200 ರೈಡಿಂಗ್‌ ಪಾಯಿಂಟ್‌ ಗಳಿಸಿದ ಸಾಧನೆಯನ್ನೂ ಮಾಡಿದರು.

ನಿತಿನ್‌ ರಾವಲ್‌ ರೈಡಿಂಗ್‌ ಮೂಲಕ ಜೈಪುರ ತಂಡದ ಖಾತೆ ತೆರೆದರು. ಉಭಯ ತಂಡಗಳು ಪಾಯಿಂಟ್‌ ಗಳಿಸಿಕೊಳ್ಳುತ್ತ ಸಾಗಿದವು. ಡೆಲ್ಲಿ ತಂಡ ಮುನ್ನಡೆಯನ್ನು ಉಳಿಸಿಕೊಳ್ಳುತ್ತಲೇ ಸಾಗಿತು. ತಮ್ಮ ತಂಡ 10–16ರ ಹಿನ್ನಡೆಯಲ್ಲಿದ್ದಾಗ 11ನೇ ನಿಮಿಷದಲ್ಲಿ ಸೂಪರ್‌ ರೈಡ್‌ ಮಾಡಿದ ಜೈಪುರ ತಂಡದ ನಿತಿನ್‌ ರಾವಲ್‌ 15–16ಕ್ಕೆ ಹಿನ್ನಡೆ ತಗ್ಗಿಸಿದರು. ಬಳಿಕ ಡೆಲ್ಲಿ ತಂಡದ ನವೀನ್‌ಕುಮಾರ್‌ ಅವರನ್ನು ಟ್ಯಾಕಲ್‌ ಮಾಡಿ 16–16ರ ಸಮಬಲವನ್ನು ಜೈಪುರ ಸಾಧಿಸಿತು. ಸಮಬಲದೊಂದಿಗೆ ಪಂದ್ಯ ಸಾಗಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಡೆಲ್ಲಿ 21–19ರಿಂದ ಮುಂದಿತ್ತು.

ದ್ವಿತಿಯಾರ್ಧದ ಆಟ ಇನ್ನಷ್ಟು ರಂಗೇರಿತು. ಜೈಪುರ ತಂಡದ ಸಚಿನ್‌ ನರ್ವಾಲ್‌ ಡು ಆರ್‌ ಡೈ ರೈಡ್‌ನಲ್ಲಿ ಸೂಪರ್‌ ರೈಡ್‌ ಮಾಡಿದರು. ಮೂವರು ಆಟಗಾರರನ್ನು ಔಟ್‌ ಮಾಡಿದ ಅವರು ಜೈಪುರದ ಹಿನ್ನಡೆಯನ್ನು 22–23ಕ್ಕೆ ತಗ್ಗಿಸಿದರು. ನವೀನ್‌ ಕುಮಾರ್‌ ಅವರನ್ನು ಟ್ಯಾಕಲ್‌ ಮಾಡಿದ ಜೈಪುರ 24–23ರ ಮುನ್ನಡೆಯನ್ನೂ ಸಾಧಿಸಿತು. ಜಿದ್ದಾಜಿದ್ದಿ ಪೈಪೋಟಿ ಮುಂದುವರಿಯಿತು. ಪಂದ್ಯ ಮುಗಿಯಲು 16 ನಿಮಿಷವಿದ್ದಾಗ ಜೈಪುರ ತಂಡದ ಸುಶೀಲ್‌ ಗುಲಿಯಾ ಅವರನ್ನು ಟ್ಯಾಕಲ್‌ ಮಾಡಿದ ಡೆಲ್ಲಿ ತಂಡದ ವಿಜಯ್‌ ಪ್ರೊ ಕಬಡ್ಡಿಯಲ್ಲಿ ಒಟ್ಟು 150 ಪಾಯಿಂಟ್‌ ಕಲೆಹಾಕಿದರು.

11ನೇ ನಿಮಿಷ ಉಳಿದಿರುವಾಗ ಜೈಪುರ 29–25ರಿಂದ ಮುಂದಿತ್ತು. ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಸಾಗಿದ ತಂಡ ಪಂದ್ಯ ಮುಕ್ತಾಯಕ್ಕೆ ಐದು ನಿಮಿಷವಿರುವಾಗ 37–33ರ ಪಾಯಿಂಟ್‌ಗಳ ಅಂತರದಲ್ಲಿತ್ತು. ಡೆಲ್ಲಿ ಪ್ರಯತ್ನವನ್ನು ಮುಂದುವರಿಸಿತು. ಎರಡು ನಿಮಿಷ ಬಾಕಿಯಿದ್ದಾಗ ಜೈಪುರ 41–37ರ ಮುನ್ನಡೆಯಲ್ಲಿತ್ತು. ಪಂದ್ಯ ಮುಗಿಯಲು 30 ಸೆಕೆಂಡು ಇದ್ದಾಗ ಜೈಪುರ ತಂಡವನ್ನು ಆಲೌಟ್‌ ಮಾಡಿದ ಡೆಲ್ಲಿ 45–43ರ ಮುನ್ನಡೆ ಸಾಧಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಪಂದ್ಯವನ್ನು ಗೆದ್ದು ಬೀಗಿತು. ಡೆಲ್ಲಿ ಪರ ಚಂದ್ರನ್‌ ರಂಜಿತ್‌ 8 ಪಾಯಿಂಟ್‌ ಗಳಿಸಿದರು. ಜೈಪುರ ಪರ ದೀಪಕ್‌ ಹೂಡಾ 11 ಪಾಯಿಂಟ್‌ ಗಳಿಸಿದರು. ನಿತಿನ್‌ ರಾವಲ್‌ 7 ಪಾಯಿಂಟ್‌ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT