ಪ್ರೊ ಕಬಡ್ಡಿ ಆಟಗಾರರ ಹರಾಜು: ಸಾಂಗ್ಲಿಯ ಸಿದ್ದಾರ್ಥ್‌ಗೆ ‘ಜಾಕ್‌ ಪಾಟ್‌’

ಶನಿವಾರ, ಏಪ್ರಿಲ್ 20, 2019
29 °C
ಕನ್ನಡಿಗರಾದ ಪ್ರಶಾಂತ್‌, ರಿಷಾಂಕ್‌ಗೂ ಬೇಡಿಕೆ

ಪ್ರೊ ಕಬಡ್ಡಿ ಆಟಗಾರರ ಹರಾಜು: ಸಾಂಗ್ಲಿಯ ಸಿದ್ದಾರ್ಥ್‌ಗೆ ‘ಜಾಕ್‌ ಪಾಟ್‌’

Published:
Updated:
Prajavani

ಮುಂಬೈ: ‍ಪ್ರೊ ಕಬಡ್ಡಿ ಲೀಗ್ (ಪಿಕೆಎಲ್‌) ಏಳನೇ ಆವೃತ್ತಿಯಲ್ಲಿ ಯಾರು ಕೋಟ್ಯಧಿಪತಿ ಆಗಲಿದ್ದಾರೆ ಎಂಬ ಪ್ರಶ್ನೆಗೆ ಮೊದಲ ದಿನವೇ ಉತ್ತರ ಸಿಕ್ಕಿದೆ.

ರೈಡರ್ ಸಿದ್ದಾರ್ಥ್ ದೇಸಾಯಿ ಬರೋಬ್ಬರಿ ₹1.45 ಕೋಟಿ  ಮೌಲ್ಯ ಪಡೆದಿದ್ದಾರೆ. ತೆಲುಗು ಟೈಟನ್ಸ್‌ ತಂಡ ಅವರನ್ನು ತನ್ನದಾಗಿಸಿಕೊಂಡಿದೆ.

ಮಹಾರಾಷ್ಟ್ರದ ಸಾಂಗ್ಲಿ ನಗರದವರಾದ ಸಿದ್ದಾರ್ಥ್‌, ಹಿಂದಿನ ಆವೃತ್ತಿಯಲ್ಲಿ ಅಮೋಘ ಆಟ ಆಡಿ ಗಮನ ಸೆಳೆದಿದ್ದರು.

ದೇಶಿ ಆಟಗಾರರ ‘ಎ’ ವಿಭಾಗದಲ್ಲಿ ಸ್ಥಾನ ಪಡೆದಿದ್ದ ಅವರಿಗೆ ₹ 30 ಲಕ್ಷ ಮೂಲ ಬೆಲೆ ನಿಗದಿ ಮಾಡಲಾಗಿತ್ತು. ಸಿದ್ದಾರ್ಥ್‌ ಹೆಸರು ಕೂಗಲು ಆರಂಭಿಸಿದ ಕ್ಷಣದಿಂದಲೇ ಅವರನ್ನು ಖರೀದಿಸಲು ಫ್ರಾಂಚೈಸ್‌ಗಳು ಜಿದ್ದಿಗೆ ಬಿದ್ದವು. ಹೀಗಾಗಿ ಅವರ ಬೆಲೆ ನೋಡು ನೋಡುತ್ತಲೇ ಕೋಟಿ ದಾಟಿತು. ಈ ಹಂತದಲ್ಲಿ ಕೆಲ ಪ್ರಾಂಚೈಸ್‌ಗಳು ಬಿಡ್‌ನಿಂದ ಹಿಂದೆ ಸರಿದವು. ಆದರೆ ತಮಿಳ್‌ ತಲೈವಾಸ್‌ ಮತ್ತು ತೆಲುಗು ಟೈಟನ್ಸ್‌ ನಡುವೆ ಪೈಪೋಟಿ ಮುಂದುವರಿಯಿತು. ಅಂತಿಮವಾಗಿ ಟೈಟನ್ಸ್‌ ಕೈ ಮೇಲಾಯಿತು. ಸಿದ್ದಾರ್ಥ್‌ ಅವರನ್ನು ಸೆಳೆದುಕೊಂಡ ಬಳಿಕ ಪ್ರಾಂಚೈಸ್‌ನವರು ಪರಸ್ಪರ ಕೈ ಕುಲುಕಿ ಖುಷಿ ಪಟ್ಟರು.

‘ಈ ಬಾರಿಯ ಹರಾಜಿನಲ್ಲಿ 70ರಿಂದ 80 ಲಕ್ಷ ಸಿಗಬಹುದು ಎಂದು ಭಾವಿಸಿದ್ದೆ. ಟೈಟನ್ಸ್‌ ಮತ್ತು ತಲೈವಾಸ್‌ ಕೋಟಿಗೂ ಅಧಿಕ ಬಿಡ್‌ ಮಾಡಿದಾಗ ಮನೆಯಲ್ಲಿ ಕುಣಿದು ಕುಪ್ಪಳಿಸಿದೆ’ ಎಂದು ಸಿದ್ದಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.

ರೈಡರ್‌ ನಿತಿನ್‌ ತೋಮರ್‌ ಕೂಡಾ ‘ಕೋಟ್ಯಧಿಪತಿಗಳ ಕ್ಲಬ್‌’ ಸೇರಿದರು. ಅವರನ್ನು ತಮಿಳ್‌ ತಲೈವಾಸ್‌ ತಂಡ ₹ 1.2 ಕೋಟಿ ನೀಡಿ ಖರೀದಿಸಿತು. ಆದರೆ ಪುಣೇರಿ ಪಲ್ಟನ್‌ ತಂಡ ‘ಎಫ್‌ಬಿಎಂ’ ಕಾರ್ಡ್‌ ಬಳಸಿ ನಿತಿನ್‌ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಿತಿನ್ ಹಿಂದಿನ ಆವೃತ್ತಿಯಲ್ಲಿ ಪಲ್ಟನ್‌ ಪರ ಆಡಿದ್ದರು.

ಕುಸಿದ ಗೋಯತ್‌ ‘ಮೌಲ್ಯ’: ‍ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ದಾಖಲೆ ಹೊಂದಿರುವ ಮೋನು ಗೋಯತ್‌ ಅವರ ಮೌಲ್ಯ ಈ ಬಾರಿ ಕುಸಿಯಿತು.

ಅವರನ್ನು ಯು.ಪಿ.ಯೋಧಾ ತಂಡ ₹ 93 ಲಕ್ಷ ನೀಡಿ ಖರೀದಿಸಿತು. ಹೋದ ಆವೃತ್ತಿಯಲ್ಲಿ ಮೋನು ₹ 1.51 ಕೋಟಿಗೆ ಹರಿಯಾಣ ಸ್ಟೀಲರ್ಸ್‌ ಪಾಲಾಗಿದ್ದರು. ಈ ಸಲ ಸ್ಟೀಲರ್ಸ್‌, ಅವರನ್ನು ಕೈ ಬಿಟ್ಟಿತ್ತು.

ರಾಹುಲ್‌ ಚೌಧರಿ ಅವರನ್ನು ತಮಿಳ್‌ ತಲೈವಾಸ್‌ ಸೆಳೆದುಕೊಂಡಿತು. ಹಿಂದಿನ ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್‌ ಪರ ಆಡಿದ್ದ ರಾಹುಲ್‌ಗೆ ₹ 94 ಲಕ್ಷ ಲಭಿಸಿತು. ಯು ಮುಂಬಾ ತಂಡ ಸಂದೀಪ್‌ ನರ್ವಾಲ್‌ ಅವರನ್ನು ₹ 89 ಲಕ್ಷಕ್ಕೆ ಖರೀದಿಸಿತು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !