ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಬಂಗಾಳಕ್ಕೆ ರೋಚಕ ಜಯ

Last Updated 9 ಆಗಸ್ಟ್ 2019, 18:52 IST
ಅಕ್ಷರ ಗಾತ್ರ

ಪಟ್ನಾ :ಆರಂಭದ ಹಿನ್ನಡೆಯನ್ನು ಲೆಕ್ಕಿಸದೆ ಮುನ್ನುಗ್ಗಿದ ಬಂಗಾಳ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಶುಕ್ರವಾರದ ರೋಚಕ ಪಂದ್ಯದಲ್ಲಿ ಯು–ಮುಂಬಾವನ್ನು 32–30ರಲ್ಲಿ ಮಣಿಸಿತು. ಕೆ.ಪ್ರಪಂಚನ್‌ 6, ಮಣಿಂದರ್ ಸಿಂಗ್ ಹಾಗೂ ಬಲದೇವ್ ಸಿಂಗ್ ತಲಾ 5 ರೇಡಿಂಗ್‌ ಪಾಯಿಂಟ್ ಗಳಿಸಿದರೆ ಜೀವ ಕುಮಾರ್ 4 ಟ್ಯಾಕಲ್ ಪಾಯಿಂಟ್ ಗಳಿಸಿ ಮಿಂಚಿದರು.

ಮೊದಲ ನಾಲ್ಕು ರೇಡ್‌ಗಳು ಮುಕ್ತಾಯಗೊಂಡಾಗ ಯು ಮುಂಬಾ 2–0ಯಿಂದ ಮುನ್ನಡೆ ಸಾಧಿಸಿತ್ತು. 8–2, 13–5ಕ್ಕೆ ಏರಿತು. ನಿಧಾನವಾಗಿ ಆಟಕ್ಕೆ ಕುದುರಿಕೊಂಡ ಬಂಗಾಳ ಹಿನ್ನಡೆಯನ್ನು 8–13ಕ್ಕೆ ತಗ್ಗಿಸಿತು. ನಂತರ 9–15 ಮತ್ತು 10–16ರ ಮೂಲಕ ಚೇತರಿಸಿಕೊಂಡಿತು.

ಐದು ಪಾಯಿಂಟ್‌ಗಳ (11–16) ಹಿನ್ನೆಡೆಯೊಂದಿಗೆ ವಿರಾಮಕ್ಕೆ ತೆರಳಿದ ಬಂಗಾಳ ವಾರಿಯರ್ಸ್ ನಂತರ ಅಮೋಘ ಆಟವಾಡಿತು. ದ್ವಿತೀಯಾರ್ಧದ ಮೊದಲ ಎರಡು ನಿಮಿಷಗಳಲ್ಲಿ ಐದು ಪಾಯಿಂಟ್ ಕಲೆ ಹಾಕಿದರೆ ಮುಂಬಾ ಬಗಲಿಗೆ ಸೇರಿದ್ದು ಒಂದೇ ಪಾಯಿಂಟ್. ಇದರಿಂದ ಮುಂಬಾ ಎದೆಗುಂದಲಿಲ್ಲ. ಮರು ಹೋರಾಟದ ಮೂಲಕ ಸಮಬಲ ಸಾಧಿಸಿತು.

ಪಂದ್ಯದ 25 ನಿಮಿಷಗಳ ಆಟ ಮುಕ್ತಾಯಗೊಂಡಾಗ ಪಾಯಿಂಟ್ 19–19ರಲ್ಲಿ ಸಮ ಆಯಿತು. ಹೀಗಾಗಿ ಪಂದ್ಯ ರೋಚಕವಾಯಿತು. ನಂತರ ಮುಂಬಾ ಮೇಲುಗೈ ಸಾಧಿಸಿತು. 28ನೇ ನಿಮಿಷದಲ್ಲಿ ಬಂಗಾಳದ ಅಂಗಣದಲ್ಲಿ ಇಬ್ಬರೇ ಆಟಗಾರರು ಬಾಕಿ ಇದ್ದಾಗ ರೇಡ್ ಮಾಡಿದ ಅರ್ಜುನ್ ದೇಶ್ವಾಲ್‌ ಆಲೌಟ್ ಮಾಡಿ ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಟ್ಟರು.ಈ ರೇಡ್ ಮೂಲಕ ಅವರು ಸೂಪರ್ 10 ಸಾಧನೆಯನ್ನೂ ಮಾಡಿದರು. ಬಂಗಾಳ 20–26ರ ಹಿನ್ನಡೆ ಕಂಡಿತು.

ಈ ಹಂತದಿಂದ ಪಂದ್ಯದ ಗತಿ ಬದಲಾಯಿತು. 23–27ರ ಹಿನ್ನಡೆಯಲ್ಲಿದ್ದಾಗ ಸತತ ನಾಲ್ಕು ಪಾಯಿಂಟ್ ಗಳಿಸಿದ ಬಂಗಾಳ ಸಮಬಲ ಸಾಧಿಸಿತು. ಪಂದ್ಯದ ಮುಕ್ತಾಯಕ್ಕೆ ನಾಲ್ಕು ನಿಮಿಷ ಇದ್ದಾಗ ಎದುರಾಳಿ ಪಾಳಯವನ್ನು ಆಲೌಟ್ ಮಾಡಿ 31–28ರಲ್ಲಿ ಮುನ್ನಡೆಯಿತು. ಎರಡು ನಿಮಿಷ ಇದೇ ಸ್ಕೋರ್‌ನಲ್ಲಿ ಪಂದ್ಯ ಸಾಗಿದಾಗ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿತು. ಕೊನೆಯ ಒಂದು ನಿಮಿಷ ಇದ್ದಾಗ ಯು ಮುಂಬಾ ಹಿನ್ನಡೆಯನ್ನು 30–31ಕ್ಕೆ ತಗ್ಗಿಸಿತು. ಆದರೆ ಪಟ್ಟುಬಿಡದ ಬಂಗಾಳ ಆಟಗಾರರು ಗೆಲುವು ಸಾಧಿಸಿ ನಗೆ ಸೂಸಿದರು.

ಆತಿಥೇಯರಿಗೆ ಭರ್ಜರಿ ಗೆಲುವು: ಮತ್ತೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 41-20ರಲ್ಲಿ ಯು.ಪಿ.ಯೋಧಾವನ್ನು ಮಣಿಸಿತು. ಪ್ರದೀಪ್ ನರ್ವಾಲ್ (12ಪಾಯಿಂಟ್ಸ್‌) ಮತ್ತು ನೀರಜ್ ಕುಮಾರ್ (8) ಪಟ್ನಾ ಪರವಾಗಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT