ಚೊಚ್ಚಲ ಪ್ರಶಸ್ತಿ ಕನಸಿನಲ್ಲಿ ಬೆಂಗಳೂರು ಬುಲ್ಸ್‌

7
ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿ: ಇಂದು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಎದುರು ಫೈನಲ್‌ ‘ಫೈಟ್‌’

ಚೊಚ್ಚಲ ಪ್ರಶಸ್ತಿ ಕನಸಿನಲ್ಲಿ ಬೆಂಗಳೂರು ಬುಲ್ಸ್‌

Published:
Updated:

ಮುಂಬೈ: ವಾಣಿಜ್ಯ ನಗರಿ, ಮಹಾ ನಗರಿ,‘ಹಾರ್ಟ್‌ ಆಫ್‌ ಬಾಲಿವುಡ್‌’,ಹೀಗೆ ಹಲವು ವಿಶೇಷಣಗಳನ್ನು ಹೊಂದಿರುವ ಮುಂಬೈಯಲ್ಲಿ ಈಗ ಕಬಡ್ಡಿ ಕಲರವ ಶುರುವಾಗಿದೆ.

ಪ್ರೇಮಿಗಳ ನೆಚ್ಚಿನ ತಾಣ, ಮರಿನಾ ಡ್ರೈವ್‌ನ ಸನಿಹದಲ್ಲೇ ಇರುವ ನ್ಯಾಷನಲ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ ಕ್ರೀಡಾಂಗಣದಲ್ಲಿ ತಲೆ ಎತ್ತಿರುವ ಆಟಗಾರರ ಕಟೌಟ್‌ಗಳು ಕಬಡ್ಡಿ ಪ್ರಿಯರನ್ನು ಆಕರ್ಷಿಸುತ್ತಿವೆ.‌

ಇಲ್ಲಿ ಶನಿವಾರ ನಡೆಯುವ ಪ್ರೊ ಕಬಡ್ಡಿ ಲೀಗ್‌ನ ಆರನೇ ಆವೃತ್ತಿಯ ಫೈನಲ್‌ ಹೋರಾಟದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಬೆಂಗಳೂರು ಬುಲ್ಸ್‌ ಮತ್ತು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಚೊಚ್ಚಲ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕಿಳಿಯುತ್ತಿವೆ. ಈ ಹೋರಾಟದೊಂದಿಗೆ ಮೂರು ತಿಂಗಳು ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದ ಈ ಬಾರಿಯ ಲೀಗ್‌ಗೂ ತೆರೆ ಬೀಳಲಿದೆ.

ಹೋದ ವರ್ಷದ ಕೊನೆಯ ದಿನ (ಸೋಮವಾರ) ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ಬುಲ್ಸ್‌ ಮತ್ತು ಫಾರ್ಚೂನ್‌ಜೈಂಟ್ಸ್‌ ಮುಖಾಮುಖಿಯಾಗಿದ್ದವು. ಆಗ ಬೆಂಗಳೂರಿನ ತಂಡ 12 ಪಾಯಿಂಟ್ಸ್‌ಗಳಿಂದ ಗೆದ್ದು ನೇರವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಮೊದಲಾರ್ಧದಲ್ಲಿ ಹಿನ್ನಡೆ ಕಂಡಿದ್ದ ರೋಹಿತ್‌ ಪಡೆ ದ್ವಿತೀಯಾರ್ಧದಲ್ಲಿ ಅಮೋಘ ಸಾಮರ್ಥ್ಯ ತೋರಿ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿತ್ತು. ಹಿಂದಿನ ಈ ಗೆಲುವು ಬುಲ್ಸ್‌ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಪವನ್‌ ಶೆರಾವತ್‌ ಮತ್ತು ರೋಹಿತ್‌ ಅವರು ಮಿಂಚಿನ ಆಟದ ಮೂಲಕ ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ಪಂದ್ಯಗಳ ಫಲಿತಾಂಶವನ್ನು ಅವಲೋಕಿಸಿದರೆ ಇದು ಮನದಟ್ಟಾಗುತ್ತದೆ.

ಪವನ್‌ ಅವರು ಆರನೇ ಅವೃತ್ತಿಯಲ್ಲಿ ಅತಿ ಹೆಚ್ಚು ಪಾಯಿಂಟ್ಸ್‌ ಕಲೆಹಾಕಿದ ಹಿರಿಮೆ ಹೊಂದಿದ್ದಾರೆ. ಅವರ ಖಾತೆಯಲ್ಲಿ 249 ಪಾಯಿಂಟ್ಸ್‌ ಇವೆ. ರೋಹಿತ್‌ 23 ಪಂದ್ಯಗಳಿಂದ 161 ಪಾಯಿಂಟ್ಸ್‌ ಹೆಕ್ಕಿದ್ದಾರೆ.

ರೈಟ್‌ ಕಾರ್ನರ್‌ನಲ್ಲಿ ಆಡುವ ರಾಜುಲಾಲ್‌ ಚೌಧರಿ, ರೈಟ್‌ ಕವರ್‌ನಲ್ಲಿ ಆಡುವ ಆಶಿಶ್‌ ಸಂಗ್ವಾನ್‌, ಮಹೇಂದರ್‌ ಸಿಂಗ್‌, ಸುಮಿತ್‌ ಸಿಂಗ್‌ ಮತ್ತು ಅಮಿತ್‌ ಶೆರಾನ್‌ ಅವರ ಮೇಲೂ ಭರವಸೆ ಇಡಬಹುದು.

ಸುನಿಲ್‌ ಕುಮಾರ್‌ ಮುಂದಾಳತ್ವದ ಗುಜರಾತ್‌ ಕೂಡಾ ಗೆಲುವಿನ ತವಕದಲ್ಲಿದೆ. ಈ ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಯು.ಪಿ.ಯೋಧಾ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು.

ರೈಟ್‌ ಇನ್‌ ವಿಭಾಗದಲ್ಲಿ ಆಡುವ ಪ್ರಪಾಂಜನ್‌ ಈ ತಂಡದ ಆಧಾರಸ್ಥಂಭವಾಗಿದ್ದಾರೆ. ಸಚಿನ್‌ ಮತ್ತು ಪರ್ವೇಶ್‌ ಬೈನ್ಸ್‌ವಾಲ್‌ ಅವರೂ ಅಭಿಮಾನಿಗಳ ಆಕರ್ಷಣೆಯಾಗಿದ್ದಾರೆ. ಇವರನ್ನು ಕಟ್ಟಿಹಾಕಲು ಬುಲ್ಸ್‌ ತಂಡ ಯಾವ ಬಗೆಯ ರಣನೀತಿ ಹೆಣೆದು ಕಣಕ್ಕಿಳಿಯಲಿದೆ ಎಂಬ ಕುತೂಹಲ ಗರಿಗೆದರಿದೆ.

***

ಈ ಬಾರಿ ನಾವು ತುಂಬಾ ಚೆನ್ನಾಗಿ ಆಡಿದ್ದೇವೆ. ಪ್ರಶಸ್ತಿ ಗೆಲ್ಲಲು ಸಿಕ್ಕಿರುವ ಈ ಅವಕಾಶವನ್ನು ಅಷ್ಟು ಸುಲಭವಾಗಿ ಕೈಚೆಲ್ಲುವುದಿಲ್ಲ. ಮೊದಲ ಕ್ವಾಲಿಫೈಯರ್‌ನಲ್ಲಿ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಮಣಿಸಿದ್ದೆವು. ಹಿಂದಿನ ಗೆಲುವು ಮನೋಬಲ ಹೆಚ್ಚುವಂತೆ ಮಾಡಿದೆ.

–ರೋಹಿತ್‌ ಕುಮಾರ್‌, ಬುಲ್ಸ್‌ ನಾಯಕ

ನಾನು ಮೊದಲ ಬಾರಿಗೆ ತಂಡದ ಸಾರಥ್ಯ ವಹಿಸಿದ್ದೆ. ತಂಡವನ್ನು ಫೈನಲ್‌ನತ್ತ ಮುನ್ನಡೆಸಿದ್ದು ಖುಷಿ ನೀಡಿದೆ. ಚೊಚ್ಚಲ ಟ್ರೋಫಿ ಜಯಿಸುವುದು ನಮ್ಮ ಗುರಿ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.

–ಸುನಿಲ್‌ ಕುಮಾರ್‌, ಫಾರ್ಚೂನ್‌ ಜೈಂಟ್ಸ್‌ ನಾಯಕ 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !