ಮಂಗಳವಾರ, ನವೆಂಬರ್ 19, 2019
27 °C
ಬೆಂಗಾಲ್‌–ಡೆಲ್ಲಿ ನಡುವೆ ಇಂದು ಫೈನಲ್‌ ಹಣಾಹಣಿ

ಪ್ರೊ ಕಬಡ್ಡಿ ಲೀಗ್‌: ನೂತನ ಚಾಂಪಿಯನ್ನರ ನಿರೀಕ್ಷೆಯಲ್ಲಿ

Published:
Updated:
Prajavani

ಅಹಮದಾಬಾದ್‌: ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಕಿರೀಟ ಯಾರ ಮುಡಿಗೇರಲಿದೆ..?

ಈ ಪ್ರಶ್ನೆ ಈಗ ಕಬಡ್ಡಿ ಪ್ರಿಯರನ್ನು ಕಾಡುತ್ತಿದೆ. ಶನಿವಾರ ಇಲ್ಲಿ ನಡೆಯುವ ಫೈನಲ್‌ನಲ್ಲಿ ದಬಂಗ್‌ ಡೆಲ್ಲಿ ಮತ್ತು ಬೆಂಗಾಲ್‌ ವಾರಿಯರ್ಸ್‌ ಮುಖಾಮುಖಿಯಾಗಲಿವೆ. ಬಲಿಷ್ಠ ತಂಡಗಳ ನಡುವಣ ಈ ಹೋರಾಟದಲ್ಲಿ ಗೆದ್ದವರು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಇದರೊಂದಿಗೆ ಪಿಕೆಎಲ್‌ನಲ್ಲಿ ಹೊಸ ಚಾಂಪಿಯನ್ನರ ಉಗಮವಾಗಲಿದೆ.

ಪಟ್ನಾ ಪೈರೇಟ್ಸ್‌ ಮೂರು ಸಲ, ಜೈಪುರ ಪಿಂಕ್‌ ಪ್ಯಾಂಥರ್ಸ್‌, ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್‌ ತಂಡಗಳು ತಲಾ ಒಮ್ಮೆ ಪ್ರಶಸ್ತಿ ಗೆದ್ದಿವೆ. ಬೆಂಗಾಲ್‌ ಮತ್ತು ಡೆಲ್ಲಿ ಮೊದಲ ಸಲ ಅಂತಿಮ ಘಟ್ಟಕ್ಕೆ ಲಗ್ಗೆ ಇಟ್ಟಿವೆ.

ಒಂದೊಮ್ಮೆ ಡೆಲ್ಲಿ ತಂಡ ಚಾಂಪಿಯನ್‌ ಆದರೆ, ಈ ತಂಡದ ವಿಶಾಲ್‌ ಮಾನೆ, ಹೊಸ ಮೈಲುಗಲ್ಲು ಸ್ಥಾಪಿಸಲಿದ್ದಾರೆ. ಪಿಕೆಎಲ್‌ನಲ್ಲಿ ಪ್ರಶಸ್ತಿ ಗೆದ್ದ ಮೂರು ತಂಡಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಹಿರಿಮೆ ಅವರದ್ದಾಗಲಿದೆ. ಯು ಮುಂಬಾ (ಎರಡನೇ ಆವೃತ್ತಿ) ಮತ್ತು ಪಟ್ನಾ ಪೈರೇಟ್ಸ್‌ (ಐದನೇ ಆವೃತ್ತಿ) ಚಾಂಪಿಯನ್‌ ಆಗಿದ್ದಾಗ ವಿಶಾಲ್‌, ಈ ತಂಡಗಳನ್ನು ಪ್ರತಿನಿಧಿಸಿದ್ದರು.

ದಬಂಗ್‌ ಮತ್ತು ಬೆಂಗಾಲ್‌, ಈ ಸಲದ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದ್ದವು.

ನವೀನ್‌–ಮಣಿಂದರ್‌ ಆಕರ್ಷಣೆ: ಡೆಲ್ಲಿ ತಂಡದ ನವೀನ್‌ ಕುಮಾರ್‌ ಮತ್ತು ಬೆಂಗಾಲ್‌ ತಂಡದ ಮಣಿಂದರ್‌ ಸಿಂಗ್‌ ಅವರ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ. ಇಬ್ಬರೂ ಅಮೋಘ ರೇಡ್‌ಗಳ ಮೂಲಕ ಲೀಗ್‌ ಹಂತದಲ್ಲಿ ತಮ್ಮ ತಂಡಗಳನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ದಿದ್ದರು.

ನವೀನ್‌ ಅವರು ಈ ಸಲದ ಲೀಗ್‌ನಲ್ಲಿ ಅತೀ ಹೆಚ್ಚು ರೇಡ್‌ ಪಾಯಿಂಟ್ಸ್‌ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ (283 ಪಾ.) ಹೊಂದಿದ್ದಾರೆ. ಮಣಿಂದರ್‌ (205) ಐದನೇ ಸ್ಥಾನದಲ್ಲಿದ್ದಾರೆ. ಶನಿವಾರವೂ ಇವರಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬರುವ ನಿರೀಕ್ಷೆ ಇದೆ.

ಚಂದ್ರನ್‌ ರಂಜಿತ್‌ ಮತ್ತು ವಿಜಯ್‌ ಅವರೂ ರೇಡಿಂಗ್‌ನಲ್ಲಿ ಡೆಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ರವಿಂದರ್‌ ಪಾಹಲ್‌, ನಾಯಕ ಜೋಗಿಂದರ್‌ ನರ್ವಾಲ್‌ ಮತ್ತು ವಿಶಾಲ್‌ ಮಾನೆ ಅವರು ರಕ್ಷಣಾ ವಿಭಾಗದ ಶಕ್ತಿಯಾಗಿದ್ದಾರೆ.

ಬೆಂಗಾಲ್‌ ತಂಡದಲ್ಲೂ ಪ್ರತಿಭಾನ್ವಿತ ರೇಡರ್‌ಗಳಿದ್ದಾರೆ. ಕನ್ನಡಿಗರಾದ ಸುಕೇಶ್‌ ಹೆಗ್ಡೆ ಮತ್ತು ಕೆ.ಪ್ರಪಂಜನ್‌ ಹಾಗೂ ಇರಾನ್‌ನ ಮೊಹಮ್ಮದ್‌ ನಬಿಬಕ್ಷ್‌ ಅವರು ದಬಂಗ್‌ ತಂಡದ ರಕ್ಷಣಾ ವಿಭಾಗವನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ರಕ್ಷಣಾ ವಿಭಾಗದ ಆಟಗಾರರಾದ ಜೀವಕುಮಾರ್‌ ಮತ್ತು ಬಲದೇವ್‌ ಸಿಂಗ್‌ ಅವರೂ ತಂಡದ ಭರವಸೆಯಾಗಿದ್ದಾರೆ.

ಆರಂಭ: ರಾತ್ರಿ 7.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಪ್ರತಿಕ್ರಿಯಿಸಿ (+)