ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಗಚಿ ಜಲಾಶಯ; ಒಳ ಹರಿವು ಏರಿಕೆ

ಬೇಲೂರು: ನಾಲ್ಕು ದಿನಗಳಿಂದ ಸತತ ಮಳೆ
Last Updated 13 ಜೂನ್ 2018, 12:16 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನಾದ್ಯಂತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರ ಭಾಗದಲ್ಲಿ ಜನಜೀವನ ಅಸ್ತವ್ಯಸ್ತ ಗೊಂಡಿದ್ದರೆ, ಗ್ರಾಮೀಣ ಭಾಗದಲ್ಲಿ ರೈತರ ಮೊಗದಲ್ಲಿ ಸಂತಸ ಹೆಚ್ಚಿಸಿದೆ.

ಉತ್ತಮ ಮುಂಗಾರು ಮಳೆ ಯಿಂದಾಗಿ ರೈತರು ಹರ್ಷಚಿತ್ತ ರಾಗಿದ್ದು,  ಪಟ್ಟಣಕ್ಕೆ ಸಮೀಪದ ಯಗಚಿ ಜಲಾಶಯದ ಸಂಗ್ರಹದಲ್ಲಿ ಮೂರು ದಿನಗಳಲ್ಲಿ ಎರಡು ಅಡಿ ಏರಿದೆ.

ತಾಲ್ಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿ, ಬೇಲೂರು ಪಟ್ಟಣ, ಹಳೇಬೀಡು ಮತ್ತು ಮಾದಿಹಳ್ಳಿ ಭಾಗದಲ್ಲಿ ಸತತ ಮಳೆಯಾಗುತ್ತಿದೆ.

ಬೇಲೂರು ಪಟ್ಟಣದಲ್ಲಿ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿದಿದ್ದು, ಮಂಗಳವಾರ ತಕ್ಕಮಟ್ಟಿಗೆ ಬಿಡುವು ನೀಡಿದೆ. ಅರೇಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿ ಭಾಗದಲ್ಲಿ ಮಳೆ ಮುಂದುವರೆದಿದೆ. ಕಾಫಿ ಬೆಳೆಗಾರರಿಗೂ ಮಳೆ ಸಂತಸ ತಂದಿದೆ.

ಯಗಚಿ ಜಲಾಶಯಕ್ಕೆ ಜೂನ್‌ ತಿಂಗಳಿನಲ್ಲಿ ಒಳ ಹರಿವು ಹೆಚ್ಚಾಗಿರುವುದು ಅಚ್ಚುಗಟ್ಟು ಪ್ರದೇಶದ ರೈತರಲ್ಲಿ ಸಂತಸ ಹೆಚ್ಚಿಸಿದೆ. ಕಳೆದ ಮೂರು ವರ್ಷಗಳಿಂದ ಬರ ಸ್ಥಿತಿ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿರಲಿಲ್ಲ.

ಪರಿಣಾಮ ಬೇಲೂರು ಪಟ್ಟಣ ಸೇರಿದಂತೆ ಹಲವು ಪಟ್ಟಣಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿತ್ತು.

ಯಗಚಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಗೆಂಡೇಹಳ್ಳಿ, ಆಲ್ದೂರು ಭಾಗಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದು ನೀರಿನ ಹರಿವು ಏರಿಕೆಗೆ ಕಾರಣ.

ಜಲಾಶಯದ 964.603 ಮೀಟರ್‌ ಎತ್ತರದ ಅಣೆಕಟ್ಟೆಯಲ್ಲಿ ಮಂಗಳವಾರ 959 ಮೀ. ನೀರಿತ್ತು. 3.60 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1.286 ಟಿಎಂಸಿ ನೀರು ಸಂಗ್ರಹವಿತ್ತು. ಒಳಹರಿವು 546 ಕ್ಯುಸೆಕ್‌ ಇದೆ.

ನೆಲಕಚ್ಚಿದ ಬೆಳೆ: ಸತತ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ಬೆಳೆ ಹಾನಿ, ಆಸ್ತಿ ನಷ್ಟ ವರದಿಗಳು ಬಂದಿವೆ. ಹೆಬ್ಬಾಳು ಗ್ರಾಮದಲ್ಲಿ ಸೋಮಣ್ಣ  ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಬೀನ್ಸ್‌ ಸಸಿಗಳು ನೆಲಕಚ್ಚಿವೆ.

ಅಲ್ಲದೆ, ಮೆಣಸಿನಗಿಡ, ಸೌತೆಕಾಯಿ, ಟೊಮೊಟೊ ಗಿಡಗಳಿಗೂ ಹಾನಿಯಾಗಿದೆ. ಅಲ್ಲಲ್ಲಿ ವಿದ್ಯುತ್‌ ಕಂಬದ ಮೇಲೆ ಮರ ಉರುಳಿದ್ದು, ಸಂಚಾರ ಸಮಸ್ಯೆ, ವಿದ್ಯುತ್ ವ್ಯತ್ಯಯ ಸಮಸ್ಯೆಗಳು ಕೂಡಾ ಎದುರಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT