ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಹರಿಯಾಣಗೆ ಸಾಟಿಯಾಗದ ಮುಂಬಾ

Last Updated 19 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚೆನ್ನೈ: ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಹರಿಯಾಣ ಸ್ಟೀಲರ್ಸ್ ತಂಡ ಅಮೋಘ ಆಟದ ಮೂಲಕ ಬಲಿಷ್ಠ ಯು ಮುಂಬಾವನ್ನು ಕಟ್ಟಿ ಹಾಕಿತು. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಸ್ಟೀಲರ್ಸ್ 30–27ರಿಂದ ಮುಂಬಾವನ್ನು ಮಣಿಸಿತು.

ಪಂದ್ಯದ ಮೊದಲ ರೇಡ್ ಮಾಡಿದ ಮುಂಬಾದ ಅರ್ಜುನ್ ದೇಶ್ವಾಲ್ ಬರಿಗೈಯಲ್ಲಿ ಮರಳಿದರೂ ಮುಂದಿನ ರೇಡ್‌ನಲ್ಲಿ ಎದುರಾಳಿ ತಂಡದ ವಿಕಾಸ್ ಖಂಡೋಲ ಅವನ್ನು ಹಿಡಿದು ಹರೇಂದ್ರ ಕುಮಾರ್ ಅವರು ಮುಂಬಾಗೆ ಪಾಯಿಂಟ್ ಗಳಿಸಿಕೊಟ್ಟರು. ಯಶಸ್ವಿ ರೇಡ್ ಮಾಡಿದ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಒಂದು ಪಾಯಿಂಟ್ ಗಳಿಸಿ ಸ್ಟೀಲರ್ಸ್‌ಗೆ ಸಮಬಲ ಗಳಿಸಿಕೊಟ್ಟರು.

ನಾಲ್ಕನೇ ನಿಮಿಷದಲ್ಲಿ 4–1ರ ಮುನ್ನಡೆ ಸಾಧಿಸಿದ ಮುಂಬಾ 9ನೇ ನಿಮಿಷದಲ್ಲಿ ಸ್ಟೀಲರ್ಸ್ ತಿರುಗೇಟು ನೀಡಿತು. ಪಂದ್ಯ 6–6ರಲ್ಲಿ ಸಮ ಆಯಿತು. 14ನೇ ನಿಮಿಷದಲ್ಲಿ 8–8ರಲ್ಲಿ ಸಮ ಆಯಿತು. ನಂತರ ಸ್ಟೀಲರ್ಸ್‌ ಮುನ್ನಡೆಯತ್ತ ಹೆಜ್ಜೆ ಹಾಕಿತು. 15ನೇ ನಿಮಿಷದಲ್ಲಿ ವಿಕಾಸ್ ಖಂಡೋಲ ಎದುರಾಳಿಗಳನ್ನು ಆಲೌಟ್ ಮಾಡಿ 13–8ರ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದ ಮುಕ್ತಾಯಕ್ಕೆ ಸ್ಟೀಲರ್ಸ್ ಮುನ್ನಡೆ 16–8ಕ್ಕೇರಿತು.

ಮುಂದುವರಿದ ಯಶಸ್ವಿ ಓಟ:ದ್ವಿತೀಯಾರ್ಧದಲ್ಲೂ ಸ್ಟೀಲರ್ಸ್ ಯಶಸ್ಸಿನ ಓಟ ಮುಂದುವರಿಯಿತು. 28ನೇ ನಿಮಿಷದಲ್ಲಿ ಹಿನ್ನಡೆಯನ್ನು 16–18ಕ್ಕೆ ಇಳಿಸಿದ ಮುಂಬಾ ಸಮಾಧಾನಪಟ್ಟುಕೊಂಡಿತು. ಆದರೆ ಮರು ನಿಮಿಷದಲ್ಲೇ 2 ಪಾಯಿಂಟ್ ಹೆಕ್ಕಿದ ಸ್ಟೀಲರ್ಸ್ ಮುನ್ನಡೆಯ ಅಂತರ ಹೆಚ್ಚಿಸಿತು. 8 ನಿಮಿಷಗಳ ಆಟ ಬಾಕಿ ಇದ್ದಾಗ ಮುಂಬಾ 8 ಪಾಯಿಂಟ್‌ಗಳ ಅಂತರದಿಂದ ಹಿಂದೆ ಉಳಿಯಿತು.

ಆದರೆ ಅಮೋಘ ಆಟದ ಮೂಲಕ ಚೇತರಿಸಿಕೊಂಡ ತಂಡ 4 ನಿಮಿಷ ಬಾಕಿ ಇದ್ದಾಗ ಹಿನ್ನಡೆಯನ್ನು 25–26ಕ್ಕೆ ಕುಗ್ಗಿಸಿ ನಿಟ್ಟುಸಿರು ಬಿಟ್ಟಿತು. ಹೀಗಾಗಿ ಪಂದ್ಯ ರೋಚಕಾಯಿತು. ಆದರೆ ಸೋಲೊಪ್ಪಿಕೊಳ್ಳಲು ಸ್ಟೀಲರ್ಸ್ ಸಿದ್ಧವಿರಲಿಲ್ಲ. ವಿಕಾಸ್ ಖಂಡೋಲ 9, ರವಿಕುಮಾರ್ ಮತ್ತು ಸುನಿಲ್ ತಲಾ 3 ಪಾಯಿಂಟ್ ಗಳಿಸಿದರು. ಮುಂಬಾ ಪರ ಸಂದೀಪ್ ನರ್ವಾಲ್ 5 ರೇಡಿಂಗ್ ಪಾಯಿಂಟ್ ಗಳಿಸಿದರೆ ಫಜಲ್ ಅತ್ರಾಚಲಿ 4 ಟ್ಯಾಕಲ್ ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT