ಭಾನುವಾರ, ಸೆಪ್ಟೆಂಬರ್ 15, 2019
30 °C

ಪ್ರೊ ಕಬಡ್ಡಿ: ಬೆಂಗಾಲ್‌ಗೆ ಮಣಿದ ಪಟ್ನಾ

Published:
Updated:
Prajavani

ಚೆನ್ನೈ: ಡುಮ್ಕಿ ಕಿಂಗ್ ಖ್ಯಾತಿಯ ಪ್ರದೀಪ್ ನರ್ವಾಲ್ ಸೂಪರ್ ಟೆನ್ ಸಾಧನೆಯನ್ನೇನೋ ಮಾಡಿದರು. ಆದರೆ ಪಟ್ನಾ ಪೈರೇಟ್ಸ್ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. 

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಟ್ನಾವನ್ನು ಬೆಂಗಾಲ್ ವಾರಿಯರ್ಸ್‌ 35-26ರಲ್ಲಿ ಮಣಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಪಂದ್ಯದ ಎರಡನೇ ರೇಡ್‌ನಲ್ಲಿ ಮೊದಲ ಪಾಯಿಂಟ್ ತಂದುಕೊಟ್ಟ ಪ್ರದೀಪ್ ನರ್ವಾಲ್ ನಂತರವೂ ಅಮೋಘ ಆಟ ಮುಂದುವರಿಸಿದರು. ಒಟ್ಟು 12 ಪಾಯಿಂಟ್ ಗಳಿಸಿ ಮಿಂಚಿದರು. ಎರಡು ನಿಮಿಷಗಳ ಆಟ ಮುಕ್ತಾಯಗೊಂಡಾಗ ಪಟ್ನಾ 3–1ರ ಮುನ್ನಡೆ ಸಾಧಿಸಿತ್ತು. ಆದರೆ ಮರುಕ್ಷಣದಲ್ಲೇ ಪ್ರಪಂಚನ್ ಯಶಸ್ವಿ ರೇಡ್ ಮಾಡಿ 3–3ರ ಸಮಬಲ ಸಾಧಿಸಲು ನೆರವಾದರು.

ಆರು ನಿಮಿಷಗಳ ಆಟ ಮುಕ್ತಾಯಗೊಂಡಾಗ ತಂಡ 8–4ರ ಮುನ್ನಡೆ ಸಾಧಿಸಿತು. ಆದರೆ ತಿರುಗೇಟು ನೀಡಿದ ಬೆಂಗಾಲ್ 15ನೇ ನಿಮಿಷದಲ್ಲಿ 11–11ರ ಸಮಬಲ ಸಾಧಿಸಿ ನಿಟ್ಟುಸಿರು ಬಿಟ್ಟಿತು. ನಂತರ ಪಂದ್ಯ ರೋಚಕವಾಯಿತು. ಮಹತ್ವದ ತಿರುವನ್ನೂ ಕಂಡಿತು. ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಾಲ್‌ 15–14ರಿಂದ ಮುನ್ನಡೆಯಿತು.

ದ್ವಿತೀಯಾರ್ಧದಲ್ಲಿ ಪಟ್ನಾಗೆ ನಿರಾಸೆ: ದ್ವಿತೀಯಾರ್ಧದ ಮೊದಲ ನಿಮಿಷದಲ್ಲೇ ಪಟ್ನಾವನ್ನು ಬೆಂಗಾಲ್ ಆಲ್ ಔಟ್ ಮಾಡಿತು. ಈ ಮೂಲಕ 19–14ರ ಮುನ್ನಡೆ ಸಾಧಿಸಿ ಗೆಲುವಿನತ್ತ ಹೆಜ್ಜೆ ಹಾಕಿತು. ಕೊನೆಯ 10 ನಿಮಿಷಗಳು ಬಾಕಿ ಇದ್ದಾಗ ತಂಡದ ಮುನ್ನಡೆ 29–15ಕ್ಕೆ ಏರಿತು. ಈ ಆಘಾತದಿಂದ ತತ್ತರಿಸಿದ ಪಟ್ನಾಗೆ ನಂತರ ಚೇತರಿಸಿಕೊಳ್ಳಲು ಆಗಲೇ ಇಲ್ಲ.

ಬೆಂಗಾಲ್ ಪರ ಮಣಿಂದರ್ ಸಿಂಗ್ ‘ಸೂಪರ್ ಟೆನ್‌’ ಸಾಧನೆ ಮಾಡಿದರೆ ಪ್ರಪಂಚನ್ 6, ರಿಂಕು ನರ್ವಾಲ್‌ 5 ಮತ್ತು ಮೊಹಮ್ಮದ್ ನಬೀ ಭಕ್ಷ್ 4 ಪಾಯಿಂಟ್ ಕಲೆ ಹಾಕಿದರು. ಜೀವ ಕುಮಾರ್ 3 ಟ್ಯಾಕ್ಲಿಂಗ್ ಪಾಯಿಂಟ್‌ಗಳ ಮೂಲಕ ಮಿಂಚಿದರು.

Post Comments (+)