ಗುರುವಾರ , ನವೆಂಬರ್ 14, 2019
18 °C

ಪ್ರೊ ಕಬಡ್ಡಿ: ಬೆಂಗಾಲ್‌ಗೆ ಮಣಿದ ಬುಲ್ಸ್‌

Published:
Updated:
Prajavani

ಕೋಲ್ಕತ್ತ: ಪವನ್ ಶೆರಾವತ್ (19 ಪಾಯಿಂಟ್ಸ್‌) ಬೆಂಗಳೂರು ಬುಲ್ಸ್ ಪರವಾಗಿಯೂ ಮಣಿಂದರ್ ಸಿಂಗ್ (17 ಪಾಯಿಂಟ್ಸ್) ಬೆಂಗಾಲ್ ವಾರಿಯರ್ಸ್ ಪರವಾಗಿಯೂ ರೇಡಿಂಗ್‌ನಲ್ಲಿ ಮಿಂಚಿ ದರು. ಆದರೆ ರೊಚಕವಾದ ಅಂತಿಮ ಕ್ಷಣಗಳಲ್ಲಿ ಚಾಣಾಕ್ಷ ಆಟವಾಡಿದ ಬೆಂಗಾಲ್ ವಾರಿಯರ್ಸ್ ಜಯಭೇರಿ ಮೊಳಗಿಸಿತು.

ಇಲ್ಲಿ ಗುರುವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಆತಿಥೇಯ ತಂಡ 42–40 ಪಾಯಿಂಟ್‌ಗಳಿಂದ ಮಣಿಸಿ ತು. ಈ ಮೂಲಕ ತವರಿನಲ್ಲಿ ಮೂರನೇ ಜಯ ತನ್ನದಾಗಿಸಿಕೊಂಡಿತು.

ಆರಂಭದ ಎರಡೂ ರೇಡ್‌ಗಳಲ್ಲಿ ಉಭಯ ತಂಡಗಳ ನಾಯಕರು ಒಂದೊಂದು ಪಾಯಿಂಟ್ ಗಳಿಸಿದರು. ನಂತರ ಸೌರಭ್ ನಂದಾಲ್ ಅವರ ಟ್ಯಾಕ್ಲಿಂಗ್ ಮತ್ತು ಪವನ್ ಶೆರಾವತ್ ಅವರ ರೇಡಿಂಗ್ ಬಲದಿಂದ ಬುಲ್ಸ್ ಮುನ್ನಡೆ ಸಾಧಿಸಿತು. ಮೊಹಮ್ಮದ್ ನಬಿ ಭಕ್ಷ್ ಮತ್ತು ಮಣಿಂದರ್ ಸಿಂಗ್ ಅವರ ಬಲದಿಂದ ವಾರಿಯರ್ಸ್ 3–3ರ ಸಮಬಲ ಸಾಧಿಸಿತು. ಐದನೇ ನಿಮಿಷದಲ್ಲಿ ಮಣಿಂದರ್‌ ಸಿಂಗ್ 650 ರೇಡಿಂಗ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು. ನಂತರ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. 17ನೇ ನಿಮಿಷದಲ್ಲಿ ಬುಲ್ಸ್ ತಂಡವನ್ನು ಆಲ್ ಔಟ್ ಮಾಡಿದ ಎದುರಾಳಿಗಳು 16–15ರ ಮುನ್ನಡೆ ಸಾಧಿಸಿದರು.

ದ್ವಿತೀಯಾರ್ಧದಲ್ಲೂ ಭಾರಿ ಹೋರಾಟ ಕಂಡುಬಂತು.

ಪಟ್ನಾ ಪೈರೇಟ್ಸ್ ಜಯಭೇರಿ: ಅಂತಿಮ ಕ್ಷಣಗಳಲ್ಲಿ ರೇಡಿಂಗ್‌ನಲ್ಲೂ ಟ್ಯಾಕ್ಲಿಂಗ್‌ನಲ್ಲೂ ಕೆಚ್ಚೆದೆಯ ಪ್ರದರ್ಶನ ನೀಡಿದ ಪಟ್ನಾ ಪೈರೇಟ್ಸ್ ತಂಡ ಜೈಪುರ ಪಿಂಕಿತ್ ಪ್ಯಾಂಥರ್ಸ್ ಎದುರು 36–33ರಲ್ಲಿ ಜಯ ಗಳಿಸಿತು. ಆರಂಭದಲ್ಲಿ ಎರಡು ಪಾಯಿಂಟ್‌ಗಳಿಂದ ಮುನ್ನಡೆಯಲ್ಲಿದ್ದ ಜೈಪುರಕ್ಕೆ ನಂತರ ಪಟ್ನಾ ಪೆಟ್ಟು ನೀಡಿತು. ಎರಡನೇ ನಿಮಿಷದಲ್ಲಿ 2–2ರ ಸಮಬಲ ಸಾಧಿಸುವಲ್ಲಿ ಪಟ್ನಾ ಯಶಸ್ವಿಯಾಯಿತು. ನಂತರ ಒಂದೂವರೆ ನಿಮಿಷ ಪಂದ್ಯ 3–3ರ ಸಮಬಲದಲ್ಲಿ ಸಾಗಿತು. 10 ನಿಮಿಷಗಳ ಆಟದ ನಂತರ 7–7, 8–8, 9–9ರ ಸಮಬಲದಲ್ಲಿ ಪಂದ್ಯ ಸಾಗಿತು. ಹೀಗಾಗಿ ಪ್ರೇಕ್ಷಕರ ಕುತೂಹಲ ಹೆಚ್ಚಿತು. 15 ನಿಮಿಷಗಳ ಆಟ ಮುಕ್ತಾಯಗೊಂಡಾಗ 10–15ರ ಹಿನ್ನಡೆಯಲ್ಲಿದ್ದ ಪಟ್ನಾ ಮೊದಲಾರ್ಧದ ಮುಕ್ತಾಯಕ್ಕೆ ಹಿನ್ನಡೆಯನ್ನು 14–15ಕ್ಕೆ ಇಳಿಸುವಲ್ಲಿ ಯಶಸ್ವಿಯಾಯಿತು. 

ದ್ವಿತೀಯಾರ್ಧದ ಆರಂಭದಲ್ಲಿ ಜೈಪುರ ನಾಲ್ಕು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಭರವಸೆ ಮೂಡಿ ಸಿತು. ಕೊನೆಯ 11 ನಿಮಿಷಗಳ ವರೆಗೂ ಹಿನ್ನಡೆಯಲ್ಲಿದ್ದ ಪಟ್ನಾ 25–25ರ ಸಮಬಲ ಸಾಧಿಸಿದ ನಂತರ ಮುನ್ನಡೆಯತ್ತ ಹೆಜ್ಜೆ ಇರಿಸಿತು. ಆದರೆ 4 ನಿಮಿಷ ಬಾಕಿ ಇದ್ದಾಗ ಜೈಪುರ 29–29 ಮತ್ತು 30–30ರ ಸಮಬಲ ಸಾಧಿಸಿತು. ಆದರೆ ಪಟ್ಟು ಬಿಡದ ಪಟ್ನಾ ಗೆಲುವಿನ ನಗೆ ಸೂಸಿತು. ಪ್ರದೀಪ್ ನರ್ವಾಲ್ ಮತ್ತೊಮ್ಮೆ ಸೂಪರ್ ಟೆನ್ (14) ಸಾಧಿಸಿದರು. ಜಾಂಗ್ ಕುನ್ ಲಿ 8 ಮತ್ತು ನೀರಜ್ ಕುಮಾರ್ 6 ಪಾಯಿಂಟ್ ಗಳಿಸಿದರು. ಜೈಪುರ ಪರ ನಿತಿನ್ ರಾವಲ್ 6 ಪಾಯಿಂಟ್ ಗಳಿಸಿದರು.

ಪ್ರತಿಕ್ರಿಯಿಸಿ (+)