ಭಾನುವಾರ, ಡಿಸೆಂಬರ್ 8, 2019
20 °C
ಇಂದಿನಿಂದ ದೆಹಲಿಯಲ್ಲಿ ಹಣಾಹಣಿ; ರೋಹಿತ್ ಪಡೆಗೆ ಡೆಲ್ಲಿ ಸವಾಲು

ಪ್ರೊ ಕಬಡ್ಡಿ: ಸ್ಥಿರ ಪ್ರದರ್ಶನದತ್ತ ಬುಲ್ಸ್ ಕಣ್ಣು

Published:
Updated:
Prajavani

ನವದೆಹಲಿ: ಐದು ನಗರಗಳಲ್ಲಿ ಸಂಚಲನ ಮೂಡಿಸಿದ ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿ ಶನಿವಾರದಿಂದ ರಾಷ್ಟ್ರ ರಾಜಧಾನಿಯ ಕ್ರೀಡಾಪ್ರಿಯರಿಗೆ ರೋಮಾಂಚನ ನೀಡಲಿದೆ. ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದ ಒಳಾಂಗಣ ಕ್ರೀಡಾಂಗಣದಲ್ಲಿ ಆರು ದಿನ ಒಟ್ಟು 11 ಪಂದ್ಯಗಳು ನಡೆಯಲಿವೆ.

ನವದೆಹಲಿ ಲೆಗ್‌ನ ಮೊದಲ ಎರಡು ದಿನವೂ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಕಣಕ್ಕೆ ಇಳಿಯಲಿದೆ. ಮೊದಲ ದಿನ ಆತಿಥೇಯ ದಬಂಗ್ ಡೆಲ್ಲಿಯನ್ನು ಎದುರಿಸುವ ರೋಹಿತ್ ಕುಮಾರ್ ಬಳಗಕ್ಕೆ ಭಾನುವಾರ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರಾಳಿ.

ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬುಲ್ಸ್ (9 ಪಂದ್ಯ, 27 ಪಾಯಿಂಟ್ಸ್) ಮುಂದಿನ ವಾರ ತವರಿನ ಲೆಗ್‌ನ ಪಂದ್ಯಗಳನ್ನು ಆಡಲಿದೆ. ಅಗ್ರ ಸ್ಥಾನ ಗಳಿಸಿ ಬೆಂಗಳೂರಿಗೆ ಪಯಣ ಬೆಳೆಸುವ ಗುರಿಯೊಂದಿಗೆ ತಂಡ ಶನಿವಾರ ಕಣಕ್ಕೆ ಇಳಿಯಲಿದೆ.

ಆದರೆ ಮೊದಲ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್‌ (9 ಪಂದ್ಯ, 36 ಪಾಯಿಂಟ್ಸ್) ಹಾಗೂ ನಂತರದ ಸ್ಥಾನಗಳಲ್ಲಿರುವ ಬೆಂಗಾಲ್ ವಾರಿಯರ್ಸ್‌ (9 ಪಂದ್ಯ, 33 ಪಾಯಿಂಟ್ಸ್) ಮತ್ತು ದಬಂಗ್ ಡೆಲ್ಲಿ (7 ಪಂದ್ಯ, 29 ಪಾಯಿಂಟ್ಸ್‌) ತಂಡಗಳು ಬುಲ್ಸ್‌ ಹಾದಿಗೆ ಅಡ್ಡಿಯಾಗಿವೆ. ಆದರೂ ತನ್ನ ಪಾಲಿನ ಎರಡೂ ಪಂದ್ಯಗಳನ್ನು ಗೆದ್ದು ನಿರಾಳವಾಗಿ ‘ವಿಶ್ರಾಂತಿ’ ಪಡೆದುಕೊಳ್ಳಲು ಬುಲ್ಸ್ ಪ್ರಯತ್ನಿಸಲಿದೆ.

ತುರುಸಿನ ಪೈಪೋಟಿ ನಿರೀಕ್ಷೆ: ಶನಿವಾರದ ಮೊದಲ ಪಂದ್ಯದಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಸಂಘಟಿತ ಆಟದ ಮೂಲಕ ಈ ಬಾರಿ ಉತ್ತಮ ಸಾಮರ್ಥ್ಯ ಮೆರೆದಿರುವ ದಬಂಗ್‌ ಡೆಲ್ಲಿಗೆ ತವರಿನ ಪ್ರೇಕ್ಷಕರ ಬೆಂಬಲವಿದೆ. ಉತ್ತಮ ಆಟಗಾರರನ್ನು ಹೊಂದಿದ್ದರೂ ತಂತ್ರಗಳನ್ನು ಹೆಣೆಯುವಲ್ಲಿ ಎಡವುತ್ತಿರುವ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್‌ ಈ ವರೆಗೆ ಐದು ಪಂದ್ಯಗಳಲ್ಲಷ್ಟೇ ಗೆದ್ದಿದೆ.

ಡೆಲ್ಲಿಗೆ ಹೋಲಿಸಿದರೆ ಬುಲ್ಸ್‌ ಬಲಿಷ್ಠ ತಂಡ. ಪವನ್ ಶೆರಾವತ್‌ (9 ಪಂದ್ಯ, 112 ಪಾಯಿಂಟ್ಸ್‌) ಮತ್ತು ರೋಹಿತ್ ಕುಮಾರ್ ಅವರನ್ನೊಳಗೊಂಡ ರೇಡಿಂಗ್ ವಿಭಾಗ ಪಾಯಿಂಟ್‌ಗಳನ್ನು ಹೆಕ್ಕಲು ಸಮರ್ಥವಾಗಿದೆ. ಎಡ ಮತ್ತು ಬಲ ಕಾರ್ನರ್‌ಗಳಿಗೆ ಬಲ ತುಂಬಲು ಕ್ರಮವಾಗಿ ಮಹೇಂದರ್ ಸಿಂಗ್ ಮತ್ತು ಮೋಹಿತ್ ಶೆರಾವತ್ ಇದ್ದಾರೆ. ಡಿಫೆಂಡರ್ ಅಮಿತ್ ಶೆರಾನ್ (20 ಟ್ಯಾಕಲ್ ಪಾಯಿಂಟ್ಸ್) ಕೂಡ ಭರವಸೆ ಮೂಡಿಸಿದ್ದಾರೆ.

ಡೆಲ್ಲಿ ತಂಡದ ಚಂದ್ರನ್ ರಂಜಿತ್ ಮತ್ತು ನವೀನ್ ಕುಮಾರ್ ಅವರನ್ನು ಕಟ್ಟಿ ಹಾಕಲು ಬುಲ್ಸ್ ಟ್ಯಾಕ್ಲಿಂಗ್ ಪಡೆಗೆ ಸಾಧ್ಯವಾಗುವುದೋ ಎಂಬುದು ಕುತೂಹಲ ಕೆರಳಿಸಿದೆ. ಡೆಲ್ಲಿಯ ಭರವಸೆಯ ಡಿಫೆಂಡರ್‌ಗಳಾದ ರವೀಂದ್ರ ಪೆಹಲ್ (7 ಪಂದ್ಯ, 13 ಪಾಯಿಂಟ್ಸ್‌), ವಿಶಾಲ್ ಮಾನೆ (7 ಪಂದ್ಯ, 8 ಪಾಯಿಂಟ್ಸ್‌) ಮತ್ತು ಸೈಯದ್ ಗಫಾನಿ (6 ಪಂದ್ಯ, 8 ಪಾಯಿಂಟ್ಸ್‌) ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಹೀಗಾಗಿ ಬುಲ್ಸ್ ಹಾದಿ ಸುಲಭವಾಗುವ ಸಾಧ್ಯತೆ ಹೆಚ್ಚಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು