ಗುರುವಾರ , ಸೆಪ್ಟೆಂಬರ್ 19, 2019
21 °C

ಪ್ರೊ ಕಬಡ್ಡಿ: ದಬಂಗ್ ಡೆಲ್ಲಿ ಜಯಭೇರಿ

Published:
Updated:
Prajavani

ಕೋಲ್ಕತ್ತ: ನವೀನ್ ಕುಮಾರ್ ಅಮೋಘ ಆಟದ ಬಲದಿಂದ ದಬಂಗ್ ಡೆಲ್ಲಿ ತಂಡವು ಭಾನುವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ  ಪಂದ್ಯದಲ್ಲಿ ಜಯಿಸಿತು.

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡವು 50–34ರಿಂದ ತಮಿಳ್ ತಲೈವಾಸ್‌ ವಿರುದ್ಧ ಗೆದ್ದಿತು. ನವೀನ್ ಕುಮಾರ್ ಅವರು ರೇಡಿಂಗ್‌ನಲ್ಲಿ ಗಳಿಸಿದ 13 ಪಾಯಿಂಟ್ ಮತ್ತು ನಾಲ್ಕು ಬೋನಸ್‌ ಪಾಯಿಂಟ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಅವರೊಂದಿಗೆ ಮಿಂಚಿದ ಮೆರಾಜ್ ಶೇಖ್ 12 ಅಂಕ ಗಳಿಸಿ ತಂಡಕ್ಕೆ ಬಲ ತುಂಬಿದರು.

ರಕ್ಷಣಾ ವಿಭಾಗದಲ್ಲಿ ವಿಂಚಿದ ವಿಜಯ್, ಅನಿಲಕುಮಾರ್ ಮತ್ತು ರವೀಂದ್ರ ಪಹಾಲ್ ಅವರ ಆಟವು ಕೂಡ ಅಮೋಘವಾಗಿತ್ತು. ತಮಿಳ್ ತಂಡದ  ರೇಡರ್‌ಗಳನ್ನು ಹಿಡಿದು ಹಾಕುವಲ್ಲಿ ಸಫಲರಾದರು. ದಬಂಗ್ ತಂಡಕ್ಕೆ ರೇಡಿಂಗ್‌ ವಿಭಾಗದಿಂದ ಒಟ್ಟು 32 ಪಾಯಿಂಟ್ಸ್ ಬಂದವು. ಟ್ಯಾಕ್ಲಿಂಗ್‌ನಲ್ಲಿ ಎಂಟು ಪಾಯಿಂಟ್ಸ್‌ ಬಂದವು. ದಬಂಗ್ ರೇಡರ್‌ಗಳು ಎದುರಾಳಿಗಳ ಅಂಕಣವನ್ನು ಆರು ಬಾರಿ ಖಾಲಿ ಮಾಡಿದರು. ತಮಿಳ್ ಆಟಗಾರರು ಒಂದು ಸಲವೂ ಡೆಲ್ಲಿ ತಂಡವನ್ನು ಆಲೌಟ್ ಮಾಡಲಿಲ್ಲ.

ಸತತ ಸೋಲುಗಳಿಂದ ಕಂಗೆಟ್ಟಿರುವ ತಮಿಳು ತಲೈವಾಸ್ ತಂಡವು ಇಲ್ಲಿಯೂ ಎಡವಿತು. ರಾಹುಲ್ ಚೌಧರಿ ದಾಳಿಯಲ್ಲಿ ಗಳಿಸಿದ 14 ಪಾಯಿಂಟ್‌ಗಳು ತಂಡದ ಗೆಲುವಿಗೆ ಸಾಕಾಗಲಿಲ್ಲ. ಅಜಿತ್ ಕುಮಾರ್ (9 ಪಾಯಿಂಟ್) ಕೂಡ ಉತ್ತಮವಾಗಿ ಆಡಿದರು. ಆದರೆ ರಕ್ಷಣಾ ವಿಭಾಗವು ಕರಾರುವಾಕ್ ಆಟವಾಡಲಿಲ್ಲ. ಇದರಿಂದಾಗಿ ಜಯ ದೂರವುಳಿಯಿತು.

ಬೆಂಗಾಲ್ ತಂಡಕ್ಕೆ ರೋಚಕ ಜಯ: ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡವು 42–39ರಿಂದ ಪುಣೇರಿ ಪಲ್ಟನ್ ವಿರುದ್ಧ ರೋಚಕ ಜಯ ಸಾಧಿಸಿತು. ಮಣಿಂದರ್ ಸಿಂಗ್ (10 ಪಾಯಿಂಟ್‌) ಮತ್ತು ಇಸ್ಮಾಯಿಲ್ ನಬಿಭಕ್ಷ್ (6 ಪಾಯಿಂಟ್‌) ಅವರಿಬ್ಬರ ಚುರುಕಾದ ದಾಳಿಯಿಂದಾಗಿ ಬೆಂಗಾಲ್ ಗೆದ್ದಿತು. ಒಂದು ಹಂತದಲ್ಲಿ ಬೆಂಗಾಲ್ ತಂಡವು ಪುಣೇರಿಗಿಂತ ಹಿಂದಿತ್ತು. ಆದರೆ ಕೊನೆಯ ಐದು ನಿಮಿಷಗಳ ಆಟದಲ್ಲಿ ಫಲಿತಾಂಶ ತಿರುವುಮುರುವಾಯಿತು. ಪುಣೇರಿಯ ಪಂಕಜ್ ಮೋಹಿತೆ (10 ಪಾಯಿಂಟ್‌) ಮತ್ತು ಮಂಜೀತ್ (9 ಪಾಯಿಂಟ್‌) ಅವರ ಆಟವು ವ್ಯರ್ಥವಾಯಿತು.


ಬೆಂಗಾಲ್‌ ವಾರಿಯರ್ಸ್ ಹಾಗೂ ಪುಣೇರಿ ಪಲ್ಟನ್‌ ತಂಡಗಳ ನಡುವಿನ ಹಣಾಹಣಿ – ಪಿಟಿಐ ಚಿತ್ರ

Post Comments (+)