ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಶ್ವೆಗಳ ನಾಡಿನಲ್ಲಿ ಇಂದಿನಿಂದ ಕಬಡ್ಡಿ ಹಬ್ಬ

ಆತಿಥೇಯ ಪುಣೇರಿ ಪಲ್ಟನ್‌ಗೆ ಪುಟಿದೇಳುವ ತವಕ
Last Updated 13 ಸೆಪ್ಟೆಂಬರ್ 2019, 20:05 IST
ಅಕ್ಷರ ಗಾತ್ರ

ಪುಣೆ: ಪೇಶ್ವೆಗಳ ನಾಡು ಹಾಗೂ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿಯಾಗಿರುವ ಪುಣೆಯಲ್ಲಿ ಈಗ ಕಬಡ್ಡಿ ಹಬ್ಬ ಶುರುವಾಗಿದೆ.

ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಒಂಬತ್ತನೇ ಲೆಗ್‌ನ ಪಂದ್ಯಗಳಿಗೆ ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ವೇದಿಕೆ ಸಜ್ಜಾಗಿದೆ. ಲೀಗ್‌ನಲ್ಲಿ ಏಳು ಬೀಳಿನ ಹಾದಿಯಲ್ಲಿ ಸಾಗುತ್ತಿರುವ ಆತಿಥೇಯ ಪುಣೇರಿ ಪಲ್ಟನ್‌ ತಂಡ ತವರಿನಲ್ಲಿ ಪ್ರಾಬಲ್ಯ ಮೆರೆದು ‘ಪ್ಲೇ ಆಫ್‌’ ಕನಸಿಗೆ ಬಲ ತುಂಬಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಸುರ್ಜಿತ್‌ ಸಿಂಗ್‌ ನೇತೃತ್ವದ ಪುಣೇರಿ ತಂಡ ತವರಿನ ಲೆಗ್‌ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಸವಾಲು ಎದುರಿಸಲಿದೆ.

ಈ ಬಾರಿಯ ಲೀಗ್‌ನಲ್ಲಿ 14 ಪಂದ್ಯಗಳನ್ನು ಆಡಿರುವ ಸುರ್ಜಿತ್‌ ಪಡೆ ಕೇವಲ ನಾಲ್ಕರಲ್ಲಿ ಗೆದ್ದಿದೆ. ಒಟ್ಟು 29 ಪಾಯಿಂಟ್ಸ್‌ ಕಲೆಹಾಕಿರುವ ತಂಡವು ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ.

ಬೆಂಗಾಲ್‌ ವಾರಿಯರ್ಸ್‌ ಎದುರಿನ ಹಿಂದಿನ ಪಂದ್ಯದಲ್ಲಿ ಪುಣೇರಿ ತಂಡ ದಿಟ್ಟ ಸಾಮರ್ಥ್ಯ ತೋರಿತ್ತು. ಕೇವಲ ಮೂರು ಪಾಯಿಂಟ್ಸ್‌ಗಳಿಂದ ಸೋತಿತ್ತು. ಪ್ರಮುಖ ರೇಡರ್‌ ನಿತಿನ್‌ ತೋಮರ್‌ ಅನುಪಸ್ಥಿತಿ ಈ ತಂಡಕ್ಕೆ ಕಾಡುತ್ತಿದೆ. ಮಂಜೀತ್‌ ಮತ್ತು ಪಂಕಜ್‌ ಮೋಹಿತೆ ಉತ್ತಮ ಲಯದಲ್ಲಿರುವುದು ನಾಯಕ ಸುರ್ಜೀತ್ ಅವರ ಸಮಾಧಾನಕ್ಕೆ ಕಾರಣವಾಗಿದೆ. ಬೆಂಗಾಲ್‌ ಎದುರಿನ ಹಣಾಹಣಿಯಲ್ಲಿ ಇವರು ಸೂಪರ್‌–10 ಸಾಧನೆ ಮಾಡಿದ್ದರು.

ರಕ್ಷಣಾ ವಿಭಾಗದಲ್ಲಿ ಪುಣೇರಿ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡಬೇಕಿದೆ. ಗಿರೀಶ್‌ ಮಾರುತಿ ಎರ್ನಾಕ್‌ ಮತ್ತು ಹಾದಿ ತಜಿಕ್‌ ಅವರು ಬೆಂಗಾಲ್‌ ವಿರುದ್ಧ ತಲಾ ಮೂರು ಪಾಯಿಂಟ್ಸ್‌ ಗಳಿಸಿದ್ದರು. ಇವರಿಗೆ ನಾಯಕ ಸುರ್ಜೀತ್‌ ಅವರಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ಪಾಯಿಂಟ್ಸ್‌ ಪಟ್ಟಿಯಲ್ಲಿ ಎಂಟನೇ ಸ್ಥಾನ ಹೊಂದಿರುವ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಕೂಡ ಗೆಲುವಿನ ಮೇಲೆ ಕಣ್ಣಿಟ್ಟಿದೆ. ರೋಹಿತ್‌ ಗುಲಿಯಾ, ಸಚಿನ್‌ ತನ್ವರ್‌ ಮತ್ತು ಸುನಿಲ್‌ ಕುಮಾರ್‌ ಅವರು ಈ ತಂಡದ ‘ಸ್ಟಾರ್‌’ ಆಟಗಾರರಾಗಿದ್ದಾರೆ.

ಹಿಂದಿನ ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತಿರುವ ಗುಜರಾತ್‌ ತಂಡ ಪುಣೇರಿ ವಿರುದ್ಧವೂ ಪರಿಣಾಮಕಾರಿ ಸಾಮರ್ಥ್ಯ ತೋರಿದರೆ ಗೆಲುವು ಕಷ್ಟವಾಗಲಾರದು.

ಇಂದಿನ ಪಂದ್ಯಗಳು
ಪುಣೇರಿ ಪಲ್ಟನ್‌–ಗುಜರಾತ್‌ ಫಾರ್ಚೂನ್‌ಜೈಂಟ್ಸ್‌
ಆರಂಭ: ರಾತ್ರಿ 7.30

***
ತಮಿಳ್‌ ತಲೈವಾಸ್‌–ಹರಿಯಾಣ ಸ್ಟೀಲರ್ಸ್‌
ಆರಂಭ: ರಾತ್ರಿ 8.30
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT