ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಮುಂಬಾ, ಬೆಂಗಾಲ್‌ ಜಯಭೇರಿ | ಇಂದಿನಿಂದ ಪುಣೆಯಲ್ಲಿ ಪಂದ್ಯ

Last Updated 27 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ರೇಡರ್‌ಗಳಾದ ಗುಮಾನ್‌ ಸಿಂಗ್‌ ಮತ್ತು ಹೈದರಲಿ ಇಕ್ರಮಿ ಅವರ ಮಿಂಚಿನ ಆಟದ ನೆರವಿನಿಂದ ಯು ಮುಂಬಾ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೂರನೇ ಗೆಲುವು ಪಡೆದರು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯು ಮುಂಬಾ 37-29 ರಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿತು.

ಮೊದಲ 30 ನಿಮಿಷಗಳವರೆಗೆ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಕೊನೆಯಲ್ಲಿ ಅಮೋಘ ಆಟವಾಡಿದ ಮುಂಬಾ ತಂಡ ಗೆಲುವು ತನ್ನದಾಗಿಸಿಕೊಂಡಿತು.

ಗುಮಾನ್ ಸಿಂಗ್‌ 12 ಹಾಗೂ ಹೈದರಲಿ 10 ಪಾಯಿಂಟ್ಸ್‌ ತಂದಿತ್ತರು. ಮೊದಲಾರ್ಧ ಕೊನೆಗೊಂಡಾಗ 16–16 ರಲ್ಲಿ ಸಮಬಲ ಕಂಡುಬಂದಿತ್ತು. ಗುಜರಾತ್ ತಂಡಕ್ಕೆ ರಾಕೇಶ್ 12 ಪಾಯಿಂಟ್ಸ್‌ ತಂದಿತ್ತರು. ಅವರಿಗೆ ಇತರರಿಂದ ತಕ್ಕ ಸಾಥ್‌ ಸಿಗಲಿಲ್ಲ.

ದಿನದ ಎರಡನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ 35–30 ರಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ 15–13 ರಲ್ಲಿ ಮುನ್ನಡೆ ಸಾಧಿಸಿದ್ದ ಬೆಂಗಾಲ್‌ ಪರ ಮಣೀಂದರ್‌ ಸಿಂಗ್‌ 10 ಪಾಯಿಂಟ್ಸ್‌ ಗಳಿಸಿದರು.

ಇಂದಿನಿಂದ ಪುಣೆ ಲೆಗ್‌ ಆರಂಭ:
ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಲೆಗ್‌ನ ಪಂದ್ಯಗಳು ಬುಧವಾರ ಕೊನೆಗೊಂಡವು. ಅ.28 ರಿಂದ ಪುಣೆ ಲೆಗ್‌ ಆರಂಭವಾಗಲಿದ್ದು, ಬಾಳೇವಾಡಿಯಲ್ಲಿರುವ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಪಂದ್ಯಗಳು ಆಯೋಜನೆಯಾಗಿವೆ.

ಶುಕ್ರವಾರ ತಮಿಳ್ ತಲೈವಾಸ್‌– ಜೈಪುರ ಪಿಂಕ್‌ ಪ್ಯಾಂಥರ್ಸ್‌, ಹರಿಯಾಣ ಸ್ಟೀಲರ್ಸ್‌– ಪುಣೇರಿ ಪಲ್ಟನ್ ಮತ್ತು ಪಟ್ನಾ ಪೈರೇಟ್ಸ್‌– ಯು.ಪಿ. ಯೋಧಾಸ್‌ ತಂಡಗಳು ಪೈಪೋಟಿ ನಡೆಸಲಿವೆ.

ಬೆಂಗಳೂರು ಲೆಗ್‌ನ ಪಂದ್ಯಗಳ ಬಳಿಕ ದಬಾಂಗ್‌ ಡೆಲ್ಲಿ 27 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜೈಪುರ ಮತ್ತು ಬೆಂಗಳೂರು ಬುಲ್ಸ್‌ ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT