ಶನಿವಾರ, ಸೆಪ್ಟೆಂಬರ್ 21, 2019
21 °C

ಮ್ಯಾಟ್‌ನಲ್ಲೇ ನಿರ್ಧಾರವಾಗುತ್ತದೆ ತಂಡದ ಫೇಟ್

Published:
Updated:

ಲೀಗ್‌ನ ಏಳನೇ ಆವೃತ್ತಿಯಲ್ಲಿ ತಂಡದ ಸಾಮರ್ಥ್ಯವನ್ನು ಹೇಗೆ ಅಳೆಯುತ್ತೀರಿ? ಈ ಬಾರಿ ತಂಡದ ಸಾಧನೆ ಮತ್ತು ಲೋಪಗಳು ಏನೇನು?

ತಂಡದ ಆರಂಭ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಆದರೆ ಕ್ರಮೇಣ ಸುಧಾರಿಸಿಕೊಂಡಿದೆ. ಈಗ ಉತ್ತಮ ಸ್ಥಿತಿಯಲ್ಲೇ ಇದೆ. ಉತ್ತಮ ಆಟಗಾರರನ್ನು ಹೊಂದಿರುವ ತಂಡ ನಮ್ಮದು. ಎಲ್ಲರೂ ಅವರವರ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಈ ಆವೃತ್ತಿಯ ಆರಂಭಕ್ಕೆ ಮೊದಲೇ ಕಠಿಣ ಅಭ್ಯಾಸ ನಡೆಸಿದ್ದೇವೆ. ಇತರ ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮೇಲೆ ನಿಗಾ ಇರಿಸಿದ್ದೇವೆ. ಇದೆಲ್ಲವೂ ಈಗ ತಂಡದ ಕೈ ಹಿಡಿದಿದೆ.

ಈ ಬಾರಿ ಲೀಗ್ ಮಾದರಿಯಲ್ಲಿ ಮಾಡಿರುವ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಂಡ ಮತ್ತು ವೈಯಕ್ತಿಕ ನೆಲೆಯಲ್ಲಿ ಇದು ನೆರವಾಗಿದೆಯೇ?

ಹೊಸ ಮಾದರಿ ಎಲ್ಲ ತಂಡಗಳಿಗೂ ಅನುಕೂಲ ಮಾಡಿದೆ ಎಂದೆನಿಸುತ್ತದೆ. ತವರಿನ ಲೆಗ್ ನಲ್ಲಿ ಸಾಕಷ್ಟು ವಿಶ್ರಾಂತಿಗೆ ಅವಕಾಶ ಇರುವುದು ಈ ಬಾರಿಯ ವೈಶಿಷ್ಟ್ಯ. ಇದು, ಗಾಯಗಳಿಂದ ಬೇಗ ಗುಣಮುಖರಾಗಲು ಅನುಕೂಲ ಕಲ್ಪಿಸಲಿದೆ. ಪ್ರತಿ ತಂಡವೂ ಮತ್ತೊಂದು ತಂಡವನ್ನು ಎರಡು ಬಾರಿ ಎದುರಿಸಲು ಅವಕಾಶ ಇರುವುದು ಕೂಡ ಗಮನಾರ್ಹ. ಇದು, ಲೀಗ್‌ನ ದ್ವಿತೀಯಾರ್ಧವನ್ನು ಮತ್ತಷ್ಟು ರೋಮಾಂಚಕವಾಗಿಸಲಿದೆ.

ಈ ಬಾರಿ ಆರಂಭದ 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ಬುಲ್ಸ್ ನಂತರ ದಿಢೀರ್ ಕುಸಿತ ಕಂಡಿತು. ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ಆರಂಭದಿಂದ ಈ ವರೆಗೆ ತಂಡ ಮಿಶ್ರ ಫಲ ಕಂಡಿದೆ. ಕೆಲವು ದಿನಗಳು ನಮಗೆ ಅನುಕೂಲಕರವಾಗಿರುತ್ತವೆ. ಕೆಲವೊಮ್ಮೆ ಯಾವುದೂ ನಾವಂದುಕೊಂಡಂತೆ ಆಗುವುದಿಲ್ಲ. ಈಗ ತಂಡ ಲಯ ಕಂಡುಕೊಂಡಿದೆ. ಆದ್ದರಿಂದ ಉಳಿದಿರುವ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿ ಚಾಂಪಿಯನ್ ಪಟ್ಟದತ್ತ ಹೆಜ್ಜೆ ಹಾಕುವುದು ಧ್ಯೇಯ.

ಎರಡು ವರ್ಷ ತವರಿನ ಪಂದ್ಯಗಳನ್ನು ಹೊರಗೆ ಆಡಿದ ತಂಡ ಈಗ ನಿಜವಾಗಿಯೂ ತವರು ಬೆಂಗಳೂರಿನಲ್ಲಿ ಆಡುತ್ತಿದೆ. ಇಲ್ಲಿ ಆಡುವಾಗ ನಿಮಗೆ ಏನನಿಸುತ್ತಿದೆ?

ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಆಡುವುದರ ಖುಷಿಯೇ ಬೇರೆ. ಬೆಂಗಳೂರು ಲೆಗ್ ಸಮೀಪಿಸುತ್ತಿದ್ದಂತೆ ಸಾಮಾಜಿಕ ತಾಣಗಳ ನಮ್ಮ ಖಾತೆಗಳಿಗೆ ಹರಿದು ಬಂದ ಸಂದೇಶಗಳಿಗೆ ಲೆಕ್ಕವಿಲ್ಲ. ನೈಜ ತವರಿನಲ್ಲಿ ಆಡಲು ಕೊನೆಗೂ ಅವಕಾಶ ಲಭಿಸಿದ್ದು ಖುಷಿ ನೀಡಿದೆ.

ಈ ಬಾರಿ ವೈಯಕ್ತಿಕವಾಗಿ ನೀವು 10 ಪಂದ್ಯಗಳು ಮುಗಿದಾಗಲೇ 100ಕ್ಕೂ ಹೆಚ್ಚು ರೈಡ್ ಮಾಡಿದ್ದೀರಿ. ಆದರೆ ಕೆಲವು ಪಂದ್ಯಗಳಲ್ಲಿ ನೀವು ರೈಡಿಂಗ್ ನಿಂದ ಹಿಂದೆ ಸರಿದಿದ್ದೀರಿ. ಇದರ ಹಿಂದಿನ ಮರ್ಮವೇನು?

ತಂಡದ ನಿರ್ಧಾರ ಮತ್ತು ಕೋಚ್ ಸಲಹೆಯಂತೆ ಮ್ಯಾಟ್‌ನಲ್ಲಿ ತಂತ್ರಗಳನ್ನು ಹೆಣೆಯುತ್ತೇವೆ. ನಿರ್ದಿಷ್ಟ ಪಂದ್ಯದಲ್ಲಿ ನಿರ್ದಿಷ್ಟ ರೈಡರ್ ಹೆಚ್ಚು ಪಾಯಿಂಟ್ ಗಳಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಅವರನ್ನೇ ಹೆಚ್ಚು ಅವಲಂಬಿಸುತ್ತೇವೆ. ಪಂದ್ಯ ಗೆಲ್ಲುವುದೇ ಮುಖ್ಯ ಆಗಿರುವುದರಿಂದ ಕೆಲವು ಪಂದ್ಯಗಳಲ್ಲಿ ವೈಯಕ್ತಿಕ ರೈಡ್‌ಗಿಂತ ತಂಡದ ಕಾರ್ಯತಂತ್ರಗಳೇ ಮುಖ್ಯವಾಗುತ್ತವೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಪ್ರದೀಪ್ ನರ್ವಾಲ್ ಅವರನ್ನು ಹೊರತುಪಡಿಸಿದರೆ ರೈಡಿಂಗ್ ನಲ್ಲಿ ಹೆಚ್ಚು ದಾಖಲೆಗಳನ್ನು ಹೊಂದಿರುವವರು ನೀವು. 7ನೇ ಆವೃತ್ತಿಯ ಮುಂದಿನ ಪಂದ್ಯಗಳನ್ನು ಯಾವ ರೀತಿಯಲ್ಲಿ ಎದುರು ನೋಡುತ್ತೀರಿ?

ವೈಯಕ್ತಿಯ ದಾಖಲೆಗಳ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ. ಮ್ಯಾಟ್‌ಗೆ ಇಳಿದಾಗ ತಂಡವನ್ನು ಗೆಲ್ಲಿಸುವ ಗುರಿ ಒಂದೇ ಇರುತ್ತದೆ. ಈ ಬಾರಿಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದು ಮತ್ತು ತಂಡದ ಸಹ ಆಟಗಾರರಿಗೆ ಸರಿಯಾದ ಮಾರ್ಗದರ್ಶನ ನೀಡುವುದರ ಕಡೆಗೆ ಮಾತ್ರ ಹೆಚ್ಚು ಗಮನ ಹರಿಸಿದ್ದೇನೆ.

ನೀವು ಮತ್ತು ಪ್ರದೀಪ್ ನರ್ವಾಲ್ ವಿಶಿಷ್ಟವಾದ ರೈಡಿಂಗ್ ತಂತ್ರಗಳ ಮೂಲಕ ಗಮನ ಸೆಳೆದಿದ್ದೀರಿ. ನೀವು ಕಪ್ಪೆ ಜಿಗಿತ (ಫ್ರಾಗ್ ಜಂಪ್) ತಂತ್ರವನ್ನು ಹೇಗೆ ಅಳವಡಿಸಿಕೊಂಡಿರಿ? ಇದಕ್ಕೆ ಪ್ರತ್ಯೇಕ ತರಬೇತಿ ಇದೆಯೇ?

ಹೌದು. ಈ ತಂತ್ರವನ್ನು ಅಳವಡಿಸಿಕೊಳ್ಳಲು ವಿಶೇಷ ತರಬೇತಿ ಪಡೆದಿದ್ದೇನೆ. ಅದರಲ್ಲಿ ಪಾರಮ್ಯ ಸ್ಥಾಪಿಸಲು ಬಹಳಷ್ಟು ಬೆವರು ಸುರಿಸಿದ್ದೇನೆ. ಈ ಬಾರಿ ಲೀಗ್ ಆರಂಭಕ್ಕೆ ಮೊದಲು ನಡೆದ ವಿಶೇಷ ತರಬೇತಿ ಶಿಬಿರದಲ್ಲಿ ಕಪ್ಪೆ ಜಿಗಿತವನ್ನು ಹೆಚ್ಚು ಅಭ್ಯಾಸ ಮಾಡಿದ್ದೇನೆ.

ಎರಡು ಆವೃತ್ತಿಗಳಲ್ಲಿ ಪವನ್ ಶೆರಾವತ್ ತಂಡದ ಬಹುದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ತಂಡದ ನಾಯಕನಾಗಿ ಅವರ ಕುರಿತು ಏನು ಹೇಳಲು ಬಯಸುತ್ತೀರಿ?

ಅವರೊಬ್ಬ ಸ್ಟಾರ್ ಆಟಗಾರ. ತಂಡದ ಪರವಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವುದು ತುಂಬ ಖುಷಿಯ ವಿಷಯ. ವಿಶಿಷ್ಟ ರೈಡಿಂಗ್ ಸಾಮರ್ಥ್ಯ ಹೊಂದಿರುವ ಅವರೊಂದಿಗೆ ಆಡಲು ಸಂತಸವಾಗುತ್ತದೆ. ರೈಡಿಂಗ್ ಮೂಲಕ ಪಾಯಿಂಟ್ ಹೆಕ್ಕಿ ತರುವುದರೊಂದಿಗೆ ಟ್ಯಾಕ್ಲಿಂಗ್‌ನಲ್ಲೂ ನೆರವಾಗುತ್ತಾರೆ. ಅವರು ತಂಡದ ದೊಡ್ಡ ಆಸ್ತಿಯೇ.

ಪವನ್ ಶೆರಾವತ್ ತಂಡದ ಬೆನ್ನೆಲುಬು ಆಗಿದ್ದಾರೆ. ಕೆಲವೊಮ್ಮೆ ಅವರ ಮೇಲೆ ನಿರೀಕ್ಷೆಯ ಭಾರ ಹೆಚ್ಚು ಬಿದ್ದಂತೆ ಅನಿಸುತ್ತದೆ. ಇದು ಮಾರಕ ಪರಿಣಾಮ ಬೀರುವುದಿಲ್ಲವೇ?

ಉತ್ತಮ ಆಟಗಾರರ ಮೇಲೆ ತಂಡಕ್ಕೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಪವನ್ ಶೆರಾವತ್ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ. ತಂಡಕ್ಕೆ ಅಗತ್ಯ ಎನಿಸಿದಾಗ, ನಿರ್ಣಾಯಕ ಸಂದರ್ಭದಲ್ಲಿ ಅವರು ರೈಡಿಂಗ್ ಮಾಡಿ ಪಾಯಿಂಟ್ ಗಳಿಸುತ್ತಾರೆ.

ಅಂಕಿ ಅಂಶಗಳಲ್ಲಿ ರೋಹಿತ್ ಕುಮಾರ್‌

ಪಂದ್ಯ- 83
ರೈಡ್ಸ್‌- 1308
ಪಾಯಿಂಟ್ಸ್‌- 667
ಗರಿಷ್ಠ- 32
ಸೂಪರ್ ರೈಡ್‌ -14
ಸೂಪರ್ 10 - 25
ರೈಡ್ ಪಾಯಿಂಟ್ಸ್‌ -629

ಡಿಫೆನ್ಸ್‌ನಲ್ಲಿ ಮಾಡಿರುವ ಸಾಧನೆ

ಟ್ಯಾಕಲ್ -97
ಪಾಯಿಂಟ್ -38
ಸೂಪರ್ ಟ್ಯಾಕಲ್‌ -2
ಸ್ಟ್ರೈಕ್‌ರೇಟ್‌ -39.17%

(ಅಂಕಿ ಅಂಶಗಳು ಆಗಸ್ಟ್‌ 30ರ ವರೆಗಿನವು)

 

 

 

Post Comments (+)