ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ವಾರಿಯರ್ಸ್‌– ಯೋಧಾಸ್ ಪಂದ್ಯ ಟೈ

ಮಿಂಚಿದ ಮಣೀಂದರ್, ರೋಹಿತ್ ತೋಮರ್
Last Updated 8 ನವೆಂಬರ್ 2022, 20:32 IST
ಅಕ್ಷರ ಗಾತ್ರ

ಪುಣೆ: ಮಣೀಂದರ್‌ ಸಿಂಗ್‌ ಅವರು ದ್ವಿತೀಯಾರ್ಧದಲ್ಲಿ ತೋರಿದ ಅಮೋಘ ಆಟದ ನೆರವಿನಿಂದಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು.‍ಪಿ.ಯೋಧಾಸ್‌ ವಿರುದ್ದದ ಪಂದ್ಯವನ್ನು ‘ಟೈ’ ಮಾಡಿಕೊಂಡಿತು.

ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಹಣಾಹಣಿ 41–41 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು.

ರೋಹಿತ್‌ ತೋಮರ್‌ (16) ಮತ್ತು ಪ್ರದೀಪ್‌ ನರ್ವಾಲ್‌ (11) ಅವರ ಚುರುಕಿನ ರೇಡಿಂಗ್‌ ನೆರವಿನಿಂದ ಪ್ರಥಮಾರ್ಥದಲ್ಲಿ ಯೋಧಾಸ್‌ ತಂಡ 25–15 ರಲ್ಲಿ ಮುನ್ನಡೆ ಸಾಧಿಸಿ, ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ವಿರಾಮದ ಬಳಿಕ ಮಣೀಂದರ್‌, (18 ಪಾಯಿಂಟ್ಸ್) ಪಂದ್ಯದ ಗತಿಯನ್ನೇ ಬದಲಾಯಿಸಿದರು.

ಆಟದ ಆರಂಭದಲ್ಲಿ ಮೇಲುಗೈ ಸಾಧಿಸಿದ ಯೋಧಾಸ್‌ 4–0 ರಲ್ಲಿ ಮುನ್ನಡೆ ಪಡೆಯಿತು. ಐದನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಮುನ್ನಡೆಯನ್ನು 9–3ಕ್ಕೆ ಹೆಚ್ಚಿಸಿಕೊಂಡಿತು.

12ನೇ ನಿಮಿಷದಲ್ಲಿ ಮತ್ತೊಮ್ಮೆ ವಾರಿಯರ್ಸ್‌ ತಂಡವನ್ನು ಆಲೌಟ್ ಮಾಡಿ 20–7 ರಲ್ಲಿ ಮೇಲುಗೈ ಸಾಧಿಸಿತು. 10 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು.

ಆದರೆ ಎರಡನೇ ಅವಧಿಯಲ್ಲಿ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದ ವಾರಿಯರ್ಸ್‌ ತಂಡದವರು, ಹಿನ್ನಡೆಯ ಅಂತರ ತಗ್ಗಿಸುತ್ತಾ ಸಾಗಿದರು. ಯೋಧಾಸ್‌ ತಂಡವನ್ನು ಆಲೌಟ್‌ ಮಾಡಿ ಹಿನ್ನಡೆಯನ್ನು 33–34ಕ್ಕೆ ಕಡಿಮೆಗೊಳಿಸಿದರು.

ಕೊನೆಯ ನಿಮಿಷಗಳಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದರಿಂದ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತು.

ದಿನದ ಎರಡನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 40–33 ರಲ್ಲಿ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿತು.

ಇಂದಿನ ಪಂದ್ಯಗಳು

ಬೆಂಗಳೂರು ಬುಲ್ಸ್‌– ಹರಿಯಾಣ ಸ್ಟೀಲರ್ಸ್‌

ತಮಿಳ್‌ ತಲೈವಾಸ್‌– ಪುಣೇರಿ ಪಲ್ಟನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT