ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಸ್ಟೀಲರ್ಸ್‌ಗೆ ಗೆಲುವು

Last Updated 28 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ವಿಕಾಸ್ ಖಂಡೋಲ (8; 6 ಟಚ್ ಪಾಯಿಂಟ್ಸ್‌) ಮತ್ತು ಕನ್ನಡಿಗ ಪ್ರಶಾಂತ್ ಕುಮಾರ್ ರೈ (8 ಪಾಯಿಂಟ್ಸ್‌) ನಿರೀಕ್ಷೆ ಹುಸಿಗೊಳಿಸಲಿಲ್ಲ. ಗುಜರಾಜ್ ಫಾರ್ಚೂನ್‌ಜೈಂಟ್ಸ್‌ನ ಟ್ಯಾಕ್ಲಿಂಗ್‌ ವಿಭಾಗವನ್ನು ಕಂಗೆಡಿಸಿದ ಇವರಿಬ್ಬರಿಗೆ ವಿನಯ್‌ (7; 5 ಟಚ್ ಪಾಯಿಂಟ್ಸ್‌, 2 ಟ್ಯಾಕ್ಲಿಂಗ್ ಪಾಯಿಂಟ್ಸ್‌) ಅವರು ಉತ್ತಮ ಸಹಕಾರ ನೀಡಿದರು.

ಇದರ ಫಲವಾಗಿ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ಭರ್ಜರಿ ಜಯ ಗಳಿಸಿತು. ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ 41–24ರಲ್ಲಿ ಗೆಲುವು ಸಾಧಿಸಿತು.

ಮೊದಲ ರೈಡ್‌ನಿಂದಲೇ ವಿಕಾಸ್‌ ಪಾಯಿಂಟ್ ಗಳಿಸಲು ಆರಂಭಿಸಿದರು. ರೋಹಿತ್ ಗುಲಿಯಾ ಮತ್ತು ಅಬುಲ್ ಫಜಲ್ ಮಗ್‌ಶೊಡ್ಲು ಗಳಿಸಿದ ಪಾಯಿಂಟ್‌ಗಳ ಮೂಲಕ ಗುಜರಾತ್‌ ತಿರುಗೇಟು ನೀಡಿತು. ಕ್ರಮೇಣ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹರಿಯಾಣ ಆರನೇ ನಿಮಿಷದ ನಂತರ ಮುನ್ನಡೆಯನ್ನು ಹೆಚ್ಚಿಸುತ್ತ ಸಾಗಿತು.

12ನೇ ನಿಮಿಷದಲ್ಲಿ ಸೂಪರ್ ರೈಡ್ ಮೂಲಕ ಮೂವರನ್ನು ಔಟ್‌ ಮಾಡಿದ ವಿಕಾಸ್ ಎದುರಾಳಿ ತಂಡದ ಅಂಗಣವನ್ನು ಖಾಲಿ ಮಾಡಿದರು. ಆಗ ತಂಡದ ಮುನ್ನಡೆ 15–7 ಆಯಿತು. ಮೊದಲಾರ್ಧದ ಮುಕ್ತಾಯಕ್ಕೆ ಹರಿಯಾಣ 9 ಪಾಯಿಂಟ್‌ಗಳ (20–11) ಮುನ್ನಡೆ ಗಳಿಸಿತು.

ಮತ್ತೆ ಮತ್ತೆ ಆಲ್ ಔಟ್‌: 21ನೇ ನಿಮಿಷದಲ್ಲಿ ವಿಕಾಸ್ ಖಂಡೋಲ ಎದುರಾಳಿ ಆವರಣದಲ್ಲಿ ಸೂಪರ್ ಟ್ಯಾಕಲ್‌ ಬಲೆಗೆ ಬಿದ್ದರು. ಈ ಟ್ಯಾಕಲ್ ಮೂಲಕ ಜಿ.ಬಿ.ಮೋರೆ ಪ್ರೊ ಕಬಡ್ಡಿ ಲೀಗ್‌ನಲ್ಲಿ 150 ಪಾಯಿಂಟ್‌ಗಳನ್ನು ತಮ್ಮದಾಗಿಸಿಕೊಂಡರು. 24ನೇ ನಿಮಿಷದಲ್ಲಿ ಗುಜರಾತ್‌ನ ಪ್ರವೀಣ್ ಬೈನ್ಸ್‌ವಾಲ್‌ ಅವರನ್ನು ಔಟ್ ಮಾಡುವ ಮೂಲಕ ವಿಕಾಸ್‌ ಎದುರಾಳಿಗಳನ್ನು ಮತ್ತೊಮ್ಮೆ ಆಲ್‌ ಔಟ್ ಮಾಡಿದರು.

30ನೇ ನಿಮಿಷದಲ್ಲಿ ವಿನಯ್ ಕೂಡ ‘ಸೂಪರ್ ರೈಡ್‌’ ಮಾಡಿದರು. ಗುಜರಾತ್ ಮೂರನೇ ಬಾರಿ ಆಲ್‌ ಔಟ್ ಆಯಿತು. 37–16ರ ಮುನ್ನಡೆ ಸಾಧಿಸಿದ ಹರಿಯಾಣ ನಂತರ ಹಿಂದಿರುಗಿ ನೋಡಲಿಲ್ಲ. ಗುಜರಾತ್ ಪರ ಅಬುಲ್‌ ಫಜಲ್, ಜಿ.ಬಿ.ಮೋರೆ ಮತ್ತು ರೋಹಿತ್ ಗುಲಿಯಾ ತಲಾ 4 ಪಾಯಿಂಟ್ ಕಲೆ ಹಾಕಿದರು.

ತವರಿನಲ್ಲಿ ದಬಂಗ್ ಹ್ಯಾಟ್ರಿಕ್: ನವೀನ್ ಕುಮಾರ್ (11; 10 ಟಚ್ ಪಾಯಿಂಟ್ಸ್‌) ಮತ್ತು ರವೀಂದ್ರ ಪೆಹಲ್ (8 ಟ್ಯಾಕಲ್ ಪಾಯಿಂಟ್ಸ್) ಅವರ ಅಮೋಘ ಆಟದ ಮೂಲಕ ಎರಡನೇ ಪಂದ್ಯದಲ್ಲಿ ಆತಿಥೇಯ ದಬಂಗ್ ಡೆಲ್ಲಿ 40–24ರಲ್ಲಿ ಯು.ಮುಂಬಾ ಎದುರು ಜಯ ಗಳಿಸಿತು. ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿತು.

ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ತಂಡ ಬೆಂಗಳೂರು ಬುಲ್ಸ್‌ (33–31) ಮತ್ತು ಯು.ಪಿ.ಯೋಧಾವನ್ನು (36–27) ಮಣಿಸಿತ್ತು.

ನವೀನ್ ಕುಮಾರ್ ಸತತ ಎಂಟು ಬಾರಿ ಸೂಪರ್ 10 ಸಾಧನೆ ಮಾಡಿ ಪ್ರದೀಪ್ ನರ್ವಾಲ್ ಅವರ ಹೆಸರಿನಲ್ಲಿರುವ ದಾಖಲೆಯನ್ನು ಸರಿಕಟ್ಟಿದರು.

ಈ ಜಯದೊಂದಿಗೆ ದಬಂಗ್ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು. ತಂಡದ ಖಾತೆಯಲ್ಲಿ ಈಗ 45 ಪಾಯಿಂಟ್‌ಗಳಿದ್ದು 37 ಪಾಯಿಂಟ್‌ಗಳೊಂದಿಗೆ ಜೈಪುರ ಪಿಂಕ್‌ ಪ್ಯಾಂಥರ್ಸ್ ಎರಡನೇ ಸ್ಥಾನದಲ್ಲಿ ಮತ್ತು 36 ಪಾಯಿಂಟ್‌ಗಳೊಂದಿಗೆ ಹರಿಯಾಣ ಸ್ಟೀಲರ್ಸ್ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT