ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಬೆಂಗಳೂರು–ಡೆಲ್ಲಿ ಪಂದ್ಯ ಟೈ

Last Updated 23 ಸೆಪ್ಟೆಂಬರ್ 2019, 18:23 IST
ಅಕ್ಷರ ಗಾತ್ರ

ಜೈಪುರ: ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯಲ್ಲಿ ‘ಸೂಪರ್ ಟೆನ್’ ಪ್ರವೀಣ ಎಂದೇ ಹೆಸರು ಗಳಿಸಿರುವ ಪವನ್ ಶೆರಾವತ್ (17; 11 ಟಚ್, 4 ಬೋನಸ್‌, 2 ಟ್ಯಾಕಲ್) ಸೋಮವಾರ ಮತ್ತೊಮ್ಮೆ ಮಿನುಗಿದರು. ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಅವರ ಅಬ್ಬರದ ಆಟ, ಬೆಂಗಳೂರು ಬುಲ್ಸ್ ತಂಡಕ್ಕೆ ದಬಂಗ್ ಡೆಲ್ಲಿ ವಿರುದ್ಧ 39–39ರ ಟೈ ಸಾಧಿಸಲು ನೆರವಾಯಿತು.

ನವೀನ್ ಕುಮಾರ್ (14 ಪಾಯಿಂಟ್ಸ್‌) ಮತ್ತು ಚಂದ್ರನ್ ರಂಜಿತ್ (5) ಅವರ ರೇಡಿಂಗ್ ಹಾಗೂ ರವೀಂದ್ರ ಪೆಹಲ್ ಮತ್ತು ಅನಿಲ್ ಕುಮಾರ್ (ತಲಾ 4) ಅವರ ಟ್ಯಾಕ್ಲಿಂಗ್ ಬಲದಿಂದ ಡೆಲ್ಲಿ ತಂಡ ತೀವ್ರ ಪೈಪೋಟಿ ನೀಡಿದರೂ ಕೊನೆಯ ನಿಮಿಷಗಳಲ್ಲಿ ಬೆಂಗಳೂರು ತಂಡ ಹೂಡಿದ ತಂತ್ರಗಳು ಫಲಿಸಿದವು. ಸೋಲಿನ ದವಡೆಯಿಂದ ಬಚಾವಾದ ಬೆಂಗಳೂರು ಟೈಯೊಂದಿಗೆ ನಿಟ್ಟುಸಿರು ಬಿಟ್ಟಿತು.

ಹರಿಯಾಣ ಸ್ಟೀಲರ್ಸ್ ಜಯಭೇರಿ: ಮೊದಲ ಪಂದ್ಯದಲ್ಲಿ ವಿಕಾಸ್ ಖಂಡೋಲ ಮತ್ತು ಪ್ರದೀಪ್ ನರ್ವಾಲ್ ‘ಸೂಪರ್ ರೇಡ್‌’ಗಳ ಮೂಲಕ ಮಿಂಚಿದರು. ವಿಕಾಸ್ ಖಂಡೋಲ (13; 12 ಟಚ್ ಪಾಯಿಂಟ್ಸ್) ಅವರ ಹರಿಯಾಣ ಸ್ಟೀಲರ್ಸ್ 39–34ರಲ್ಲಿ ಜಯಭೇರಿ ಮೊಳಗಿಸಿತು. ಪ್ರದೀಪ್ ನರ್ವಾಲ್ (17; 13 ಟಚ್ ಪಾಯಿಂಟ್ಸ್‌, 4 ಬೋನಸ್) ‘ಸೂಪರ್ ಟೆನ್’ ಸಾಧಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಆಗಲಿಲ್ಲ.

‌ಪಂದ್ಯದ ಆರಂಭದಲ್ಲಿ ಪಟ್ನಾ ಪೈರೇಟ್ಸ್‌ ಮುನ್ನಡೆ ಸಾಧಿಸಿತು. ಆದರೆ 2ನೇ ನಿಮಿಷದಿಂದ 5ನೇ ನಿಮಿಷದ ವರೆಗೆ ಪಂದ್ಯ 2–2, 3–3ರ ಸಮಬಲದಲ್ಲಿ ಸಾಗಿತು. ನಂತರ ಒಮ್ಮೆ ಸ್ಟೀಲರ್ಸ್‌, ಮತ್ತೊಮ್ಮೆ ಪೈರೇಟ್ಸ್‌ ಮುನ್ನಡೆ ಸಾಧಿಸುತ್ತ ಸಾಗಿತು. ನಡುವೆ 5–5, 6–6ರಲ್ಲಿ ಸಮಬಲವೂ ಆಯಿತು.

9ನೇ ನಿಮಿಷದಲ್ಲಿ ಮೋನು ಮತ್ತು ಹಾದಿ ಒಶ್ತಾಕ್ ಅವರನ್ನು ಔಟ್ ಮಾಡಿದ ವಿಕಾಸ್ ಖಂಡೋಲ ಎದುರಾಳಿ ಅಂಗಣವನ್ನು ಆಲ್ ಔಟ್ ಮಾಡಿದರು. ಆಗ ಸ್ಟೀಲರ್ಸ್ ಮುನ್ನಡೆ 11–6ಕ್ಕೆ ಏರಿತು. 10ನೇ ನಿಮಿಷದಲ್ಲಿ ಪ್ರದೀಪ್ ನರ್ವಾಲ್ ಈ ಆವೃತ್ತಿಯಲ್ಲಿ 25 ಬೋನಸ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು.

17–15ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಸ್ಟೀಲರ್ಸ್‌ ದ್ವಿತೀಯಾರ್ಧದಲ್ಲಿ ಮುನ್ನಡೆಯನ್ನು ಉಳಿಸಿಕೊಂಡಿತು.26ನೇ ನಿಮಿಷದಲ್ಲಿ ಪಟ್ನಾ ಎರಡನೇ ಬಾರಿ ಆಲ್ ಔಟ್ ಆಯಿತು. 10 ನಿಮಿಷ ಬಾಕಿ ಇದ್ದಾಗ ‘ಸೂಪರ್ ರೇಡ್’ ಮೂಲಕ ರಂಜಿಸಿದ ಪ್ರದೀಪ್ ನರ್ವಾಲ್ 7 ನಿಮಿಷ ಇದ್ದಾಗ ‘ಸೂಪರ್ ಟೆನ್’ ಪೂರೈಸಿದರು.

ಆದರೆ 3 ನಿಮಿಷ ಇದ್ದಾಗ ಪಟ್ನಾ ಮೂರನೇ ಬಾರಿ ಆಲ್‌ ಔಟ್ ಆಯಿತು. ಸ್ಟೀಲರ್ಸ್‌ ಮುನ್ನಡೆ 38–29ಕ್ಕೆ ಏರಿತು. ಚೇತರಿಸಿಕೊಂಡ ಪಟ್ನಾ ತಿರುಗೇಟು ನೀಡಿದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT