ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್

ಇಂದಿನಿಂದ ಎಂಟನೇ ಆವೃತ್ತಿ ಆರಂಭ
Last Updated 22 ಡಿಸೆಂಬರ್ 2021, 11:07 IST
ಅಕ್ಷರ ಗಾತ್ರ

ಬೆಂಗಳೂರು:ಎಂಟನೇ ಆವೃತ್ತಿಯು ಪ್ರೊ ಕಬಡ್ಡಿ ಲೀಗ್‌ ಬುಧವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಯು ಮುಂಬಾ ತಂಡಕ್ಕೆ ಸವಾಲೊಡ್ಡಲಿದೆ.

ಕೋವಿಡ್‌ ಕಾರಣ ಬಯೋಬಬಲ್‌ನಲ್ಲಿ ಟೂರ್ನಿಯುವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್‌ ಹೊಟೇಲ್ ಸಭಾಂಗಣದಲ್ಲಿ ನಿಗದಿಯಾಗಿದೆ. 12 ತಂಡಗಳು ಟೂರ್ನಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಮಶಾಲ್‌ ಸ್ಪೋರ್ಟ್ಸ್ ಆಯೋಜಿಸುತ್ತಿರುವ ಟೂರ್ನಿಯಲ್ಲಿ ರೌಂಡ್‌ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಯ ಮೊದಲು ನಾಲ್ಕು ದಿನಗಳು ‘ಟ್ರಿಪಲ್ ಹೆಡರ್‌’ (ಪ್ರತಿದಿನ ಮೂರು ಪಂದ್ಯಗಳು) ನಡೆಯಲಿದ್ದು, ಬಳಿಕ ಪ್ರತಿ ಶನಿವಾರ ಮೂರು ಪಂದ್ಯಗಳು ಆಯೋಜನೆಯಾಗಲಿವೆ. ಸೆಮಿಫೈನಲ್‌ ಮತ್ತು ಫೈನಲ್ ಸೇರಿ ಒಟ್ಟು 137 ಪಂದ್ಯಗಳು ನಡೆಯಲಿದ್ದು, ಸದ್ಯ 66 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಮೊದಲಾರ್ಧದ ಪಂದ್ಯಗಳು ಜನವರಿ 20ವರೆಗೆ ನಡಯಲಿವೆ.

ಬೆಂಗಳೂರು ಬುಲ್ಸ್‌ಗೆ ಈ ಬಾರಿ ಸ್ಟಾರ್‌ ರೈಡರ್‌ ಪವನ್ ಕುಮಾರ್‌ ಶೆರಾವತ್‌ ನಾಯಕನಾಗಿದ್ದು, ಹೊಸ ಹುರುಪಿನೊಂದಿಗೆ ಟೂರ್ನಿಗೆ ಸಜ್ಜಾಗಿದೆ.

ಅನುಭವಿ ಚಂದ್ರನ್ ರಂಜೀತ್ ತಂಡದಲ್ಲಿರುವುದರಿಂದ ಬುಲ್ಸ್‌ ಬಲ ವೃದ್ಧಿಸಿದೆ. ಕಳೆದ ಬಾರಿ ದಬಾಂಗ್ ಡೆಲ್ಲಿ ತಂಡದಲ್ಲಿದ್ದ ರಂಜೀತ್‌ ಮಿಂಚಿನ ಸಾಮರ್ಥ್ಯ ತೋರಿದ್ದರು. ಡಿಫೆನ್ಸ್‌ ವಿಭಾಗದಲ್ಲಿ ಅಮಿತ್ ಶೆರಾನ್‌, ಸೌರಭ್ ನಂದಾಲ್‌ ಹಾಗೂ ಮಹೇಂದ್ರ ಸಿಂಗ್‌ ತಂಡದ ಶಕ್ತಿಯಾಗಿದ್ದಾರೆ. ಕಳೆದ ಬಾರಿ ಬೆಂಗಳೂರು ತಂಡದ ನಾಯಕರಾಗಿದ್ದ ರೋಹಿತ್ ಕುಮಾರ್‌ ಈ ಸಲ ತೆಲುಗು ಟೈಟನ್ಸ್ ಸಾರಥ್ಯ ವಹಿಸಿದ್ದಾರೆ.

ಯು ಮುಂಬಾ ತಂಡಕ್ಕೆ ಫಜಲ್ ಅತ್ರಾಚಲಿ ಶಕ್ತಿ ತುಂಬಲಿದ್ದಾರೆ. ಅವರ ಡಿಫೆನ್ಸ್ ಸಾಮರ್ಥ್ಯವು ಬುಲ್ಸ್ ತಂಡಕ್ಕೆ ಅಗ್ನಿಪರೀಕ್ಷೆಯಾಗುವ ನಿರೀಕ್ಷೆಯಿದೆ. ಅಭಿಷೇಕ್‌ ಹಾಗೂ ಅಜಿತ್‌ ರೈಡಿಂಗ್‌ನಲ್ಲಿ ಬಲ ತುಂಬಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್– ತಮಿಳ್ ತಲೈವಾಸ್‌ ಸೆಣಸಲಿದ್ದರೆ, ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಯುಪಿ ಯೋಧಾ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT