ಪ್ರೊ ಕಬಡ್ಡಿ: ದಬಂಗ್‌ ಡೆಲ್ಲಿ ಎದುರು ಫಾರ್ಚೂನ್‌ಜೈಂಟ್ಸ್‌ ಪರಾಕ್ರಮ

7

ಪ್ರೊ ಕಬಡ್ಡಿ: ದಬಂಗ್‌ ಡೆಲ್ಲಿ ಎದುರು ಫಾರ್ಚೂನ್‌ಜೈಂಟ್ಸ್‌ ಪರಾಕ್ರಮ

Published:
Updated:
Deccan Herald

ಗ್ರೇಟರ್‌ ನೋಯ್ಡಾ: ರೈಡರ್‌ ಡಾಂಗ್‌ ಗೆವೊನ್‌, ಭಾನುವಾರ ಶಾಹೀದ್‌ ವಿಜಯ್‌ ಸಿಂಗ್‌ ಕ್ರೀಡಾ ಸಂಕೀರ್ಣದಲ್ಲಿ ಮೋಡಿ ಮಾಡಿದರು.

ಡಾಂಗ್‌ ಅವರ ಅಮೋಘ ಆಟದಿಂದಾಗಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿಯ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿತು.

‘ಎ’ ವಲಯದ ಹಣಾಹಣಿಯಲ್ಲಿ ಫಾರ್ಚೂನ್‌ಜೈಂಟ್ಸ್‌ 45–38 ಪಾಯಿಂಟ್ಸ್‌ನಿಂದ ದಬಂಗ್‌ ಡೆಲ್ಲಿ ತಂಡವನ್ನು ಸೋಲಿಸಿತು.

15 ರೈಡ್‌ಗಳನ್ನು ಮಾಡಿದ ಡಾಂಗ್‌ 10 ಪಾಯಿಂಟ್ಸ್‌ ಗಳಿಸಿದರು. ಇದರಲ್ಲಿ ಮೂರು ಬೋನಸ್‌ ಅಂಕಗಳು ಸೇರಿದ್ದವು. ರೋಹಿತ್‌ ಗುಲಿಯಾ ಮತ್ತು ಪರ್ವೇಶ್‌ ಬೈನ್ಸ್‌ವಾಲ್‌ ಕ್ರಮವಾಗಿ ಏಳು ಮತ್ತು ಆರು ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು.

ಆರಂಭದಿಂದಲೇ ಚುರುಕಿನ ಆಟಕ್ಕೆ ಅಣಿಯಾದ ಫಾರ್ಚೂನ್‌ಜೈಂಟ್ಸ್‌ ತಂಡ ನಾಲ್ಕನೇ ನಿಮಿಷದ ವೇಳೆಗೆ 7–1ರಿಂದ ಮುನ್ನಡೆ ಗಳಿಸಿತು. ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ ಮಿಂಚಿದರು. ನಂತರವೂ ಫಾರ್ಚೂನ್‌ಜೈಂಟ್ಸ್‌ ಪರಾಕ್ರಮ ಮುಂದುವರಿಯಿತು. 10 ನಿಮಿಷಗಳ ಆಟ ಮುಗಿದಾಗ ಈ ತಂಡ 15–8ರಿಂದ ಮುಂದಿತ್ತು.

ನಂತರ ದಬಂಗ್‌ ಡೆಲ್ಲಿ ರಕ್ಷಣಾ ವಿಭಾಗದಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿ ಹಿನ್ನಡೆಯನ್ನು 15–18ಕ್ಕೆ ತಗ್ಗಿಸಿಕೊಂಡಿತು. ಬಳಿಕ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. 27–18ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಫಾರ್ಚೂನ್‌ಜೈಂಟ್ಸ್‌ ದ್ವಿತೀಯಾರ್ಧದಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿತು.

ಎದುರಾಳಿ ರೈಡರ್‌ಗಳನ್ನು ರಕ್ಷಣಾ ಬಲೆಯೊಳಗೆ ಬಂಧಿಸಿದ ಸಚಿನ್‌, ರುತುರಾಜ್‌ ಮತ್ತು ಸಚಿನ್‌ ವಿಠಲ್‌ ಅವರು ಗುಜರಾತ್‌ ತಂಡದ ಗೆಲುವಿನ ಹಾದಿಯನ್ನು ಸುಗಮ ಮಾಡಿದರು.

ದಬಂಗ್ ತಂಡದ ಚಂದ್ರನ್‌ ರಂಜಿತ್‌ ಮತ್ತು ನವೀನ್‌ ಕುಮಾರ್‌ ಕ್ರಮವಾಗಿ 11 ಮತ್ತು 8 ಪಾಯಿಂಟ್ಸ್‌ ಗಳಿಸಿದರು. ಇತರ ಆಟಗಾರರಿಂದ ಇವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !