ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಕ್‌ ಪ್ಯಾಂಥರ್ಸ್‌ ಬೇಟೆಯಾಡಿದ ಯೋಧಾ

ಪ್ರೊ ಕಬಡ್ಡಿ ಲೀಗ್‌: ದೀಪಕ್‌ ಹೋರಾಟ ವ್ಯರ್ಥ: ಅಭಿಮಾನಿಗಳ ಮನಗೆದ್ದ ರಿಷಾಂಕ್‌, ಶ್ರೀಕಾಂತ್ ಆಟ
Last Updated 16 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಪುಣೆ: ಮಿಂಚಿನ ವೇಗದ ದಾಳಿಗಳ ಮೂಲಕ ಎದುರಾಳಿಗಳ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದ ಶ್ರೀಕಾಂತ್‌ ಜಾಧವ್‌ (9 ಪಾಯಿಂಟ್ಸ್‌) ಮತ್ತು ರಿಷಾಂಕ್‌ ದೇವಾಡಿಗ (8 ಪಾಯಿಂಟ್ಸ್‌) ಯು.ಪಿ.ಯೋಧಾ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಪಂದ್ಯದಲ್ಲಿ ನಿತೇಶ್‌ ಕುಮಾರ್‌ ನೇತೃತ್ವದ ಯೋಧಾ 38–32 ಪಾಯಿಂಟ್ಸ್‌ನಿಂದ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಪರಾಭವಗೊಳಿಸಿತು.

ಈ ಆವೃತ್ತಿಯ ಆರಂಭದಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಜೈಪುರ ವಿರುದ್ಧ ಗೆದ್ದಿದ್ದ ಯೋಧಾ ತಂಡ ವಿಶ್ವಾಸದ ಉತ್ತುಂಗದಲ್ಲಿರುವಂತೆ ಕಂಡಿತು. ತಾವು ಮಾಡಿದ ಮೊದಲ ರೇಡ್‌ನಲ್ಲೇ ರಿಷಾಂಕ್‌ ದೇವಾಡಿಗ ಪಾಯಿಂಟ್‌ ಹೆಕ್ಕಿದರು. ಎರಡನೇ ನಿಮಿಷದಲ್ಲಿ ಜೈಪುರ ತಂಡದ ಸುಶೀಲ್ ಗುಲಿಯಾ ‘ಸೂಪರ್‌ ರೇಡ್‌’ ಮಾಡಿದಾಗ ಮೈದಾನದಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಯಿತು. ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಜೈಪುರ 3–1 ಮುನ್ನಡೆ ಪಡೆಯಿತು. ನಂತರದ ನಾಲ್ಕು ನಿಮಿಷಗಳಲ್ಲಿ ಸಮಬಲದ ಹೋರಾಟ ಕಂಡುಬಂತು. ಬಳಿಕ ಯೋಧಾ ಮೇಲುಗೈ ಸಾಧಿಸಿತು. 12ನೇ ನಿಮಿಷದಲ್ಲಿ ಎದುರಾಳಿಗಳ ಆವರಣ ಖಾಲಿ ಮಾಡಿದ ನಿತೇಶ್‌ ಪಡೆ 12–6ರಿಂದ ಮುನ್ನಡೆ ಗಳಿಸಿ ಗೆಲುವಿನ ಕನಸಿಗೆ ಬಲ ತುಂಬಿಕೊಂಡಿತು.

ಬಳಿಕ ದೀಪಕ್‌ ಹೂಡಾ ಅವರ ಆಲ್‌ರೌಂಡ್‌ ಆಟದ ಸೊಬಗು ಅನಾವರಣಗೊಂಡಿತು. ಚುರುಕಿನ ರೇಡ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅವರು ಪಿಂಕ್‌ ಪ್ಯಾಂಥರ್ಸ್‌ ಹಿನ್ನಡೆಯನ್ನು 10–14ಕ್ಕೆ ತಗ್ಗಿಸಿದರು. 18ನೇ ನಿಮಿಷದಲ್ಲಿ ಯೋಧಾ ತಂಡದ ಶ್ರೀಕಾಂತ್‌ ಜಾಧವ್‌ ಮೋಡಿ ಮಾಡಿದರು. ‘ಸೂಪರ್‌ ರೇಡ್‌’ ಮೂಲಕ ಮೈದಾನದಲ್ಲಿ ಮೆಕ್ಸಿಕನ್‌ ಅಲೆ ಎಬ್ಬಿಸಿದ ಅವರು ತಂಡದ ಮುನ್ನಡೆಯನ್ನು 18–11ಕ್ಕೆ ಏರಿಸಿದರು. ಮೊದಲಾರ್ಧದ ಆಟ ಮುಗಿಯಲು ಕೇವಲ 15 ಸೆಕೆಂಡುಗಳು ಬಾಕಿ ಇದ್ದಾಗ ಯಶಸ್ವಿ ರೇಡ್‌ ಮಾಡಿದ ರಿಷಾಂಕ್‌, ಯೋಧಾ ಖಾತೆಗೆ ಮತ್ತೆರಡು ಪಾಯಿಂಟ್ಸ್‌ ಸೇರಿಸಿದರು.

20–13ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ನಿತೇಶ್‌ ಬಳಗ, ದ್ವಿತೀಯಾರ್ಧದಲ್ಲೂ ಜಾದೂ ಮಾಡಿತು. 24ನೇ ನಿಮಿಷದಲ್ಲಿ ‘ಡೂ ಆರ್‌ ಡೈ’ ರೇಡ್‌ ಮಾಡಿದ ರಿಷಾಂಕ್‌, ಎರಡು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡರು. ಆಗ ಜೈಪುರ ಎರಡನೇ ಸಲ ಆಲ್‌ಔಟ್‌ ಆಗುವ ಭೀತಿ ಎದುರಿಸಿತ್ತು. ಈ ಹಂತದಲ್ಲಿ ನಾಯಕ ದೀಪಕ್‌, ಜೈಪುರ ತಂಡಕ್ಕೆ ಆಪತ್ಬಾಂಧವರಾದರು. 25ನೇ ನಿಮಿಷದಲ್ಲಿ ‘ಸೂಪರ್‌ ಟ್ಯಾಕಲ್‌’ ಮಾಡಿದ ಅವರು ರೇಡಿಂಗ್‌ನಲ್ಲೂ ಮಿಂಚಿದರು. ಟಚ್‌ ಮತ್ತು ಬೋನಸ್‌ ಪಾಯಿಂಟ್ಸ್‌ಗಳನ್ನು ತಂಡದ ಖಾತೆಗೆ ಸೇರಿಸಿ ಹಿನ್ನಡೆಯನ್ನು 17–24ಕ್ಕೆ ತಗ್ಗಿಸಿದರು. ಅವರ ಏಕಾಂಗಿ ಹೋರಾಟ ಹೆಚ್ಚು ಹೊತ್ತು ನಡೆಯಲಿಲ್ಲ. 27ನೇ ನಿಮಿಷದಲ್ಲಿ ರೇಡ್‌ಗೆ ಹೋದ ಅವರು ಯೋಧಾ ಆಟಗಾರರು ಬೀಸಿದ ರಕ್ಷಣಾ ಬಲೆಯೊಳಗೆ ಬಂದಿಯಾದರು. ಜೈಪುರ ಎರಡನೇ ಸಲ ಆಲ್‌ಔಟ್‌ ಆಯಿತು. ಮುನ್ನಡೆಯನ್ನು 29–21ಕ್ಕೆ ಹಿಗ್ಗಿಸಿಕೊಂಡ ಯೋಧಾ ತಂಡ ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು. ಕೊನೆಯ ಐದು ನಿಮಿಷಗಳಲ್ಲಿ ತುರುಸಿನ ಪೈಪೋಟಿ ಕಂಡುಬಂತು. ರಕ್ಷಣಾ ವಿಭಾಗದಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ ದೀಪಕ್‌ ಪಡೆ ಸೋಲಿನ ಸುಳಿಗೆ ಸಿಲುಕಿತು.

ಡೆಲ್ಲಿ ಜಯಭೇರಿ: ದಬಂಗ್‌ ಡೆಲ್ಲಿ ತಂಡ ಮತ್ತೆ ಜಯಭೇರಿ ಮೊಳಗಿಸಿತು. ದಿನದ ಎರಡನೇ ಪಂದ್ಯದಲ್ಲಿ 37–29ರಿಂದ ತೆಲುಗು ಟೈಟನ್ಸ್‌ ವಿರುದ್ಧ ಗೆದ್ದ ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT