ಮಂಗಳವಾರ, ಜನವರಿ 18, 2022
15 °C
ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಜಯಭೇರಿ- ಪವನ್, ಚಂದ್ರನ್ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮತ್ತೆ ಮಿಂಚಿದ ಪವನ್ ಶೆರಾವತ್ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ಜಯಭೇರಿ ಬಾರಿಸಿತು. 

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬೆಂಗಳೂರು ತಂಡವು 40–29ರಿಂದ ಪುಣೇರಿ ಪಲ್ಟನ್ ವಿರುದ್ಧ ಗೆದ್ದಿತು. ಟೂರ್ನಿಯಲ್ಲಿ ಬೆಂಗಳೂರು ತಂಡಕ್ಕೆ ಇದು ನಾಲ್ಕನೇ ಜಯ. 

ಮೊದಲಾರ್ಧದ ವಿರಾಮದ ವೇಳೆಗೆ ಪುಣೇರಿ ತಂಡವು 18–13ರಿಂದ ಮುನ್ನಡೆ ಸಾಧಿಸಿತ್ತು.  

ವಿರಾಮದ ನಂತರ ತಿರುಗೇಟು ನೀಡಿದ ಪವನ್ ಬಳಗವು ಪುಣೇರಿಗೆ ಸೋಲಿನತ್ತ ತಳ್ಳಿತು. ಈ ಅವಧಿಯಲ್ಲಿ 27 ಪಾಯಿಂಟ್ಸ್‌ ಹೆಕ್ಕಿದ ಬೆಂಗಳೂರು ತಂಡವು ದೊಡ್ಡ ಅಂತರದ ಜಯ ಸಾಧಿಸಿತು. 

ಅದರಲ್ಲಿ ಪವನ್ ಶೆರಾವತ್ ಮತ್ತು  ಚಂದ್ರನ್ ರಂಜೀತ್  (6 ಅಂಕ) ಅವರ ಆಟ ಮಹತ್ವದ್ದಾಗಿತ್ತು. ಅವರಿಗೆ ಭರತ್ (5) ಕೂಡ ಉತ್ತಮ ಜೊತೆ ನೀಡಿದರು.

ರಕ್ಷಣಾ ವಿಭಾಗದಲ್ಲಿ ಸೌರಭ್ ನಂದಲ್ (4), ಮೋಹಿತ್ ಶೇರಾವತ್ (3) ಮತ್ತು ಅಮನ್ (4) ಕೂಡ ಎದುರಾಳಿ ರೇಡರ್‌ಗಳಿಗೆ ಕಡಿವಾಣ ಹಾಕಿದರು. ಪುಣೇರಿ ತಂಡದ ಅಸ್ಲಂ ಆರು ಅಂಕ ಗಳಿಸಿದರು. 

ಸ್ಟೀಲರ್ಸ್‌ಗೆ ರೋಚಕ ಜಯ: ನಾಯಕ ವಿಕಾಸ್ ಖಂಡಾಲಾ ಮತ್ತು ಮೀಟು ಅವರ ಅಮೋಘ ಆಟದಿಂದ ಹರಿಯಾಣ ಸ್ಟೀಲರ್ಸ್ ತಂಡವು ರೋಚಕ ಜಯ ಸಾಧಿಸಿತು. 

ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ತಂಡವು 38–36ರಿಂದ ಗುಜರಾತ್ ಜೈಂಟ್ಸ್‌ ವಿರುದ್ಧ ಗೆದ್ದಿತು. 

ರೇಡಿಂಗ್‌ನಲ್ಲಿ ವಿಕಾಸ್ ಹನ್ನೊಂದು ಅಂಕಗಳನ್ನು ಗಳಿಸಿದರು. ಆಲ್‌ರೌಂಡರ್ ಮೀಟು ಕೂಡ 10 ಅಂಕ ಗಳಿಸಿ ತಂಡದ ಬಲ ಹೆಚ್ಚಿಸಿದರು. 

ಹರಿಯಾಣ ತಂಡವು ಮೊದಲಾರ್ಧದ ವಿರಾಮದ ವೇಳೆಗೆ 22–10ರಿಂದ ಮುನ್ನಡೆ ಸಾಧಿಸಿತ್ತು. ಆದರೆ ವಿರಾಮದ ನಂತರ ಗುಜರಾತ್ ತಂಡವು ತಿರುಗೇಟು ನೀಡಿತು. ಕಠಿಣ ಪೈಪೋಟಿಯೊಡ್ಡಿದ ತಂಡವು ಒಂದು ಹಂತದಲ್ಲಿ ಸಮಬಲ ಸಾಧಿಸಿತ್ತು. ತಂಡದ ಆಲ್‌ರೌಂಡರ್ ರಾಕೇಶ್ 19 ಅಂಕಗಳನ್ನು ಗಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು