ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹಿತ್ ‘ಸೂಪರ್‌’ ಆಟ: ಪುಣೇರಿ ಜಯಭೇರಿ

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಅಜಯ್ ಕುಮಾರ್ ಹೋರಾಟ ವ್ಯರ್ಥ
Last Updated 5 ಜನವರಿ 2022, 16:28 IST
ಅಕ್ಷರ ಗಾತ್ರ

ಬೆಂಗಳೂರು: ಮೋಹಿತ್‌ ಗೋಯತ್‌ ಅವರ‘ಸೂಪರ್ 10‘ ಆಟದ ಬಲದಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜಯಭೇರಿ ಮೊಳಗಿಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್‌ ಹೊಟೇಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಬುಧವಾರ 33–26ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.

ಒಟ್ಟು 18 ರೇಡ್ ಮಾಡಿದ ಮೋಹಿತ್‌ 10 ಟಚ್‌ ಪಾಯಿಂಟ್ಸ್‌ ಗಳಿಸಿದರು. ಅಸ್ಲಂ ಇನಾಂದಾರ್‌ ಎಂಟು ಪಾಯಿಂಟ್ಸ್ ಕಲೆಹಾಕಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಗುಜರಾತ್‌ ಪರ ರೇಡಿಂಗ್‌ನಲ್ಲಿ ಅಜಯ್ ಕುಮಾರ್‌ ಸೂಪರ್ 10 ಸಾಧಿಸಿದರು. ರಾಕೇಶ್‌ ಕೂಡ ಎಂಟು ಪಾಯಿಂಟ್ಸ್ ಗಳಿಸಿ ಮಿಂಚಿದರು.

ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಪುಣೇರಿ ಮೊದಲಾರ್ಧದ ಮುಕ್ತಾಯದ ವೇಳೆಗೆ 19–13ರಿಂದ ಮುಂದಿತ್ತು. ಇದರಲ್ಲಿ 13 ಪಾಯಿಂಟ್ಸ್ ರೇಡಿಂಗ್ ಮೂಲಕವೇ ಬಂದವು. ದ್ವಿತೀಯಾರ್ಧದಲ್ಲಿ ಗುಜರಾತ್ ಹೋರಾಟ ತೋರಿದರೂ ಎದುರಾಳಿಯ ಸವಾಲು ಮೀರಲು ಸಾಧ್ಯವಾಗಲಿಲ್ಲ.

ಈ ಆವೃತ್ತಿಯಲ್ಲಿ ಪುಣೇರಿಗೆ ಇದು ಎರಡನೇ ಜಯವಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ತಂಡವು 11ನೇ ಸ್ಥಾನದಲ್ಲಿದೆ. ಗುಜರಾತ್‌ ಎಂಟನೇ ಸ್ಥಾನದಲ್ಲಿದೆ.

ನವೀನ್ ಮಿಂಚು;ದಬಂಗ್ ಅಜೇಯ ಓಟ: ಇನ್ನೊಂದು ಪಂದ್ಯದಲ್ಲಿ ಯುವ ಆಟಗಾರ ನವೀನ್ ಕುಮಾರ್ (25 ಪಾಯಿಂಟ್ಸ್) ಅಬ್ಬರದ ಆಟದ ನೆರವಿನಿಂದ ದಬಂಗ್ ಡೆಲ್ಲಿ ಅಜೇಯ ಓಟವನ್ನು ಮುಂದುವರಿಸಿತು. ರೋಚಕ ಹೋರಾಟದಲ್ಲಿ 36–35ರಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು.

15 ಟಚ್‌ ಪಾಯಿಂಟ್ಸ್ ಗಳಿಸಿದ ನವೀನ್‌, 10 ಬೋನಸ್‌ ಪಾಯಿಂಟ್ಸ್‌ ಕಲೆಹಾಕಿದರು. ಟೈಟನ್ಸ್ ಪರ ರಜನೀಶ್‌ (20 ಪಾಯಿಂಟ್ಸ್) ಮಿನುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT