ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಸ್‌–ಗುಜರಾತ್‌ ಫೈನಲ್‌ ‘ಫೈಟ್‌’

ಪ್ರೊ ಕಬಡ್ಡಿ ಲೀಗ್‌: ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತ ಯು.ಪಿ.ಯೋಧಾ ತಂಡ
Last Updated 3 ಜನವರಿ 2019, 19:57 IST
ಅಕ್ಷರ ಗಾತ್ರ

ಮುಂಬೈ: ಬೆಂಗಳೂರು ಬುಲ್ಸ್‌ ಮತ್ತು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದವರು ‍ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಉಭಯ ತಂಡಗಳ ನಡುವಣ ಫೈನಲ್‌ ‘ಫೈಟ್‌’ ಶನಿವಾರ ನಡೆಯಲಿದೆ. ಬುಲ್ಸ್‌ ಮತ್ತು ಫಾರ್ಚೂನ್‌ಜೈಂಟ್ಸ್‌ ಈ ಬಾರಿಯ ಮೊದಲ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಎದುರಾಗಿದ್ದವು. ಆಗ ರೋಹಿತ್‌ ಕುಮಾರ್‌ ಸಾರಥ್ಯದ ಬೆಂಗಳೂರಿನ ತಂಡ ಗೆಲುವಿನ ತೋರಣ ಕಟ್ಟಿತ್ತು.

ಹೀಗಾಗಿ ಶನಿವಾರದ ಹೋರಾಟ ಕುತೂಹಲದ ಗಣಿಯಾಗಿದೆ.

ಗುರುವಾರ ನಡೆದ ಎರಡನೇ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಫಾರ್ಚೂನ್‌ಜೈಂಟ್ಸ್‌ 38–31 ಪಾಯಿಂಟ್ಸ್‌ನಿಂದ ಯು.ಪಿ.ಯೋಧಾ ತಂಡವನ್ನು ಪರಾಭವಗೊಳಿಸಿತು.

ಗುಜರಾತ್‌ ತಂಡದ ಸಚಿನ್‌ ಮಿಂಚಿದರು. ಅವರು ಒಟ್ಟು 10 ಪಾಯಿಂಟ್ಸ್‌ ಕಲೆಹಾಕಿದರು. ಯೋಧಾ ಪರ ನಿತೇಶ್‌ ಕುಮಾರ್‌ ಗಮನ ಸೆಳೆದರು. ಅವರು ಟ್ಯಾಕ್ಲಿಂಗ್‌ನಲ್ಲಿ ಆರು ಪಾಯಿಂಟ್ಸ್‌ ಗಳಿಸಿದರು. ಈ ಮೂಲಕ ಪ್ರೊ ಕಬಡ್ಡಿ ಲೀಗ್‌ವೊಂದರಲ್ಲಿ ಒಟ್ಟು 100 ಟ್ಯಾಕ್ಲಿಂಗ್ ಪಾಯಿಂಟ್ಸ್‌ ಕಲೆಹಾಕಿದ ಮೊದಲ ಆಟಗಾರ ಎಂಬ ಹಿರಿಮೆಗೆ ಭಾಜನರಾದರು.

ಹಿಂದಿನ ಎರಡು ಎಲಿಮಿನೇಟರ್‌ ಹಣಾಹಣಿಗಳಲ್ಲಿ ಗೆದ್ದು ಕ್ವಾಲಿಫೈಯರ್‌ಗೆ ಅರ್ಹತೆ ಗಳಿಸಿದ್ದ ರಿಷಾಂಕ್ ದೇವಾಡಿಗ ಸಾರಥ್ಯದ ಯೋಧಾ ತಂಡ ಉತ್ತಮ ಆರಂಭ ಕಂಡಿತು. ಕರ್ನಾಟಕದ ಪ್ರಶಾಂತ್‌ ಕುಮಾರ್‌ ರೈ ಮೊದಲ ರೇಡ್‌ನಲ್ಲೇ ಎರಡು ಪಾಯಿಂಟ್‌ ಹೆಕ್ಕಿ 2–1ರ ಮುನ್ನಡೆ ತಂದುಕೊಟ್ಟರು.

ಇದರ ಬೆನ್ನಲ್ಲೇ ಗುಜರಾತ್‌ ತಂಡದ ಸಚಿನ್‌ ಮಿಂಚಿದರು. ಅವರು ರೇಡಿಂಗ್‌ನಲ್ಲಿ ಎರಡು ಪಾಯಿಂಟ್‌ ಹೆಕ್ಕಿದ್ದರಿಂದ ಫಾರ್ಚೂನ್‌ಜೈಂಟ್ಸ್‌ 4–2 ಮುನ್ನಡೆ ಪಡೆಯಿತು. ಐದು ನಿಮಿಷಗಳ ಆಟ ಮುಗಿದಾಗ ಉಭಯ ತಂಡಗಳು 5–5ರಲ್ಲಿ ಸಮಬಲ ಹೊಂದಿದ್ದವು.

ಎಂಟನೇ ನಿಮಿಷದಲ್ಲಿ ಪ್ರಪಾಂಜನ್‌ ಎರಡು ಪಾಯಿಂಟ್‌ ಗಳಿಸಿ ಅಭಿಮಾನಿಗಳನ್ನು ರಂಜಿಸಿದರು. ನಂತರ ಮತ್ತಷ್ಟು ಪರಿಣಾಮಕಾರಿಯಾಗಿ ಆಡಿದ ಫಾರ್ಚೂನ್‌ಜೈಂಟ್ಸ್‌ ನಾಲ್ಕು ‍ಪಾಯಿಂಟ್ಸ್‌ಗಳ ಮುನ್ನಡೆ ತನ್ನದಾಗಿಸಿಕೊಂಡಿತು. ಬಳಿಕ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಹೀಗಾಗಿ 11–11 ಸಮಬಲ ಕಂಡುಬಂತು.

16ನೇ ನಿಮಿಷದಲ್ಲಿ ಎದುರಾಳಿಗಳನ್ನು ಆಲೌಟ್‌ ಮಾಡಿ ಲೋನಾ ಪಾಯಿಂಟ್‌ ಕಲೆಹಾಕಿದ ಗುಜರಾತ್‌ ತಂಡ 19–14ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಫಾರ್ಚೂನ್‌ಜೈಂಟ್ಸ್‌ ಪರಾಕ್ರಮ ಮುಂದುವರಿಯಿತು. ಸಚಿನ್‌ ಮತ್ತು ಪ್ರಪಾಂಜನ್‌ ಅವರು ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಪಾಯಿಂಟ್ಸ್‌ ಹೆಕ್ಕಿದರು. ಹೀಗಾಗಿ ತಂಡ ಮುನ್ನಡೆಯನ್ನು 29–14ಕ್ಕೆ ಹೆಚ್ಚಿಸಿಕೊಂಡು ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು.

29ನೇ ನಿಮಿಷದಲ್ಲಿ ಯು.ಪಿ.ಯೋಧಾ ಎರಡನೇ ಬಾರಿ ಆಲೌಟ್‌ ಆಯಿತು. ನಂತರ ಈ ತಂಡ ಚೇತರಿಕೆಯ ಆಟ ಆಡಿತು. ಶ್ರೀಕಾಂತ್‌ ಜಾಧವ್‌ ಯಶಸ್ವಿ ರೇಡ್‌ಗಳನ್ನು ಮಾಡಿ ಈ ತಂಡಕ್ಕೆ ಬಲ ತುಂಬಿದರು.

36ನೇ ನಿಮಿಷದ ಆಟ ಮುಗಿದಾಗ ಯೋಧಾ ತಂಡ ಐದು ಪಾಯಿಂಟ್ಸ್‌ಗಳಿಂದ ಹಿಂದಿತ್ತು. ನಂತರ ಗುಜರಾತ್‌ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿ ಗೆಲುವಿನ ತೋರಣ ಕಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT