ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿಯಲ್ಲಿ ರೇಡಿಂಗ್ ಕಿಂಗ್‌; ಮಣಿಂದರ್‌ ಸಿಂಗ್‌

Last Updated 22 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಯಶಸ್ವಿ ರೇಡರ್‌ಗಳಲ್ಲಿ ಪಂಜಾಬ್‌ನ ಮಣಿಂದರ್‌ ಸಿಂಗ್‌ ಕೂಡಾ ಒಬ್ಬರು. ಪಿಕೆಎಲ್‌ ಮೂಲಕ ಕಬಡ್ಡಿ ಲೋಕಕ್ಕೆ ಪರಿಚಿತರಾಗಿರುವ 29ರ ಹರೆಯದ ಮಣಿಂದರ್, ಲೀಗ್‌ನಲ್ಲಿ ಅತಿವೇಗವಾಗಿ 500 ರೇಡಿಂಗ್‌ ಪಾಯಿಂಟ್ಸ್ ಗಳಿಸಿ (56 ಪಂದ್ಯ) ದಾಖಲೆ ನಿರ್ಮಿಸಿದ್ದಾರೆ. ಮೊದಲ ಆವೃತ್ತಿಯಲ್ಲಿ ಮೋಡಿ ಮಾಡಿದ್ದ ಅವರು ಗಾಯದ ಕಾರಣ ನಂತರದ ಮೂರು ಆವೃತ್ತಿಗಳಿಗೆ ಅಲಭ್ಯರಾಗಿದ್ದರು. ಐದನೇ ಆವೃತ್ತಿಯಲ್ಲಿ (2017) ಮತ್ತೆ ಕಬಡ್ಡಿ ಅಂಗಳಕ್ಕೆ ಮರಳಿ ಅರಳಿದ್ದರು. ಆ ವರ್ಷ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡದಲ್ಲೂ ಆಡಿದ್ದರು. ಪಿಕೆಎಲ್‌ನಲ್ಲಿ ಅತಿವೇಗವಾಗಿ 600 ಪಾಯಿಂಟ್ಸ್‌ ಗಳಿಸಿದ ಎರಡನೇ ಆಟಗಾರ ಎಂಬ ಹಿರಿಮೆ ಹೊಂದಿರುವ ಮಣಿಂದರ್‌, ಈ ಬಾರಿ ಬೆಂಗಾಲ್ ವಾರಿಯರ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ಪಿಕೆಎಲ್‌ ಮೊದಲ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಹಿಂದಿನ ಆವೃತ್ತಿಯಲ್ಲಿ ಬೆಂಗಾಲ್‌ ವಾರಿಯರ್ಸ್‌ ಪರ ಅತಿ ಹೆಚ್ಚು ಪಾಯಿಂಟ್ಸ್‌ ಗಳಿಸಿದ್ದಿರಿ. ಈ ಸಲವೂ ರೇಡಿಂಗ್‌ನಲ್ಲಿ ಮೋಡಿ ಮಾಡುತ್ತಿದ್ದೀರಿ. ನಿಮ್ಮ ಯಶಸ್ಸಿನ ಹಿಂದಿನ ಗುಟ್ಟೇನು?

ಪಂಜಾಬ್‌ ಪೊಲೀಸ್‌ನಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿರುವುದರಿಂದ ವಿವಿಧ ಟೂರ್ನಿಗಳಲ್ಲಿ ನಿರಂತರವಾಗಿ ಆಡಬೇಕಾಗುತ್ತದೆ. ಹೀಗಾಗಿ ಪ್ರೊ ಕಬಡ್ಡಿ ಮುಗಿದ ಬಳಿಕವೂ ಕಠಿಣ ಅಭ್ಯಾಸ ನಡೆಸುತ್ತೇನೆ. ಮುಖ್ಯ ಕೋಚ್‌ ಪರಮ್‌ಜೀತ್‌ ಸಿಂಗ್‌ ಹೇಳಿಕೊಡುವ ಹೊಸ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವತ್ತಲೂ ಗಮನ ಹರಿಸುತ್ತೇನೆ. ಹೀಗಾಗಿ ಪಿಕೆಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗುತ್ತಿದೆ.

ಪಿಕೆಎಲ್‌ನಲ್ಲಿ ಬೆಂಗಾಲ್‌ ವಾರಿಯರ್ಸ್‌ ಒಮ್ಮೆಯೂ ಟ್ರೋಫಿ ಜಯಿಸಿಲ್ಲ. ನಿಮ್ಮ ನಾಯಕತ್ವದಲ್ಲಿ ಪ್ರಶಸ್ತಿ ಕನಸು ಸಾಕಾರಗೊಳ್ಳಬಹುದೇ?

ಹಿಂದೆ ಎರಡು ಸಲ ಸೆಮಿಫೈನಲ್‌ ಪ್ರವೇಶಿಸಿ ಸೋತಿದ್ದೆವು. ಪ್ರಮುಖ ಆಟಗಾರರು ಗಾಯಗೊಂಡಿದ್ದರಿಂದ ಹಿನ್ನಡೆ ಎದುರಾಗಿತ್ತು. ಈ ಸಲ ತಂಡ ಬಲಿಷ್ಠವಾಗಿದೆ. ಆಟಗಾರರೆಲ್ಲಾ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಲು ಸಾಧ್ಯವಾಗುತ್ತಿದೆ. ಇದೇ ಪ್ರದರ್ಶನವನ್ನು ಮುಂದುವರಿಸಿಕೊಂಡು ಸಾಗಿದರೆ ಪ್ರಶಸ್ತಿ ಗೆಲ್ಲುವುದು ಕಷ್ಟವಾಗಲಾರದು.

ಈ ಸಲ ನಿಮ್ಮ ತಂಡಕ್ಕೆ ಹೊಸ ಕೋಚ್‌ ನೇಮಕವಾಗಿದ್ದಾರೆ. ಅವರ ತಂತ್ರಗಾರಿಕೆ ಬಗ್ಗೆ ಹೇಳಿ?

ಬಿ.ಸಿ.ರಮೇಶ್‌ ಅವರು ಈ ಹಿಂದೆ ಭಾರತದ ಪರ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಕೋಚ್‌ ಆಗಿಯೂ ಸಾಕಷ್ಟು ಅನುಭವ ಹೊಂದಿದ್ದಾರೆ. ಜೊತೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತರು ಕೂಡಾ. ಹಿಂದಿನ ಆವೃತ್ತಿಗಳಲ್ಲಿ ನಾವು ಫಿಟ್‌ನೆಸ್‌ನತ್ತ ಮಾತ್ರ ಚಿತ್ತ ಹರಿಸುತ್ತಿದ್ದೆವು. ರಮೇಶ್‌ ಅವರು ಕೌಶಲಗಳನ್ನು ಹೇಳಿಕೊಡುವುದರತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆಟಗಾರರ ತಪ್ಪುಗಳನ್ನು ಗುರುತಿಸಿ ತಿದ್ದುತ್ತಾರೆ. ಹಿಂದಿನ ಆವೃತ್ತಿಯಲ್ಲಿ ನಮ್ಮ ತಂಡದಲ್ಲಿ ಮೂವರು ರೇಡರ್‌ಗಳಿದ್ದರು. ರೇಡರ್‌ಗಳು ತಂಡದ ಬೆನ್ನೆಲುಬು ಎಂಬುದನ್ನು ರಮೇಶ್‌ ಅವರು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿಯೇ ಈ ಸಲದ ಹರಾಜಿನಲ್ಲಿ ಆರು ರೇಡರ್‌ಗಳನ್ನು ಸೆಳೆದುಕೊಂಡಿದ್ದಾರೆ. ರೇಡರ್‌ಗಳು ಮತ್ತು ರಕ್ಷಣಾ ವಿಭಾಗದ ಆಟಗಾರರಿಗೆ ಪ್ರತ್ಯೇಕವಾಗಿ ತರಬೇತಿ ನೀಡುತ್ತಾರೆ. ಇದು ಅವರ ಕೋಚಿಂಗ್‌ನ ವಿಶೇಷ.

ರನ್ನಿಂಗ್‌ ಹ್ಯಾಂಡ್‌ ಟಚ್‌ ಹಾಗೂ ಎದುರಾಳಿ ಆಟಗಾರರ ರಕ್ಷಣಾ ಬಲೆಯಿಂದ ಸುಲಭವಾಗಿ ತಪ್ಪಿಸಿಕೊಂಡು ಬರುವ ಕಲೆಯನ್ನು ನೀವು ಸಿದ್ಧಿಸಿಕೊಂಡಿದ್ದು ಹೇಗೆ?

ಪಂಜಾಬ್‌ನಲ್ಲಿ ‘ಸರ್ಕಲ್‌ ಕಬಡ್ಡಿ’ ಹೆಚ್ಚು ಪ್ರಸಿದ್ಧವಾಗಿದೆ. ನಾನು ಹಿಂದೆಲ್ಲಾ ಸರ್ಕಲ್‌ ಕಬಡ್ಡಿ ಆಡುತ್ತಿದ್ದೆ. ಸಮಯ ಸಿಕ್ಕಾಗ ಈಗಲೂ ಆಡುತ್ತೇನೆ. ಇದರಿಂದ ಈ ಕೌಶಲಗಳನ್ನು ಕಲಿಯಲು ಸಾಧ್ಯವಾಗಿದೆ.

ಪ್ರೊ ಕಬಡ್ಡಿ ಶುರುವಾದ ನಂತರ ಕಬಡ್ಡಿಯ ಕಂಪು ಇಡೀ ವಿಶ್ವಕ್ಕೆ ಪಸರಿಸುತ್ತಿದೆ. ಇರಾನ್‌, ದಕ್ಷಿಣ ಕೊರಿಯಾದಂತಹ ತಂಡಗಳು ತಮ್ಮ ಶಕ್ತಿ ವೃದ್ಧಿಸಿಕೊಂಡಿವೆ. ಕಬಡ್ಡಿಯ ‘ಕಿಂಗ್‌’ ಆಗಿದ್ದ ಭಾರತದ ಪ್ರಾಬಲ್ಯ ಕುಗ್ಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ. ಹೋದ ವರ್ಷ ಏಷ್ಯನ್‌ ಕ್ರೀಡಾಕೂಟದಲ್ಲಿ ತಂಡವು ಸೆಮಿಫೈನಲ್‌ನಲ್ಲಿ ಸೋತಿದ್ದು ಇದಕ್ಕೊಂದು ನಿದರ್ಶನ. ಈ ಬಗ್ಗೆ ನಿಮ್ಮ ಅಭಿಪ್ರಾಯ.

ಕಬಡ್ಡಿ ನಮ್ಮ ನೆಲದ ಆಟ. ಯಾವುದೋ ಒಂದು ಕೂಟದಲ್ಲಿ ಸೋತ ಮಾತ್ರಕ್ಕೆ ಈ ಕ್ರೀಡೆಯಲ್ಲಿ ನಮ್ಮ ಪ್ರಾಬಲ್ಯ ಕಡಿಮೆಯಾಗುತ್ತಿದೆ ಎಂದು ವಿಶ್ಲೇಷಿಸುವುದು ಸರಿಯಲ್ಲ. ಪ್ರೊ ಕಬಡ್ಡಿಯಲ್ಲಿ ವಿದೇಶಿ ಆಟಗಾರರೂ ಭಾಗವಹಿಸುತ್ತಾರೆ. ಅವರು ನಮ್ಮಿಂದ ಕಲಿತ ಕೌಶಲಗಳನ್ನು ತಮ್ಮ ದೇಶದ ಇತರ ಆಟಗಾರರಿಗೂ ಹೇಳಿಕೊಡುತ್ತಾರೆ. ಹೀಗಾಗಿ ಆ ತಂಡಗಳ ಶಕ್ತಿ ವೃದ್ಧಿಸಿರಬಹುದು. ನಮ್ಮ ಶಕ್ತಿ ಕುಗ್ಗಿದೆ ಎಂಬುದು ತಪ್ಪು ಕಲ್ಪನೆ.

ಪ್ರೊ ಕಬಡ್ಡಿ ಆರಂಭವಾದ ನಂತರ ಆಟಗಾರರು ಕುಬೇರರಾಗಿದ್ದಾರೆ. ಎಲ್ಲರಿಗೂ ತಾರಾ ವರ್ಚಸ್ಸು ಸಿಕ್ಕಿದೆ. ಇದರಿಂದ ಸಂತುಷ್ಟರಾಗಿರುವ ಆಟಗಾರರು ರಾಷ್ಟ್ರೀಯ ತಂಡದ ಪರ ಆಡುವಾಗ ಮೊದಲಿನಷ್ಟು ಬದ್ಧತೆ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ನೀವೇನು ಹೇಳುವಿರಿ?

ಪ್ರೊ ಕಬಡ್ಡಿ ಕೇವಲ ಒಂದು ಲೀಗ್‌. ಇದು ಈಗ ಹೆಚ್ಚು ಜನಪ್ರಿಯತೆ ಗಳಿಸಿದೆ. ಇದರಲ್ಲಿ ಆಡಿದರೆ ಕೈತುಂಬಾ ಹಣ ಸಿಗುತ್ತದೆ. ಹಾಗಂತ ಆಟಗಾರರು ಈ ಲೀಗ್‌ನಲ್ಲಿ ಆಡುವತ್ತ ಮಾತ್ರ ಚಿತ್ತ ಹರಿಸುತ್ತಿದ್ದಾರೆ ಎಂಬ ಮಾತನ್ನು ಒಪ್ಪಲು ಆಗುವುದಿಲ್ಲ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಬೇಕೆಂಬುದು ಎಲ್ಲರ ಕನಸಾಗಿರುತ್ತದೆ. ಪಿಕೆಎಲ್‌ ಇದಕ್ಕೆ ವೇದಿಕೆ ಎಂದರೆ ತಪ್ಪಾಗಲಾರದು. ಭಾರತದ ಪರ ಆಡುವಾಗ ಸಿಗುವ ಖುಷಿಯೇ ಬೇರೆ. ಆ ಸಂತಸ ಪದಗಳಿಗೆ ನಿಲುಕದ್ದು.

ಕಬಡ್ಡಿಯಲ್ಲಿ ಆಸಕ್ತಿ ಚಿಗುರೊಡೆದಿದ್ದು ಹೇಗೆ?

ಅಪ್ಪ ಗುರುದೀಪ್‌ ಸಿಂಗ್‌ ಹಾಗೂ ಅಣ್ಣ ರಣ್‌ ಸಿಂಗ್‌ ಅವರು ಕಬಡ್ಡಿ ಆಡುತ್ತಿದ್ದುದ್ದನ್ನು ನೋಡುತ್ತಿದ್ದೆ. ಮುಂದೆ ನಾನೂ ಅವರಂತೆಯೇ ಆಗಬೇಕೆಂದು ಕನಸು ಕಂಡಿದ್ದೆ. ಪೊಲೀಸ್‌ ಇಲಾಖೆಗೆ ಸೇರಿದ ನಂತರ ಕಬಡ್ಡಿಯನ್ನು ಗಂಭೀರವಾಗಿ ಪರಿಗಣಿಸಿದೆ. ಪರಮ್‌ಜೀತ್‌ ಸಿಂಗ್‌ ಅವರು ಆಟದ ಪಾಠಗಳನ್ನು ಹೇಳಿಕೊಟ್ಟರು. ನಾನು ಕಬಡ್ಡಿಯಲ್ಲಿ ಹೆಸರು ಗಳಿಸಲು ಅವರೇ ಕಾರಣ.

ಬೆಂಗಾಲ್‌ ಬಿಟ್ಟು ಇತರೆ ಯಾವ ತಂಡಗಳು ಈ ಸಲದ ಪಿಕೆಎಲ್‌ನಲ್ಲಿ ಪ್ರಶಸ್ತಿ ಗೆಲ್ಲಬಹುದು?

ಲೀಗ್‌ನಲ್ಲಿ ಆಡುವ ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಹರಿಯಾಣ ಸ್ಟೀಲರ್ಸ್‌ ಮತ್ತು ದಬಂಗ್‌ ಡೆಲ್ಲಿ ತಂಡದವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಪಟ್ನಾ ಪೈರೇಟ್ಸ್‌ ತಂಡ ಈಗ ಲಯ ಕಂಡುಕೊಂಡಿದೆ. ಹೀಗಾಗಿ ಇಂತಹವರೇ ಪ್ರಶಸ್ತಿ ಗೆಲ್ಲುತ್ತಾರೆ ಎಂಬುದನ್ನು ಈಗಲೇ ನಿರ್ಧರಿಸುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT