ಪೈಲ್ವಾನರ ತಾಕತ್ತು ಪ್ರದರ್ಶನಕ್ಕೆ ವೇದಿಕೆ ಸಜ್ಜು

7
ಇಂದಿನಿಂದ ಪ್ರೊ ಕುಸ್ತಿ ಲೀಗ್: ಆರು ತಂಡಗಳಲ್ಲಿ 15 ದೇಶಗಳ ಕುಸ್ತಿಪಟುಗಳು ಭಾಗಿ

ಪೈಲ್ವಾನರ ತಾಕತ್ತು ಪ್ರದರ್ಶನಕ್ಕೆ ವೇದಿಕೆ ಸಜ್ಜು

Published:
Updated:

ಪಂಚಕುಲ, ಹರಿಯಾಣ: ಪೈಲ್ವಾನರ ಶಕ್ತಿ–ಸಾಮರ್ಥ್ಯ ಪ್ರದರ್ಶನದ ವೇದಿಕೆಯಾದ ಪ್ರೊ ಕುಸ್ತಿ ಲೀಗ್‌ಗೆ ಸೋಮವಾರ ಇಲ್ಲಿ ಚಾಲನೆ ಸಿಗಲಿದೆ. ಭಾರತೀಯ ಕುಸ್ತಿ ಫೆಡರೇಷನ್ ಆಯೋಜಿಸುತ್ತಿರುವ ಲೀಗ್‌ ಈ ಹಿಂದೆ ಮೂರು ಆವೃತ್ತಿಗಳನ್ನು ಕಂಡಿದ್ದು ಅಪಾರ ಜನಮೆಚ್ಚುಗೆ ಗಳಿಸಿದೆ.

ಜನವರಿ 31ರ ವರೆಗೆ ನಡೆಯಲಿರುವ ಲೀಗ್‌ಗೆ ಪಂಚಕುಲ ಮಾತ್ರವಲ್ಲದೆ ಲುಧಿಯಾನ ಮತ್ತು ನೋಯ್ಡಾ ನಗರಗಳು ಕೂಡ ಆತಿಥ್ಯ ವಹಿಸಲಿವೆ. ಡೆಲ್ಲಿ ಸುಲ್ತಾನ್ಸ್‌, ಯು.ಪಿ.ದಂಗಲ್‌, ಹರಿಯಾಣ ಹ್ಯಾಮರ್ಸ್‌, ಎಂ.ಪಿ.ಯೋಧಾ, ಮುಂಬೈ ಮಹಾರಥಿ ಮತ್ತು ಎನ್‌ಸಿಆರ್ ಪಂಜಾಬ್ ರಾಯಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಬಜರಂಗ್ ಪೂನಿಯಾ, ವಿನೇಶ್ ಪೋಗಟ್‌, ಸಾಕ್ಷಿ ಮಲಿಕ್‌, ಪೂಜಾ ದಂಡಾ ಮತ್ತು ಸುಮಿತ್‌ ಮಲಿಕ್ ಈ ಬಾರಿ ಕೂಡ ಕಣದಲ್ಲಿದ್ದಾರೆ. ಕುಸ್ತಿ ಪ್ರಿಯರು ಇವರ ಪಟ್ಟುಗಳನ್ನು ನೋಡಲು ಕಾತರರಾಗಿದ್ದಾರೆ. 

ಏಷ್ಯಾ, ಯುರೋಪ್‌, ಆಫ್ರಿಕಾ ಮತ್ತು ಅಮೆರಿಕ ಖಂಡಗಳ 15 ದೇಶಗಳ ಕುಸ್ತಿಪಟುಗಳು ಲೀಗ್‌ನಲ್ಲಿ ಸೆಣಸಲಿದ್ದಾರೆ. 

ಎಂ.ಪಿ.ಯೋಧಾ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿದ್ದು ಋತು ಪೋಗಟ್, ಪೂಜಾ ದಂಡ, ಸಂದೀಪ್ ತೋಮರ್‌, ಅಜರ್ ಬೈಜಾನ್‌ನ ಎಲಿಸ್‌ ಮನಲೋವ, ಹಾಜಿ ಅಲಿಯೆವ್‌, ಕೊಲಂಬಿಯಾದ ಕರೋಲಿನಾ ಆ್ಯಂಡ್ರಿಯಾ ಮುಂತಾದವರ ಬಲ ತಂಡಕ್ಕಿದೆ. ಸಾಕ್ಷಿ ಮಲಿಕ್, ಸುಮಿತ್ ಮಲಿಕ್‌, ಪ್ರವೀಣ್‌, ಪಿಂಕಿ, ರಾಹುಲ್ ಅವಾರೆ ಮತ್ತಿತರರು ಡೆಲ್ಲಿ ಸುಲ್ತಾನ್ ತಂಡದಲ್ಲಿದ್ದು ಹರಿಯಾಣ ಹ್ಯಾಮರ್ಸ್‌ ತಂಡ ಪ್ರವೀಣ್ ರಾಣ, ಸೀಮಾ, ಬೆಲಾರಸ್‌ನ ಅಲಿ ಶೆಬನೊವ್‌ ಮುಂತಾದವರ ಮೇಲೆ ಭರವಸೆ ಇರಿಸಿದೆ. ವಿನೇಶ್ ಪೋಗಟ್ ಅವರು ಮುಂಬೈ ಮಹಾರಥಿ ಪಾಲಾಗಿದ್ದು ದೀಪಕ್ ಪೂನಿಯಾ ಮತ್ತು ಸಚಿನ್ ರಾಠಿ ಕೂಡ ಇದೇ ತಂಡದಲ್ಲಿದ್ದಾರೆ.

ಪಂಜಾಬ್ ರಾಯಲ್ಸ್‌ಗೆ ನಿತಿನ್ ರಾಠಿ ಮತ್ತು ಬಜರಂಗ್ ಪೂನಿಯಾ ಬಲ ತುಂಬಿದ್ದು ಅಮಿತ್ ಜಂಕಾರ್ ಮತ್ತು ಕೆನಡಾದ ಕೋರಿ ಜಾರ್ವಿಸ್ ಕೂಡ ಇದೆ ತಂಡದಲ್ಲಿದ್ದಾರೆ. ಸರಿತಾ, ನವಜೋತ್ ಕೌರ್, ಪಂಕಜ್ ರಾಣ ಮತ್ತು ಬೆಲಾರಸ್‌ನ ವೆನೆಸಾ ಕಲಾರಸ್ಕಾಯ ಯು.ಪಿ.ದಂಗಲ್ ಪರವಾಗಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !