ಬುಧವಾರ, ಸೆಪ್ಟೆಂಬರ್ 29, 2021
19 °C

PV Web Exclusive: ಚೆಸ್ ಕಾದಾಟ ಮುಕ್ತಾಯ-ಹೊಸ ಹಾದಿಗೆ ಅಡಿಪಾಯ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್ ಆತಂಕದ ಆರಂಭದ ಘಟ್ಟ ಅದು. ಕೋವಿಡ್‌–19ರ ಕುರಿತು ಸ್ಪಷ್ಟ ಮಾಹಿತಿ ಇಲ್ಲದೆ ಜಗತ್ತೇ ತಲ್ಲಣಿಸಿದ್ದ ಸಂದರ್ಭ. ಎಲ್ಲೆಡೆ ಲಾಕ್‌ಡೌನ್‌, ದೇಶ–ವಿದೇಶದಲ್ಲಿ ಸಾವು–ನೋವು, ಸಂಕಷ್ಟ. ಕೆಲವು ತಿಂಗಳುಗಳ ನಂತರ ಜಗತ್ತು ನಿಧಾನವಾಗಿ ಸಹಜಸ್ಥಿತಿಯತ್ತ ದಾಪುಗಾಲು ಇಡಲು ಶುರುವಾಯಿತು. ಆದರೆ ಕ್ರೀಡಾಕ್ಷೇತ್ರ ಮಾತ್ರ ಏನು ಮಾಡುವುದೆಂದೇ ತೋಚದೆ ಕಂಗಾಲಾಗಿತ್ತು. ಸ್ಪರ್ಧೆಗಳು ಇಲ್ಲದೆ ಕ್ರೀಡಾಂಗಣಗಳು ಬರಿದಾಗಿದ್ದರೆ, ಟೂರ್ನಿಗಳನ್ನು ನಡೆಸಲಾಗದೆ ಆಯೋಜಕರು ಕೈಚೆಲ್ಲಿ ಕುಳಿತಿದ್ದರು.

ಹೀಗಿರಲು, ಆನ್‌ಲೈನ್‌ನಲ್ಲೂ ಸ್ಪರ್ಧೆ ಆಯೋಜಿಸುವ ಪ್ರಯೋಗಕ್ಕೆ ನಾಂದಿ ಹಾಡಿದ್ದು ಚೆಸ್‌ ಕ್ರೀಡೆಯ ಮುಂಚೂಣಿ ನಾಯಕರು. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್‌ ಟೂರ್ನಿಗಳು ನಡೆದವು. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಆನ್‌ಲೈನ್ ತರಗತಿಗಳೂ ಸಾಕಷ್ಟು ಸಂಖ್ಯೆಯಲ್ಲಿ ನಡೆಯತೊಡಗಿದವು. ಮೊದಲ ಆನ್‌ಲೈನ್‌ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ, ರಷ್ಯಾ ಜೊತೆ ಜಂಟಿ ಚಾಂಪಿಯನ್‌ ಕೂಡ ಆಯಿತು. ಏಕಕಾಲದಲ್ಲಿ ಟೂರ್ನಿಗಳು ನಡೆದ ಕಾರಣ ಆನ್‌ಲೈನ್‌ ಚೆಸ್‌ ನಡೆಸುವ ಚೆಸ್‌.ಕಾಮ್‌, ಲಿಚೆಸ್‌ ಸರ್ವರ್‌ಗಳು ಕ್ರ್ಯಾಶ್ ಆಗಿದ್ದೂ ಇದೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಭಾರತ ಚೆಸ್‌ ವಲಯದಲ್ಲಿ ಒಂಥರಾ ಬಿಗುಮಾನ–ದುಮ್ಮಾನ ಮಡುಗಟ್ಟಿತ್ತು; ವಾತಾವರಣ ತುಂಬ ‘ಬಿಗಿ’ಯಾಗಿತ್ತು. ಇದಕ್ಕೆ ಕಾರಣ, ಚೆಸ್‌ ಆಡಳಿತದಲ್ಲಿ ಇದ್ದ ದೀರ್ಘ ಕಾಲದ ಒಳಜಗಳ–ಮುಸುಕಿನ ಗುದ್ದಾಟ. ಅಖಿಲ ಭಾರತ ಚೆಸ್ ಫೆಡರೇಷನ್‌ (ಎಐಸಿಎಫ್‌) ಮತ್ತು ಭಾರತ ಚೆಸ್ ಸಂಸ್ಥೆ ನಡುವಿನ ಆಂತರಿಕ ಕಲಹ ದೇಶದಲ್ಲಿ ಚೆಸ್ ಬೆಳವಣಿಗೆಗೆ ದೊಡ್ಡ ಗೋಡೆಯಾಗಿ ಪರಿಣಮಿಸಿತ್ತು. ಕೆಲವು ರಾಜ್ಯಗಳಲ್ಲೂ ಇದರ ದುಷ್ಪರಿಣಾಮ ಆಗಿತ್ತು. ಹೀಗಾಗಿ ಚೆಸ್‌ ತರಬೇತಿ, ಟೂರ್ನಿಗಳ ಆಯೋಜನೆಗೆ ಅಡ್ಡಿಯಾಗಿತ್ತು.

ಚೆಸ್‌ ಸಂಸ್ಥೆಗಳ ನಡುವಿನ ಈ ಭಿನ್ನಾಭಿಪ್ರಾಯಕ್ಕೆ ಕೊನೆ ಹಾಡಿ ಕ್ರೀಡೆಯ ಬೆಳವಣಿಗೆಗೆ ಒಂದೇ ಸೂರಿನಡಿ ದುಡಿಯಲು ಪ್ರಯತ್ನಗಳು ನಡೆಯುತ್ತಲೇ ಇದ್ದವು. ಆದರೆ ವೈಯಕ್ತಿಕ ಅಹಂ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಈ ನಡುವೆ ಆಗಸ್ಟ್ 21ರಂದು ಮಹತ್ವದ ಬೆಳವಣಿಗೆಗೆ ‘ಭಾರತ ಚೆಸ್‌’ ಸಾಕ್ಷಿಯಾಯಿತು. ಭಿನ್ನಮತವನ್ನು ಬದಿಗಿರಿಸಿ ಒಟ್ಟಾಗಿ ದುಡಿಯುವುದು ಅನಿವಾರ್ಯ ಎಂಬ ಅರಿವು ಬಂದ ಆಡಳಿತಗಾರರು ರಾಜಿ ಮಾಡಿಕೊಳ್ಳಲು ತೀರ್ಮಾನಿಸಿದರು. ಇದು ದೇಶದ ಚೆಸ್ ಪಟುಗಳು ಮತ್ತು ಆಯೋಜಕರಲ್ಲಿ ಸಂಭ್ರಮ ಮೂಡಲು ಕಾರಣವಾಗಿದೆ. ಇಲ್ಲಿನ ಚೆಸ್‌ ಹೊಸ ಯುಗದತ್ತ ಹೆಜ್ಜೆ ಹಾಕಿದೆ ಎಂದುಕೊಂಡು ಅವರೆಲ್ಲ ಸಂಭ್ರಮಿಸಿದ್ದಾರೆ.

‘ನಮ್ಮೊಳಗಿನ ಭಿನ್ನಮತ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ರಾಜ್ಯ ಮತ್ತು ಸ್ಥಳೀಯ ಮಟ್ಟಗಳಲ್ಲೂ ಈ ಕ್ರೀಡೆಯ ಅಭಿವೃದ್ಧಿಗೆ ತೊಡಕಾಗಿತ್ತು. ಇನ್ನು ಮುಂದೆ ಎಲ್ಲವೂ ಸರಿ ಹೋಗಲಿದೆ. ಸದ್ಯದಲ್ಲೇ ಒಮ್ಮತದ, ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ. ನಂತರ ಕ್ರೀಡೆಯ ಬೆಳವಣಿಗೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲಾಗುವುದು’ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ ಅಧ್ಯಕ್ಷ ಸಂಜಯ್ ಕಪೂರ್ ಮತ್ತು ಕಾರ್ಯದರ್ಶಿ ಭರತ್ ಸಿಂಗ್ ಚೌಹಾಣ್ ಮುಕ್ತವಾಗಿ ನುಡಿದಿದ್ದಾರೆ.

ಹಾದಿ ಸುಗಮವಾಗುವುದೇ...?

ಒಂದಾಗಲು ಮುಂದಾಗಿದ್ದರೂ ‘ಹಿರಿಯರು’ ಭರವಸೆಯ ಮಾತುಗಳನ್ನು ಆಡಿದ್ದರೂ ಚೆಸ್‌ ಸಂಸ್ಥೆಗಳ ಒಳಗಿನ ಜಗಳ ಅಷ್ಟು ಬೇಗ ಶಮನಗೊಳ್ಳುವುದು ಸಾಧ್ಯವೇ...? ಈ ಪ್ರಶ್ನೆಗೆ ಸಾಧ್ಯ ಎಂಬ ಉತ್ತರ ನೀಡುವವರು ಬಹಳ ಮಂದಿ ಇದ್ದಾರೆ. ಜೊತೆಗೇ ಕಷ್ಟಸಾಧ್ಯ ಎಂದು ಹೇಳುವವರ ಸಂಖ್ಯೆಯೂ ದೊಡ್ಡದಿದೆ. ರಾಷ್ಟ್ರಮಟ್ಟದಲ್ಲಿ ಒಂದಾಗುವ ಪ್ರಕ್ರಿಯೆ ಯಶಸ್ವಿಯಾಗಿದ್ದರೂ ಸ್ಥಳೀಯವಾಗಿ ಇರುವ ಭಿನ್ನಮತವನ್ನು ಶಮನಗೊಳಿಸುವ ಬಹುದೊಡ್ಡ ಸವಾಲು ಕೂಡ ಆಡಳಿತಗಾರರ ಎದುರಿಗಿದೆ.

ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಯುಪಿ ಚೆಸ್ ಸಂಸ್ಥೆ ಮತ್ತು ಯುಪಿ ಚೆಸ್ ಸ್ಪೋರ್ಟ್ಸ್‌ ಸಂಸ್ಥೆಗಳು ಇದ್ದು ಇವುಗಳ ಮುಖಂಡರು ಬದ್ಧ ವೈರಿಗಳಂತೆಯೇ ವರ್ತಿಸುತ್ತಿದ್ದಾರೆ. ಇದು ಎಲ್ಲರ ಗಮನಕ್ಕೆ ಬಂದಿರುವ ಸಮಸ್ಯೆ. ಆದರೆ ಯಾರಿಗೂ ತಿಳಿಯದೆ ಭಿನ್ನಪಥದಲ್ಲೇ ನಡೆಯುವ ‘ಪರಿಪಾಠ’ ಎಷ್ಟೋ ರಾಜ್ಯಗಳಲ್ಲಿ ಇನ್ನೂ ಇದೆ. ಕರ್ನಾಟಕದಲ್ಲಿ ಯುನೈಟೆಡ್ ಕರ್ನಾಟಕ ಚೆಸ್‌ ಸಂಸ್ಥೆಯು ರಾಜ್ಯದ ಚಟುವಟಿಕೆಗಳ ಚುಕ್ಕಾಣಿ ಹಿಡಿದಿದೆ. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಚೆಸ್‌ ಸಂಸ್ಥೆ ಅಸ್ತಿತ್ವದಲ್ಲಿ ಇದ್ದರೂ ಅದರ ಗೊಡವೆಗೇ ಹೋಗದೆ ವೈಯಕ್ತಿಕವಾಗಿ ಚಟುವಟಿಕೆಗಳನ್ನು ನಡೆಸುವ ಅನೇಕರು ಇದ್ದಾರೆ. ಅವರಿಗೆ ಸಾಂಸ್ಥಿಕ ಬೆಂಬಲದ ಅಗತ್ಯವೇ ಇಲ್ಲ.  ಇಂಥ ಮನಸ್ಥಿತಿಗೆ ಮದ್ದು ಅರೆದು ಒಂದೇ ವೇದಿಕೆಗೆ ಕರೆದುಕೊಂಡು ಬರುವ ಕೆಲಸವೂ ಆಗಬೇಕಿದೆ. ಈ ಸುಧಾರಣೆ ಎಷ್ಟು ಬೇಗ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ಚೆಸ್‌ಗೆ ಹೊಸ ಹಾದಿ ತೆರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು