‘ಫಿಟ್‌ನೆಸ್ ಇದ್ದರಷ್ಟೇ ರೇಸ್’

ಮಂಗಳವಾರ, ಏಪ್ರಿಲ್ 23, 2019
29 °C

‘ಫಿಟ್‌ನೆಸ್ ಇದ್ದರಷ್ಟೇ ರೇಸ್’

Published:
Updated:
Prajavani

2 ಕೆ.ಜಿ. ತೂಕದ ಹೆಲ್ಮೆಟ್, ಸುಮಾರು 4 ಕೆ.ಜಿ. ತೂಕದ ಬಟ್ಟೆ ಧರಿಸಿ, ಬೆವರ ಹನಿ ಹೊರಹೋಗುವುದಕ್ಕೂ ಅವಕಾಶ ಮಾಡಿಕೊಡಂದತೆ ಕೈ-ಕಾಲುಗಳನ್ನು ಬಿಗಿಯುವಂತೆ ಗವಸುಗಳನ್ನು ಹಾಕಿಕೊಂಡು, ಉಸಿರುಗಟ್ಟುವ ವಾತಾವರಣದಲ್ಲಿ ಅರೆಕ್ಷಣವೂ ಎಚ್ಚರ ತಪ್ಪದೇ ಗಂಟೆಗಟ್ಟಲೇ ಗಮ್ಯದ ಮೇಲೆ ಗಮನ ಇಡುವುದೆಂದರೆ ಸುಲಭದ ಮಾತಲ್ಲ.

ಹೀಗೆ ಕ್ಷಣ ಕ್ಷಣವೂ ಸವಾಲು ಒಡ್ಡುವಂತಹ ಮತ್ತು ಅಪಾಯಕ್ಕೆ ಆಹ್ವಾನ ನೀಡುವಂತಹ ಕಾರ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ ಫಿಟ್ ನೆಸ್ ಇರುವವರಿಗಷ್ಟೇ ಸಾಧ್ಯ. ಈ ಕ್ರೀಡೆಯಲ್ಲಿ ಮಹಿಳೆಯರ ಛಾಫು ಕಡಿಮೆ. ಈ ಕೊರತೆಯನ್ನು ತುಂಬುವುದಕ್ಕಾಗಿಯೇ ಶ್ರಮಿಸುತ್ತಿದ್ದಾರೆ ಬೆಂಗಳೂರಿನ ಮಹಿಳಾ ರೇಸರ್ ಹರ್ಷಿತ ಗೌಡ.

‘ಇತರೆ ಕ್ರೀಡೆಗಳಿಗೆ ಹೋಲಿಸಿದರೆ ರೇಸಿಂಗ್ ಕ್ರೀಡೆಗಳು ತುಂಬಾ ಭಿನ್ನ. ಅದರಲ್ಲೂ ಕಾರ್ ರೇಸ್ ದುಬಾರಿ ಮತ್ತು ಹೆಚ್ಚು ಶ್ರಮ ಬೇಡುವ ಕ್ರೀಡೆ. ಇದರಲ್ಲಿ ಭಾಗವಹಿಸಬೇಕೆಂದರೆ ದೈಹಿಕ ಆರೋಗ್ಯವಷ್ಟೇ ಅಲ್ಲ, ಮಾನಸಿಕವಾಗಿಯೂ ದೃಢವಾಗಿರಬೇಕು’ ಎನ್ನುತ್ತಾರೆ ಅವರು.

‘ಕಾರ್ ರೇಸಿಂಗ್‌ನಲ್ಲಿ ಹಲವು ವಿಧಗಳಿವೆ. ಅದರಲ್ಲೂ ಮರಳುಗಾಡಿನ ಪ್ರದೇಶಗಳಲ್ಲಿ ನಡೆಯುವ 300 ಕಿ.ಮೀ ದೂರದ ರ‍್ಯಾಲಿಗಳಲ್ಲಿ ಭಾಗವಹಿಸಬೇಕೆಂದರೆ ಫಿಟ್‌ನೆಸ್ ಇದ್ದರಷ್ಟೇ ಸಾಧ್ಯ. ಏಕೆಂದರೆ ಕಾರಿನೊಳಗೆ ಒಮ್ಮೆ ಕುಳಿತುಕೊಂಡರೆ ಗುರಿ ತಲುಪುವವರೆಗೂ ನೀರು ಕುಡಿಯುವುದಕ್ಕೂ ಅವಕಾಶವಿರುವುದಿಲ್ಲ. ಹೀಗಾಗಿಯೇ ರೇಸಿಂಗ್ ಮಾಡುವವರು ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕು’ ಎಂದು ಅವರು ಹೇಳುತ್ತಾರೆ. 

ವ್ಯಾಯಾಮ ಮಾಡಲೇಬೇಕು

‘ಜಿಮ್‌ನಲ್ಲಿ ನಿತ್ಯ ಕನಿಷ್ಠ ಒಂದು ಗಂಟೆಯಾದರೆ ನೀರು ಕುಡಿಯದೇ ನಿರಂತರವಾಗಿ ವರ್ಕ್‌ಔಟ್ ಮಾಡಬೇಕು. ದೇಹ ದಂಡಿಸುವ ಪ್ರಕ್ರಿಯೆ ಜಿಮ್‌ಗಷ್ಟೇ ಸೀಮಿತವಾಗಬಾರದು, ಸ್ಪರ್ಧಿಸುವ ವೇಳೆ ಉಸಿರಾಟದ ಸಮಸ್ಯೆಗಳು ಕಾಡದಂತೆ ಗಂಟೆಗಟ್ಟಲೇ ಓಡಬೇಕು. ಹೀಗೆ ನಿತ್ಯ 4ರಿಂದ 5 ಗಂಟೆ ದೇಹ ದಂಡಿಸುವುದಕ್ಕೇ ಮೀಸಲಿಟ್ಟರೆ ಸ್ಪರ್ಧಿಸಲು’ ಸಾಧ್ಯ ಎನ್ನುತ್ತಾರೆ ಹರ್ಷಿತ.

‘ಸಾಮಾನ್ಯ ಪ್ರಯಾಣಿಕ ಕಾರ್‌ಗಳು ಬೇರೆ, ರೇಸ್ ಕಾರ್‌ಗಳು ಬೇರೆ. ರೇಸ್ ಕಾರ್ ಸ್ಟೇರಿಂಗ್ ತಿರುಗಿಸುವುದಕ್ಕೆ ಮಾಂಸಖಂಡಗಳು ದೃಢವಾಗಿರಬೇಕು. ಅದರಲ್ಲೂ ಕಾಡು ಮತ್ತು ಮರುಭೂಮಿಯಂತ ಪ್ರದೇಶಗಳಲ್ಲಿ ನಡೆಯುವ ರೇಸ್‌ಗಳಲ್ಲಿ ಕ್ಷಣಕ್ಷಣವೂ ತಿರುವುಗಳು ಇರುತ್ತವೆ. ಇಂತಹ ಸ್ಪರ್ಧಗಳಲ್ಲಿ ನಿಮಿಷಕ್ಕೊಮ್ಮೆ ಸ್ಟೇರಿಂಗ್ ತಿರುಗಿಸಬೇಕಾಗುತ್ತದೆ. ಫಿಟ್‌ನೆಸ್ ಇಲ್ಲದಿದ್ದರೆ ಓಡಿಸುವುದೇ ಕಷ್ಟ’ ಎನ್ನುತ್ತಾರೆ ಅವರು.

‘ಪ್ರಸ್ತುತ ಫುಟ್‌ಬಾಲ್‌, ಕ್ರಿಕೆಟ್, ಟೆನಿಸ್‌ ಸೇರಿದಂತೆ ಹಲವು ಕ್ರೀಡೆಗಳಿಗೆಂದೇ ವಿಶೇಷವಾಗಿ ಜಿಮ್ ತರಬೇತುದಾರರು ಇದ್ದಾರೆ. ಅವರನ್ನು ಸಂಪರ್ಕಿಸಿ, ರೇಸಿಂಗ್ ಬೇಕಾದ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮಾರ್ಗದರ್ಶನ ಪಡೆಯಬಹುದು. ಅವರು ಸೂಚಿಸಿದ ಆಹಾರವನ್ನೇ ಸೇವಿಸಿದರೆ ಚೆನ್ನ. ನಾಲಗೆ ರುಚಿಯನ್ನು ನೋಡದೇ, ದೇಹವನ್ನು ಫಿಟ್‌ ಆಗಿ ಇಡುವ ಆಹಾರದ ಕಡೆಗೆ ಗಮನ ಕೊಟ್ಟರೆ ಒಳಿತು. ಡಯಟ್ ಪಾಲಿಸುವವರು ಸಾಧ್ಯವಾದಷ್ಟು ತಜ್ಞರ ನೆರವು ಪಡೆಯಬಹುದು. ಅನ್ನದಿಂದ ದೂರವಿರಬೇಕು’ ಎಂದು ಸಲಹೆ ನೀಡುತ್ತಾರೆ.

ಸೌಂದರ್ಯ ಕಾಳಜಿ ಬೇಡ

‘ಮಹಿಳೆಯರು ಎಂದರೇನೇ ಸೌಂದರ್ಯಪ್ರಿಯರು. ಆದರೆ ಒಮ್ಮೆ ರೇಸಿಂಗ್‌ನಲ್ಲಿ ಭಾಗವಹಿಸಿದರೂ ಮೈ ಬಣ್ಣವೆಲ್ಲಾ ಬದಲಾಗುತ್ತದೆ. 2ರಿಂದ 3 ಕೆ.ಜಿ ತೂಕ ಇಳಿಕೆಯಾಗುತ್ತದೆ. ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಇಂತಹ ಸಮಸ್ಯೆಗಳಿಗೆ ಹೆಚ್ಚು ತಲೆಕೆಡಿಸಿಕೊಂಡರೆ ರೇಸ್‌ಗೆ ಹೋಗುವುದು’ ಕಷ್ಟ ಎನ್ನುತ್ತಾರೆ ಹರ್ಷಿತ.

‘ಭಾರತದಲ್ಲಿ ರೇಸಿಂಗ್‌ ಅಭ್ಯಾಸ ಮಾಡುವುದಕ್ಕೆ ಅವಕಾಶಗಳು ಕಡಿಮೆ. ಅಭ್ಯಾಸಕ್ಕೆ ಸೂಕ್ತವಾದ ಸ್ಥಳಗಳು ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಆದರೂ ನೇರವಾಗಿ ಸ್ಪರ್ಧಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

8ನೇ ತರಗತಿಯಲ್ಲೇ ಸ್ಪರ್ಧಿಸಿದ್ದೆ

‘ನಮ್ಮ ತಂದೆ ರಾಜಶೇಖರ್ ಗೌಡ ಅವರೂ ರೇಸರ್‌. ನಾನು ಈ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಎಂಬುದು ಅವರ ಆಸೆ. ನನಗೂ ಎಲ್ಲಿಲ್ಲದ ಕಾಳಜಿ. 8ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ರೇಸಿಂಗ್‌ನಲ್ಲಿ ಭಾಗವಹಿಸಿದೆ. ಆ ಸ್ಪೂರ್ತಿಯಿಂದಲೇ ಸ್ಪರ್ಧೆಯ ಬಗ್ಗೆ ಕಾಳಜಿ ಮೂಡಿತು. 18ವರ್ಷ ತುಂಬುವ ಹೊತ್ತಿಗೆ ಸುಮಾರು 100 ಟ್ರೋಫಿಗಳನ್ನು ಗೆದ್ದಿದ್ದೆ.

18 ವರ್ಷ ನಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಕಾರ್ ಅಷ್ಟೇ ಅಲ್ಲ, ಬೈಕ್‌ ರೇಸ್‌ನಲ್ಲೂ ಭಾಗವಹಿಸಿ ಟ್ರೋಫಿಗಳನ್ನು ಎತ್ತಿ ಹಿಡಿದಿದ್ದೇನೆ. ಅಪ್ಪನಿಗೆ ಬೆನ್ನಿನ ಶಸ್ತ್ರಚಿಕಿತ್ಸೆ ನಂತರ ವಾಹನ ಓಡಿಸಬೇಡಿ ಎಂದು ವೈದ್ಯರು ಸೂಚಿಸಿದರು. ಆದರೂ ಅವರು ನನ್ನೊಂದಿಗೆ ಬಂದು ನ್ಯಾವಿಗೇಟರ್ ಆಗಿ ನನ್ನ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ’ ಎನ್ನುತ್ತಾರೆ ಹರ್ಷಿತ

ಹುಡುಗರೊಂದಿಗೆ ಸ್ಪರ್ಧೆ: ಚೆನ್ನೈ, ಕೊಯಮತ್ತೂರು, ದೆಹಲಿಯಲ್ಲಿ ನಡೆದ ನ್ಯಾಷನಲ್ ರ‍್ಯಾಲಿಗಳ ಆರು ಹಂತಗಳನ್ನೂ ಯಶಸ್ವಿಯಾಗಿ ಪೂರೈಸಿದ ಅತಿ ಕಿರಿಯ ಮಹಿಳೆ ಎಂಬ ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಸಂಪಾದಿಸಿದ್ದಾರೆ. ಈ ಕ್ರೀಡೆಯಲ್ಲಿ ಮಹಿಳೆಯರು ಭಾಗವಹಿಸುವುದು ಕಡಿಮೆ ಹೀಗಾಗಿ ಅವರು ಪುರುಷರೊಂದಿಗೆ ಸ್ಪರ್ಧಿಸಿ ಗೆದ್ದಿರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !