ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಅಶ್ವಿನಿ–ಸಾತ್ವಿಕ್ ಜೋಡಿ ಸೆಮಿಫೈನಲ್‌ಗೆ

ಪಿ.ವಿ.ಸಿಂಧು, ಸಮೀರ್ ವರ್ಮಾಗೆ ನಿರಾಸೆ
Last Updated 22 ಜನವರಿ 2021, 15:10 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಆದರೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ ಸೋತು ಹೊರಬಿದ್ದರು.

ಮಿಶ್ರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಶ್ರೇಯಾಂಕರಹಿತ ಭಾರತದ ಜೋಡಿ ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಮಲೇಷ್ಯಾದ ಪೆಂಗ್ ಸೂನ್ ಚಾನ್ ಮತ್ತು ಲ್ಯೂ ಇಂಗ್ ಗೊಹ್ ಜೋಡಿಯನ್ನು ಮಣಿಸಿತು. ಒಂದು ತಾಸು 15 ನಿಮಿಷ ನಡೆದ ಹಣಾಹಣಿ ಮೂರು ಗೇಮ್‌ಗಳ ವರೆಗೆ ಸಾಗಿತು. 18-21, 24-22, 22-20ರಲ್ಲಿ ಭಾರತದ ಜೋಡಿ ಜಯಭೇರಿ ಮೊಳಗಿಸಿತು.

ಒಲಿಂ‍ಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಿಂಧು ಥಾಯ್ಲೆಂಡ್‌ನ ರಚನಾಕ್ ಇಂತನಾನ್ ಎದುರು ಪರಾಭವಗೊಂಡರು. ಮೊದಲ ಗೇಮ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ಎರಡನೇ ಗೇಮ್‌ನಲ್ಲಿ ಸಿಂಧು ಸಪ್ಪೆಯಾದರು. ಅತ್ಯಮೋಘ ಸ್ಟ್ರೋಕ್‌ಗಳ ಮೂಲಕ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದ ರಚನಾಕ್21-13, 21-9ರಲ್ಲಿ ಗೆಲುವು ಸಾಧಿಸಿದರು.

ಉತ್ತಮ ಆಟವಾಡಿದರೂ ಆ್ಯಂಡರ್ಸ್ ಆ್ಯಂಟೊನ್ಸೆನ್‌ ಎದುರು ಜಯ ಗಳಿಸಲು ಸಮೀರ್‌ಗೆ ಸಾಧ್ಯವಾಗಲಿಲ್ಲ. ಮೊದಲ ಗೇಮ್‌ನಲ್ಲಿ ನೀರಸ ಆಟವಾಡಿದ ಸಮೀರ್ ಎರಡನೇ ಗೇಮ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿ ಗೆಲುವು ಸಾಧಿಸಿದರು. ಮೂರನೇ ಗೇಮ್‌ನಲ್ಲಿ ಕೊನೆಯ ವರೆಗೂ ಜಿದ್ದಾಜಿದ್ದಿಯ ಪೈಪೋಟಿ ಕಂಡುಬಂತು. ಕೊನೆಗೂ ಸಮೀರ್‌ 13-21 21-19 20-22ರಲ್ಲಿ ಸೋತರು.

ಮೊದಲ ಗೇಮ್‌ನ ಆರಂಭದಲ್ಲೇ ಆ್ಯಂಟೊನ್ಸೆನ್‌ 5–0 ಮುನ್ನಡೆ ಸಾಧಿಸಿದರು. ಸಮೀರ್‌ಗೆ ಈ ಸಂದರ್ಭದಲ್ಲಿ ಲಯ ಕಂಡುಕೊಳ್ಳಲು ಆಗಲಿಲ್ಲ. ಎದುರಾಳಿಯ ಡ್ರಾಪ್‌ಗಳನ್ನು ಮರಳಿಸಲು ಪರದಾಡಿದ ಅವರು ಸಿಕ್ಕಿದ ಅವಕಾಶಗಳನ್ನು ಲಾಂಗ್ ಮತ್ತು ವೈಡ್‌ ಹೊಡೆತಗಳ ಮೂಲಕ ಕೈಚೆಲ್ಲಿದರು. ಹೀಗಾಗಿ ವಿರಾಮದ ವೇಳೆ ಆ್ಯಂಟೊನ್ಸೆನ್‌ ಆರು ಪಾಯಿಂಟ್‌ಗಳ ಅಂತರ ಕಾಯ್ದುಕೊಂಡರು. ನಂತರ ದೀರ್ಘ ರ‍್ಯಾಲಿಗಳ ಮೂಲಕ ಸಮೀರ್ ಅವರನ್ನು ಕಂಗೆಡಿಸಿದರು.

ಎರಡನೇ ಗೇಮ್‌ನಲ್ಲೂ ಆರಂಭದಲ್ಲಿ ಆ್ಯಂಟೊನ್ಸೆನ್‌ ಪಾರಮ್ಯ ಮೆರೆದು 5–1ರ ಮುನ್ನಡೆ ಸಾಧಿಸಿದರು. ಆದರೆ ಸತತ ನಾಲ್ಕು ಪಾಯಿಂಟ್‌ಗಳನ್ನು ಗಳಿಸಿದ ಸಮೀರ್ ಲಯಕ್ಕೆ ಮರಳಿದರು. ಅಮೋಘ ಕ್ರಾಸ್ ಕೋರ್ಟ್ ಶಾಟ್ ಮೂಲಕ ಅವರು 7–7 ಸಮಬಲ ಸಾಧಿಸಿದರು. ವಿರಾಮದ ವೇಳೆ ಆ್ಯಂಟೊನ್ಸೆನ್‌ ಒಂದು ಪಾಯಿಂಟ್ ಅಂತರದ ಮುನ್ನಡೆ ಸಾಧಿಸಿದರು. ಆದರೆ ನಂತರ ತಿರುಗೇಟು ನೀಡಿದ ಸಮೀರ್ ಭರ್ಜರಿ ರಿಟರ್ನ್ ಮೂಲಕ ಗೇಮ್‌ ಪಾಯಿಂಟ್ ಕಲೆ ಹಾಕಿ ಮಿಂಚಿದರು.

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ತುರುಸಿನ ಸ್ಪರ್ಧೆ ಕಂಡುಬಂತು. ಆರಂಭದಲ್ಲಿ ಇಬ್ಬರೂ 5–5ರ ಸಮಬಲ ಸಾಧಿಸಿದರು. ನಂತರ ಸಮೀರ್ 9–6ರ ಮುನ್ನಡೆ ಸಾಧಿಸಿದರು. ಮೂರು ಪಾಯಿಂಟ್‌ಗಳಿಂದ ಎದುರಾಳಿಯನ್ನು ಹಿಂದಿಕ್ಕಿ ವಿರಾಮಕ್ಕೆ ತೆರಳಿದರು. ವಿರಾಮದ ನಂತರ ಆ್ಯಂಟೊನ್ಸೆನ್‌ 13–13ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಅಮೋಘ ಸೆಣಸಾಟ ನಡೆಸಿದರು. 18–18, 19–19, 20–20ರಲ್ಲಿ ಸಮ ಆದಾಗ ಪಂದ್ಯವನ್ನು ಯಾರು ಬೇಕಾದರೂ ಗೆಲ್ಲಬಹುದು ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪಟ್ಟು ಬಿಡದ ಆ್ಯಂಟೊನ್ಸೆನ್‌ ಭರ್ಜರಿ ಹೊಡೆತದ ಮೂಲಕ ಮ್ಯಾಚ್ ಪಾಯಿಂಟ್ ಗಳಿಸಿ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT