ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಟ್ರಿಪಲ್‘ ಚಿನ್ನದೊಂದಿಗೆ ದಾಖಲೆ ಬರೆದ ರೋಜಾಸ್

ಮೂರನೇ ಚಿನ್ನ ಗೆದ್ದ ವೆನೆಜುವೆಲಾದ ಅಥ್ಲೀಟ್‌; ಉಕ್ರೇನ್‌ನ ಮರೀನಾ ರೊಮಾಂಚುಕ್‌ಗೆ ಬೆಳ್ಳಿ
Last Updated 20 ಮಾರ್ಚ್ 2022, 19:55 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್: ವೆನೆಜುವೆಲಾದ ಯುಲಿಮರ್ ರೋಜಾಸ್ ಅವರು ವಿಶ್ವ ಒಳಾಂಗಣ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿನ ಜಿಗಿತದ ಮೂಲಕ ದಾಖಲೆ ಬರೆದರು.

ಸ್ಟಾರ್ಕ್‌ ಅರೆನಾದಲ್ಲಿ ಭಾನುವಾರ ನಡೆದ ಟ್ರಿಪಲ್ ಜಂಪ್‌ನಲ್ಲಿ ಚಿನ್ನ ಗೆದ್ದ ಅವರು ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದರು. ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಇದು ಅವರಿಗೆ ಮೂರನೇ ಚಿನ್ನ.

2016 ಮತ್ತು 2018ರಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ರೋಜಾಸ್ 15.74 ಮೀಟರ್ ಜಿಗಿದು ಮೊದಲಿಗರಾದರು. ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ ಅವರು ಈ ಸಾಧನೆ ಮಾಡಿದರು. ಈ ಹಿಂದೆ 15.43 ಮೀಟರ್ ಸಾಧನೆಯೊಂದಿಗೆ ದಾಖಲೆ ಬರೆದಿದ್ದರು.

ಎರಡು ಬಾರಿ ಹೊರಾಂಗಣ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಗೆದ್ದಿರುವ ರೋಜಾಸ್15.67 ಮೀಟರ್‌ ಸಾಧನೆಯೊಂದಿಗೆ ಹೊರಾಂಗಣದಲ್ಲೂ ದಾಖಲೆ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ದಾಖಲೆ ಮೂಡಿಬಂದಿತ್ತು.

ಉಕ್ರೇನ್ ಅಥ್ಲೀಟ್‌ಗೆ ಬೆಳ್ಳಿ ಪದಕ

ಉಕ್ರೇನ್‌ನ ಮರೀನಾ ಬೆಖ್ ರೊಮಾಂಚುಕ್ ಬೆಳ್ಳಿ ಪದಕ ಗೆದ್ದುಕೊಂಡರು. ಅವರು 14.74 ಮೀಟರ್ಸ್ ದೂರ ಜಿಗಿದಿದ್ದರು. ಜಮೈಕಾದ ಕಿಂಬರ್ಲಿ ವಿಲಿಯಮ್ಸ್ (14.59 ಮೀಟರ್ಸ್‌) ಕಂಚಿನ ಪದಕ ಗಳಿಸಿದರು. ಯುದ್ಧಪೀಡಿತ ಉಕ್ರೇನ್‌ನ ಯರೊಸ್ಲಾವ ಮಹುಚಿಕ್ ಶನಿವಾರ ಹೈಜಂಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ತಜಿಂದರ್ ಪಾಲ್ ತೂರ್‌ಗೆ ನಿರಾಸೆ
ಶಾಟ್‌ಪಟ್‌ನಲ್ಲಿ ಏಷ್ಯಾದ ದಾಖಲೆ ಹೊಂದಿರುವ ಭಾರತದ ತಜಿಂದರ್ ಪಾಲ್ ಸಿಂಗ್ ತೂರ್ ಮೂರೂ ಪ್ರಯತ್ನಗಳಲ್ಲಿ ನಿರಾಸೆ ಅನುಭವಿಸಿದರು. ಇದರೊಂದಿಗೆ ಭಾರತದ ಅಥ್ಲೀಟ್‌ಗಳ ಅಭಿಯಾನ ಮುಕ್ತಾಯಗೊಂಡಿತು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ತೂರ್ ಇಲ್ಲಿ ಮೂರು ಪ್ರಯತ್ನಗಳಲ್ಲೂ ವೈಫಲ್ಯ ಕಂಡು ನಿರಾಸೆಯಿಂದ ಹೊರಬಿದ್ದರು.

ಬ್ರೆಜಿಲ್‌ನ ಡರ್ಲಾನ್ ರೊಮಾನಿ 22.53 ಮೀಟರ್ಸ್ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಅಮೆರಿಕದ ರಯಾನ್ ಕ್ರೌಜರ್ (22.44 ಮೀ) ಬೆಳ್ಳಿ ಮತ್ತು ನ್ಯೂಜಿಲೆಂಡ್‌ನ ಥಾಮಸ್ ವಾಲ್ಶ್‌ (22.31 ಮೀ) ಕಂಚಿನ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT