ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿ ಎದುರು ಆಡಿದ್ದ ಮಧುರ ನೆನಪು

ಬೆಂಗಳೂರಿನಿಂದ ಒಲಿಂಪಿಕ್ಸ್‌ಗೆ ತೆರಳಿದ್ದ ಹಿರಿಯ ಬಾಕ್ಸರ್‌ಗಳ ಮನದ ಮಾತುಗಳು: ಕರ್ನಾಟಕದಲ್ಲಿ ಬೆಳೆಸಲು ಆಗ್ರಹ
Last Updated 28 ನವೆಂಬರ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಅವರು ಆರೂವರೆ ಅಡಿ ಎತ್ತರದ ಅಜಾನುಬಾಹು. ಸಿಂಹದಂತಹ ಗಾಂಭೀರ್ಯ, ಚಲನವಲನ ನೋಟ. ಅವರ ಮುಂದೆ ನಾವು ಮರಿಗಳಂತೆ ಇದ್ದೆವು. ಆದರೂ ಅವರೊಂದಿಗೆ ರಿಂಗ್‌ನಲ್ಲಿ ಒಂದು ನಿಮಿಷದ ಬೌಟ್ ಆಡಿದ್ದು ಜೀವಮಾನದ ಅವಿಸ್ಮರಣೀಯ ನೆನಪು’–

ಒಲಿಂಪಿಯನ್ ಬಾಕ್ಸರ್‌ಗಳಾದ ಕ್ಯಾಪ್ಟನ್ ಅಮಲ್ ದಾಸ್ ಮತ್ತು ಜಿ. ಮನೋಹರ್ ಅವರ ಮಾತುಗಳಿವು. ಎಕ್ಸ್‌ಸ್ಟೆಪ್ ಇಂಡಿಯಾ ಗುರುವಾರ ಆಯೋಜಿಸಿದ್ದ ‘ಮೊಹಮ್ಮದ್ ಅಲಿ ಸ್ಮರಣೆ’ ಕಾರ್ಯಕ್ರಮದಲ್ಲಿ ಇಬ್ಬರೂ ಹಿರಿಯ ಬಾಕ್ಸಿಂಗ್ ಪಟುಗಳು ನೆನಪಿನಂಗಳದಲ್ಲಿ ತೇಲಿದರು.

‘ನಾವು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳು ಅವು. 1980ರ ಸಂದರ್ಭದಲ್ಲಿ ಮುಂಬೈನಲ್ಲಿ ನಡೆಯಲಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ ಅಂಗವಾಗಿ ದೆಹಲಿಯಲ್ಲಿ ಕಾರ್ಯಕ್ರಮ ಇತ್ತು. ದೆಹಲಿಯಲ್ಲಿ ನಡೆದಿದ್ದ ಒಂದು ಕಾರ್ಯಕ್ರಮದಲ್ಲಿ ಅಲಿಯೊಂದಿಗೆ ಪ್ರದರ್ಶನ ಬೌಟ್‌ಗಳನ್ನು ಏರ್ಪಡಿಸಲಾಗಿತ್ತು. ಅಲ್ಲಿ ಅವರೊಂದಿಗೆ ಕಣದಲ್ಲಿ ಆಡುವ ಅವಕಾಶ ದೊರೆಯಿತು. ಒಂದೊಂದು ನಿಮಿಷದ ಬೌಟ್ ಅದು. ಅವರ ಜೊತೆಗೆ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಅವರೊಬ್ಬ ಅಪ್ರತಿಮ ವ್ಯಕ್ತಿತ್ವದ ಬಾಕ್ಸಿಂಗ್ ಪಟುವಾಗಿದ್ದರು. ಬಹಳಷ್ಟು ಜನರಿಗೆ ಪ್ರೇರಣೆಯಾಗಿದ್ದರು’ ಎಂದು ನೆನಪಿಸಿಕೊಂಡರು.

‘ನಮ್ಮ ಸಮಯದಲ್ಲಿ ಬಾಕ್ಸಿಂಗ್‌ಗೆ ಅಷ್ಟೊಂದು ಜನಪ್ರಿಯತೆ ಇರಲಿಲ್ಲ. ಆದರೆ ನಾವು ಸೇನೆಯಲ್ಲಿದ್ದ ಕಾರಣ ಬಾಕ್ಸಿಂಗ್ ಆಡುವುದು ಕಡ್ಡಾಯವಾಗಿತ್ತು. ಆದರೆ ಅದರಿಂದ ನಮಗೆ ಒಳ್ಳೆಯದಾಯಿತು. 1980ರ ಒಲಿಂಪಿಕ್ಸ್‌ನಲ್ಲ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಆದರೆ ಈಗ ಬಾಕ್ಸಿಂಗ್‌ ಬಹಳ ದೊಡ್ಡ ಕ್ರೀಡೆಯಾಗಿ ಬೆಳೆದಿದೆ. ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ನಮ್ಮ ದೇಶದ ಪಟುಗಳು ಪದಕಗಳನ್ನು ಗೆದ್ದಿದ್ದಾರೆ. ಇದು ಸಂತಸದ ಸಂಗತಿ’ ಎಂದು ಮನೋಹರ್ ಹೇಳಿದರು.

‘ಮೊಹಮ್ಮದ್ ಅಲಿ ಅವರದ್ದು ಪ್ರೇರಣಾದಾಯಕ ವ್ಯಕ್ತಿತ್ವ. ಅವರ ಜೀವನ ಮತ್ತು ವೃತ್ತಿಯು ಅಮೋಘ ಯಾತ್ರೆಯಾಗಿದೆ. ನಮ್ಮ ಸಂಸ್ಥೆಯು ಅವರ ಆದರ್ಶಗಳ ಹಾದಿಯಲ್ಲಿ ನಡೆಯುತ್ತಿದೆ. ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಅನುಕೂಲ ಒದಗಿಸುವ ಉದ್ದೇಶ ನಮ್ಮದು. ಅದಕ್ಕಾಗಿಯೇ ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಕ್ರೀಡಾ ಬೂಟುಗಳನ್ನು ಮಾರುಕಟ್ಟೆಗೆ ತಂದಿದ್ದೇವೆ. ಭಾರತದಲ್ಲ್ಲಿ ಇನ್ನೂ ಹೆಚ್ಚು ಮಳಿಗೆಗಳನ್ನು ಆರಂಭಿಸುವ ಉದ್ದೇಶ ಇದೆ’ ಎಂದು ಹಾಂಗ್‌ಕಾಂಗ್ ಮೂಲದ ಎಕ್ಸ್‌ಸ್ಟೆಪ್ ಕಂಪೆನಿಯ ನಿರ್ದೇಶಕ ವಿಜಯ್ ಚೌಧರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT