ಮಹಿಳಾ ಹಾಕಿ ವಿಶ್ವಕಪ್‌: ಇತಿಹಾಸ ಬರೆಯಲು ಭಾರತ ಸನ್ನದ್ಧ

7
ಇಂದು ಐರ್ಲೆಂಡ್‌ ಎದುರು ಕ್ವಾರ್ಟರ್‌ ಫೈನಲ್‌ ಹೋರಾಟ

ಮಹಿಳಾ ಹಾಕಿ ವಿಶ್ವಕಪ್‌: ಇತಿಹಾಸ ಬರೆಯಲು ಭಾರತ ಸನ್ನದ್ಧ

Published:
Updated:
Deccan Herald

ಲಂಡನ್‌: ಈ ಬಾರಿಯ ಮಹಿಳಾ ಹಾಕಿ ವಿಶ್ವಕಪ್‌ನ ಗುಂಪು ಹಂತದಲ್ಲಿ ಏಳು ಬೀಳಿನ ಹಾದಿ ಸವೆಸಿರುವ ಭಾರತ ತಂಡ ಈಗ ಇತಿಹಾಸ ಬರೆಯಲು ಸನ್ನ‌ದ್ಧವಾಗಿದೆ.

ಗುರುವಾರ ನಡೆಯುವ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ರಾಣಿ ರಾಂಪಾಲ್‌ ಬಳಗ ಐರ್ಲೆಂಡ್‌ ಸವಾಲು ಎದುರಿಸಲಿದೆ.

ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ 44 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ದಾಖಲೆಗೆ ಪಾತ್ರವಾಗಲಿದೆ.

1974ರಲ್ಲಿ ಫ್ರಾನ್ಸ್‌ನ ಮ್ಯಾಂಡೆಲಿಯುನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತ್ತು. ಆ ಟೂರ್ನಿಯಲ್ಲಿ ನಾಲ್ಕನೆ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು.

ಅರ್ಜೆಂಟೀನಾದ ರೊಸಾರಿಯೊದಲ್ಲಿ ಆಯೋಜನೆಯಾಗಿದ್ದ ಹಿಂದಿನ ಆವೃತ್ತಿಯಲ್ಲಿ ಭಾರತ ತಂಡ ಎಂಟನೆ ಸ್ಥಾನ ಗಳಿಸಿತ್ತು.

ಹಿಂದಿನ ಈ ನಿರಾಸೆ ಮರೆಯಲು ಮತ್ತು ಈ ಬಾರಿ ಗುಂಪು ಹಂತದಲ್ಲಿ ಐರ್ಲೆಂಡ್‌ ವಿರುದ್ಧ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ರಾಣಿ ಪಡೆಗೆ ಈಗ ಉತ್ತಮ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಸವಾಲು ಆಟಗಾರ್ತಿಯರ ಮುಂದಿದೆ.

ಈ ಬಾರಿಯ ಟೂರ್ನಿಯ ಗುಂಪು ಹಂತದಲ್ಲಿ ಇಂಗ್ಲೆಂಡ್‌ ಮತ್ತು ಅಮೆರಿಕ ವಿರುದ್ಧ ಡ್ರಾ ಮಾಡಿಕೊಂಡಿದ್ದ ಭಾರತ, ಮಂಗಳವಾರ ರಾತ್ರಿ ನಡೆದಿದ್ದ ಇಟಲಿ ಎದುರಿನ ಕ್ರಾಸ್‌ ಓವರ್‌ ಹಣಾಹಣಿಯಲ್ಲಿ 3–0ರಿಂದ ಗೆದ್ದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು. ಈ ಪಂದ್ಯದಲ್ಲಿ ಲಾಲ್ರೆಮ್‌ಸಿಯಾಮಿ, ನೇಹಾ ಗೋಯಲ್‌ ಮತ್ತು ವಂದನಾ ಕಟಾರಿಯಾ ತಲಾ ಒಂದು ಗೋಲು ಗಳಿಸಿ ಗಮನ ಸೆಳೆದಿದ್ದರು. ಇವರು ಐರ್ಲೆಂಡ್‌ ವಿರುದ್ಧವೂ ಮೋಡಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಅನುಭವಿ ಆಟಗಾರ್ತಿ ಸವಿತಾ, ರಕ್ಷಣಾ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ. ಆದರೆ ಮುಂಚೂಣಿ ವಿಭಾಗದಲ್ಲಿ ತಂಡ ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ.

ಐರ್ಲೆಂಡ್‌ ಕೂಡಾ ಜಯದ ಕನಸು ಕಾಣುತ್ತಿದೆ. ಈ ತಂಡ ಈ ಬಾರಿ ಗುಂಪು ಹಂತದಲ್ಲಿ 3–1ರಿಂದ ಬಲಿಷ್ಠ ಅಮೆರಿಕವನ್ನು ಪರಾಭವಗೊಳಿಸಿತ್ತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 16ನೇ ಸ್ಥಾನ ಹೊಂದಿರುವ ಐರ್ಲೆಂಡ್‌, ಹೋದ ವರ್ಷ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಹಾಕಿ ವಿಶ್ವ ಲೀಗ್‌ ಸೆಮಿಫೈನಲ್ಸ್‌ ಟೂರ್ನಿಯ ಪಂದ್ಯದಲ್ಲಿ ಭಾರತವನ್ನು 2–1ಗೋಲುಗಳಿಂದ ಮಣಿಸಿತ್ತು. ಹೀಗಾಗಿ ರಾಣಿ ಬಳಗ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

***

ಇಂದಿನ ಪಂದ್ಯಗಳು

ಭಾರತ–ಐರ್ಲೆಂಡ್‌

ಆರಂಭ: ಸಂಜೆ 6

**

ನೆದರ್ಲೆಂಡ್ಸ್‌–ಇಂಗ್ಲೆಂಡ್‌

ಆರಂಭ: ರಾತ್ರಿ 8.15

ಸ್ಥಳ: ಲೀ ವ್ಯಾಲಿ ಹಾಕಿ ಆ್ಯಂಡ್‌ ಟೆನಿಸ್‌ ಸೆಂಟರ್‌.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !