ಶುಕ್ರವಾರ, ನವೆಂಬರ್ 15, 2019
20 °C

ಕ್ರೀಡಾಪಟುಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ರಿಜಿಜು

Published:
Updated:
Prajavani

ನವದೆಹಲಿ: ‘ಕ್ರೀಡಾಪಟುಗಳ ಆಯ್ಕೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಫೆಡರೇಷನ್‌ಗಳು ಅರ್ಹರನ್ನು ಆಯ್ಕೆ ಮಾಡುತ್ತವೆ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ಮುಂದಿನ ವರ್ಷ ಚೀನಾದಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ತಂಡವನ್ನು ಕಳಿಸುವ ಮುನ್ನ ಒಲಿಂಪಿಯನ್‌ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ಹಾಗೂ ತಮ್ಮ ನಡುವೆ ಟ್ರಯಲ್ಸ್‌ (51 ಕೆ.ಜಿ.ವಿಭಾಗದಲ್ಲಿ) ಆಯೋಜಿಸಬೇಕೆಂದು ಆಗ್ರಹಿಸಿದ್ದ ಜೂನಿಯರ್‌ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ಅವರು ಈ ಸಂಬಂಧ ಗುರುವಾರ, ರಿಜಿಜು ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಜು ‘ಈ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ಅರ್ಹರನ್ನು ಆಯ್ಕೆ ಮಾಡುವಂತೆ ಭಾರತ ಬಾಕ್ಸಿಂಗ್‌ ಫೆಡರೇಷನ್‌ಗೆ (ಬಿಎಫ್‌ಐ) ಸೂಚಿಸುತ್ತೇನೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ನನ್ನ ಪತ್ರಕ್ಕೆ ಕೂಡಲೇ ಸ್ಪಂದಿಸಿದ್ದಕ್ಕೆ ಧನ್ಯವಾದಗಳು ಸರ್‌. ಅಂತರರಾಷ್ಷ್ರೀಯ ಕೂಟಗಳಲ್ಲಿ ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಬೇಕೆಂಬುದು ಎಲ್ಲಾ ಕ್ರೀಡಾಪಟುಗಳ ಕನಸಾಗಿರುತ್ತದೆ. ಒಬ್ಬರ ಬಗ್ಗೆ ಅತಿಯಾದ ಒಲವು ತೋರಿ ಇನ್ನೊಬ್ಬರನ್ನು ಕಡೆಗಣಿಸುವ ಪ್ರವೃತ್ತಿಗೆ ಸಂಬಂಧಪಟ್ಟವರು ತಿಲಾಂಜಲಿ ಇಡುತ್ತಾರೆ ಎಂದು ಬಲವಾಗಿ ನಂಬಿದ್ದೇನೆ’ ಎಂದು ನಿಖತ್‌ ಅವರು ಮರು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)