ರೋಲರ್‌ ಸ್ಕೇಟಿಂಗ್‌: ರಿಯಾ ಮಿಂಚು

7

ರೋಲರ್‌ ಸ್ಕೇಟಿಂಗ್‌: ರಿಯಾ ಮಿಂಚು

Published:
Updated:
Deccan Herald

ರಿಯಾ ಎಲಿಜಬೆತ್ ಅಚ್ಚಯ್ಯ... ರೋಲರ್‌ ಸ್ಕೇಟಿಂಗ್‌ನಲ್ಲಿ ಸುದ್ದಿಮಾಡುತ್ತಿರುವ ಮೈಸೂರಿನ ಪ್ರತಿಭೆಯ ಹೆಸರಿದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪದಕಗಳನ್ನು ಬಾಚಿಕೊಂಡಿರುವ 17 ವಯಸ್ಸಿನ ಈ ಹುಡುಗಿ ಅಂತರರಾಷ್ಟ್ರೀಯಮಟ್ಟದಲ್ಲಿ ದೇಶದ ಕೀರ್ತಿಪತಾಕೆ ಹಾರಿಸಲು ಸಜ್ಜಾಗುತ್ತಿದ್ದಾರೆ.

18ನೇ ಏಷ್ಯನ್‌ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿದೆ. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಅವರು ನಾಲ್ಕನೇ ಬಾರಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಏಷ್ಯನ್‌ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್ 8 ರಿಂದ 15ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿದೆ.

ಈ ವರ್ಷದ ಆರಂಭದಲ್ಲಿ ನೆದರ್‌ಲೆಂಡ್‌ನಲ್ಲಿ ನಡೆದಿದ್ದ ವಿಶ್ವ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಅವರು ಜೂನಿಯರ್‌ ಬಾಲಕಿಯರ ವಿಭಾಗದ 42 ಕಿ.ಮೀ. ಮ್ಯಾರಥಾನ್‌ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದರು.

ವಿಜಯನಗರದಲ್ಲಿ ನೆಲೆಸಿರುವ ಕೆ.ಎನ್.ಅಚ್ಚಯ್ಯ ಮತ್ತು ಪ್ರಿಯಾ ಅಚ್ಚಯ್ಯ ದಂಪತಿ ಪುತ್ರಿ ರಿಯಾ ಅವರು ಎಸ್‌ಬಿಆರ್‌ಆರ್‌ ಮಹಾಜನ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ.

ರಿಯಾ ನಾಲ್ಕರ ಹರೆಯದಲ್ಲಿ ಸ್ಕೇಟಿಂಗ್ ಅಭ್ಯಾಸ ಆರಂಭಿಸಿದ್ದರು. ಸಂಜೆ ಹೊತ್ತು ಸಮಯ ಕಳೆಯಲು ಮತ್ತು ದೈಹಿಕ ಫಿಟ್‌ನೆಸ್‌ ಕಾಪಾಡಲು ಈ ಕ್ರೀಡೆ ಆಯ್ಕೆಮಾಡಿಕೊಂಡಿದ್ದ ಅವರು ಕ್ರಮೇಣ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳತೊಡಗಿದರು. ಒಂದೆರಡು ಸ್ಪರ್ಧೆಗಳಲ್ಲಿ ದೊರೆತ ಯಶಸ್ಸಿನಿಂದ ಈ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿಕೊಂಡರು.

‍ಪದಕಗಳ ಬೇಟೆ: ರಿಯಾ ಅವರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ 21 ಸಲ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟಾರೆ 110 ಚಿನ್ನ, 13 ಬೆಳ್ಳಿ ಹಾಗೂ 6 ಕಂಚಿನ ಪದಕಗಳು ಅವರ ಕೊರಳಿಗೇರಿವೆ.

ಏಳರ ಹರೆಯದಲ್ಲಿ ಮೊದಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಅವರು ಚೊಚ್ಚಲ ಪ್ರಯತ್ನದಲ್ಲೇ ಕಂಚು ಗೆದ್ದಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಏಳು ಸಲ ಸ್ಪರ್ಧಿಸಿರುವ ಅವರು 15 ಚಿನ್ನ, 5 ಬೆಳ್ಳಿ ಮತ್ತು 4 ಕಂಚು ಜಯಿಸಿದ್ದಾರೆ.

ಐಸ್‌ ಸ್ಕೇಟಿಂಗ್: ರಿಯಾ ಅವರು ರೋಲರ್‌ ಸ್ಕೇಟಿಂಗ್‌ ಜತೆ ಐಸ್‌ ಸ್ಕೇಟಿಂಗ್‌ನಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ತೋರಿದ್ದಾರೆ. 2013–14 (ಶಿಮ್ಲಾ), 2015–16 (ಗುಲ್ಮಾರ್ಗ್‌, ಕಾಶ್ಮೀರ) ಮತ್ತು 2016–17 ರಲ್ಲಿ ನಡೆದಿದ್ದ ರಾಷ್ಟ್ರೀಯ ಐಸ್‌ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಪದಕಗಳನ್ನು ಜಯಿಸಿದ್ದಾರೆ. 2015 ರ ಫೆಬ್ರುವರಿಯಲ್ಲಿ ದಕ್ಷಿಣ ಕೊರಿಯಾ ಸರ್ಕಾರ ಐಸ್‌ ಸ್ಕೇಟಿಂಗ್‌ ಶಿಬಿರಕ್ಕೆ ಆಹ್ವಾನಿಸಿದ್ದ ಭಾರತದ ಮೂವರು ಸ್ಕೇಟರ್‌ಗಳಲ್ಲಿ ರಿಯಾ ಒಬ್ಬರಾಗಿದ್ದರು.

ರಿಯಾ ಪ್ರಸ್ತುತ ಪುಣೆಯಲ್ಲಿ ಭಾರತ ರೋಲರ್‌ ಸ್ಕೇಟಿಂಗ್‌ ತಂಡದ ಕೋಚ್ ಶ್ರೀಕಾಂತ್‌ ರಾವ್‌ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸುತ್ತಿದ್ದಾರೆ. ‘ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವುದು ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಕಠಿಣ ಪ್ರಯತ್ನ ನಡೆಸುತ್ತಿದ್ದೇನೆ’ ಎಂಬುದು ಅವರ ಭರವಸೆಯ ನುಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !