ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾಖಲೆಗೆ ಹೊರಟ ಪೋರಿಗೆ ಯುಟ್ಯೂಬ್‌ ಗುರು

Last Updated 1 ಜುಲೈ 2019, 19:45 IST
ಅಕ್ಷರ ಗಾತ್ರ

ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಪ್ರತಿಭೆ ಯಾರ ಸ್ವತ್ತಲ್ಲ. ಕಲಿಯುವ ಮನಸ್ಸಿದ್ದರೆ ಜಗತ್ತೇ ತಿರುಗಿ ನೋಡುವ ಸಾಧನೆ ಮಾಡಬಹುದು ಎಂದು ತೋರಿಸಲು ಹೊರಟಿರುವವರು 9 ವರ್ಷದ ಬಾಲಕಿ ಸ್ತುತಿ ಕಿಶೋರ ಕುಲಕರ್ಣಿ.

ಕಿಶೋರ ಕುಲಕರ್ಣಿ ಮತ್ತು ರಶ್ಮಿ ಕುಲಕರ್ಣಿ ದಂಪತಿ ಪುತ್ರಿಸ್ತುತಿ ಇಲ್ಲಿನ ಪರಿವರ್ತನ ಗುರುಕುಲ ಹೆರಿಟೇಜ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ತನ್ನ ನಾಲ್ಕನೇ ವಯಸ್ಸಿನಲ್ಲಿ ಸಂಬಂಧಿಕರ ಮನೆಗೆ ಹೋದಾಗ, ಅಲ್ಲಿದ್ದ ರಿಂಗ್‌ ನೋಡಿ ಪ್ರೇರಿತಗೊಂಡಳು. ರಿಂಗ್‌ ಕಣ್ಣಿಗೆ ಬಿದ್ದದ್ದೇ ತಡ ಹೆತ್ತವರಿಗೆ ಬಂದು ತನಗೂ ರಿಂಗ್‌ ಕೊಡಿಸಿ ಎಂದು ಹಠ ಹಿಡಿದಳಂತೆ. ಹೆತ್ತವರು ಸಮಾಧಾನಿಸಲು ರಿಂಗ್‌ ತಂದುಕೊಟ್ಟರು. ಆದರೆ, ಸ್ತುತಿ ಮಾತ್ರ ಅದನ್ನೇ ತನ್ನ ಸಾಧನೆಯ ವಸ್ತುವನ್ನಾಗಿಸಿಕೊಂಡಳು.

ಸ್ತುತಿ ರಿಂಗ್‌ ಅನ್ನು ಪ್ರತಿನಿತ್ಯ ಸೊಂಟಕ್ಕೆ ಹಾಕಿಕೊಂಡು ಹುಲಾಹುಪ್‌ ಅಭ್ಯಾಸ ಮಾಡುತ್ತಿದ್ದಳಂತೆ. ಹೆತ್ತವರು ಆಕೆಯ ಆಸಕ್ತಿ ಕಂಡು, ಯು–ಟ್ಯೂಬ್‌ ವಿಡಿಯೊಗಳನ್ನು ತೋರಿಸಿ, ಅಭ್ಯಾಸ ಮಾಡುವಂತೆ ಪ್ರೋತ್ಸಾಹ ನೀಡಲು ಮುಂದಾದರು. ಸ್ತುತಿ ಸಿಕ್ಕ ಸಮಯವನ್ನೆಲ್ಲಾ ಹುಲಾಹುಪ್‌ ಅಭ್ಯಾಸದಲ್ಲಿಯೇ ಕಳೆಯುತ್ತಿದ್ದಳು. ಹೀಗೆ ಯು–ಟ್ಯೂಬ್‌ ವಿಡಿಯೊ ಮೂಲಕ ಪ್ರತಿಭೆ ಬೆಳೆದು ನಿಂತಿತು. ಇತ್ತೀಚೆಗೆ ಅದಕ್ಕೆ ಪೂರಕವಾಗಿ ಇನ್ನೊಂದು ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಅದುವೇ ಇನ್‌ಲೈನ್‌ ಸ್ಕೇಟಿಂಗ್‌.

ಇನ್‌ಲೈನ್‌ ಸ್ಕೇಟಿಂಗ್‌ ತರಬೇತಿಯನ್ನು ಹುಬ್ಬಳ್ಳಿ ರೋಲರ್‌ ಸ್ಕೇಟಿಂಗ್‌ ಕ್ಲಬ್‌ನ ಅಕ್ಷಯ ಸೂರ್ಯವಂಶಿ ಅವರ ಬಳಿ ಎರಡು ವರ್ಷದಿಂದ ಪಡೆಯುದ್ದಾಳೆ. ಅವರ ಮಾರ್ಗದರ್ಶನದಲ್ಲಿ ಇಂದಿರಾ ಗಾಜಿನ ಮನೆಯಲ್ಲಿ 2018ರಲ್ಲಿ , ಇನ್‌ಲೈನ್‌ ಸ್ಕೇಟಿಂಗ್‌ ಒಂದು ಹುಲಾಹುಪ್‌ ಅನ್ನು ತಿರುಗಿಸುವುದರ ಮೂಲಕ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌, ವರ್ಲ್ಡ್‌ ರೆಕಾರ್ಡ್‌ ಆಫ್‌ ಇಂಡಿಯಾ, ಅಮೇಜಿಂಗ್‌ ವರ್ಲ್ಡ್‌ ರೆಕಾರ್ಡ್‌, ಪರ್ಫೆಕ್ಷನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮತ್ತು ರೆಕಾರ್ಡ್‌ ಹೋಲ್ಡರ್ಸ್‌ ಆಫ್‌ ರಿಪಬ್ಲಿಕ್‌ ನಲ್ಲಿ 11.24 ನಿಮಿಷದಲ್ಲಿ ಹುಲಾಹುಪ್‌ ಮತ್ತು 42ನಿಮಿಷ 12 ಸೆಕೆಂಡು ಇನ್‌ಲೈನ್‌ ಸ್ಕೇಟಿಂಗ್‌ ಜತೆಗೆ 2,500 ಹುಲಾಹುಪ್‌ ಸುತ್ತುಗಳನ್ನು ಸುತ್ತುವುದರ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾಳೆ.

ಭಾರತೀಯ ಮಹಿಳಾ ಇನ್‌ಲೈನ್‌ಸ್ಕೇಟಿಂಗ್‌ ಸಾಧಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಸ್ತುತಿ, ಇತ್ತೀಚೆಗೆ ಇನ್‌ಲೈನ್‌ಸ್ಕೇಟಿಂಗ್‌ ಮೂರು ಹುಲಾಹುಪ್‌ ಅನ್ನು 9.27 ನಿಮಿಷದವರೆಗೆ ತಿರುಗಿಸಿ, ಎಲ್ಲರೂ ಹೆಬ್ಬೇರಿಸುವಂತಹ ಸಾಹಸ ಮಾಡಿದ್ದಾರೆ. ವಿಶ್ವದಾಖಲೆ ಮಾಡಲು 16 ವಯಸ್ಸಿರಬೇಕು. ಆದರೆ, ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಲು ಅರ್ಹಳಾಗಿರುವ ಈಕೆ, ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಬರೀ ಹುಲಾಹುಪ್‌ ಮಾಡುವುದೇ ಕಷ್ಟ ಅಂತಹದರಲ್ಲಿ ಇನ್‌ಲೈನ್‌ ಸ್ಕೇಟಿಂಗ್‌ ಮೇಲೆ ಹುಲಾಹುಪ್‌ ಅದು ಮೂರು ರಿಂಗ್‌ ಹಾಕಿಕೊಂಡು ಮಾಡುವುದೆಂದರೆ ಎಂತಹವರನ್ನೂ ಚಕಿತಗೊಳಿಸುತ್ತದೆ.

ಸ್ತುತಿ ಈಗ ಯು–ಟ್ಯೂಬ್‌ ಮೂಲಕ ಹೆಚ್ಚಿನ ತರಬೇತಿಯನ್ನು ದೆಹಲಿಯ ರಜನಿರಾಮಚಂದ್ರ ಅವರ ಬಳಿ ಪಡೆಯುತ್ತಿದ್ದಾರೆ. ಆಕೆಯಲ್ಲಿನ ನಿರಂತರ ಅಭ್ಯಾಸ, ಆಸಕ್ತಿ ಮತ್ತು ಬದ್ಧತೆಯೇ ಸಾಧನೆಗೆ ಕಾರಣ. ಮುಂದೆ ಆರ್ಟಿಸ್ಟಿಕ್‌ ಸ್ಕೇಟಿಂಗ್‌ ಆಗುವ ಕನಸು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT