ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಯಿಂಗ್‌ನಲ್ಲಿ ‘ತರುಣ’ ಪ್ರತಿಭೆ

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ರೋಯಿಂಗ್‌ನಲ್ಲಿ ವಿಶ್ವ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವಬೆಂಗಳೂರಿನ ಯುವ ಪ್ರತಿಭೆ ಜಿ. ತರುಣ್ ಕೃಷ್ಣ ಪ್ರಸಾದ್‌. ಇತ್ತೀಚೆಗಷ್ಟೇ ಥಾಯ್ಲೆಂಡ್‌ನ ಪಟ್ಟಾಯಾದಲ್ಲಿ ನಡೆದ ಏಷ್ಯನ್‌ ಜೂನಿಯರ್‌ ರೋಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿರುವ ತರುಣ್‌ ಹೊಸ ಭರವಸೆ ಎನಿಸಿದ್ದಾರೆ. ಕಾಕ್ಸ್‌ಲೆಸ್‌ ಫೋರ್ಸ್ ವಿಭಾಗದಲ್ಲಿ ಅವರಿಗೆ ಪದಕ ಒಲಿದಿದೆ.

ಬೆಂಗಳೂರಿನ ರಾಮಚಂದ್ರ ಮೆಡಿಕಲ್‌ ಕಾಲೇಜಿನಲ್ಲಿ ಸ್ಪೋರ್ಟ್ಸ್ ಮೆಡಿಸಿನ್‌ ವಿಷಯದಲ್ಲಿ ಬಿಎಸ್ಸಿ ‍ಪದವಿ ಪಡೆಯುತ್ತಿರುವ ತರುಣ್‌ ಅವರಿಗೆ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅದಮ್ಯ ಆಸೆ. 2011ರಿಂದೀಚೆಗೆ ರೋಯಿಂಗ್‌ನಲ್ಲಿತೊಡಗಿಸಿಕೊಂಡಿರುವ ಅವರ ಪ್ರಯತ್ನಕ್ಕೆ ಕುಟುಂಬದ ಅಪಾರ ಪ್ರೋತ್ಸಾಹವೇ ಬೆನ್ನೆಲುಬು. ಸೇನೆಯಲ್ಲಿರುವವರೇಪಾರಮ್ಯ ಸಾಧಿಸುತ್ತಿದ್ದ ರೋಯಿಂಗ್‌ನಲ್ಲಿ, ಸಾಕಷ್ಟು ಬೆಂಬಲ ಸಿಕ್ಕರೆ ನಾಗರಿಕರ ಮಕ್ಕಳೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ತರುಣ್‌.

18 ವರ್ಷದ ತರುಣ್‌, ಸೀನಿಯರ್,ಜೂನಿಯರ್ ವಿಭಾಗಗಳು ಸೇರಿಈವರೆಗೆ ಒಟ್ಟು ಒಂಬತ್ತು ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ ಐದು ಚಿನ್ನ ಎಂಬುದು ಗಮನಾರ್ಹ. ಒಂದು ಬೆಳ್ಳಿ ಹಾಗೂಮೂರು ಕಂಚಿನ ಪದಕಗಳು. 2013ರಿಂದ ಒಂದು ವರ್ಷವೂ ಅವರಿಗೆ ಪದಕ ಕೈ ತಪ್ಪಿಲ್ಲ.

ರಾಷ್ಟ್ರೀಯ ಸಿಂಗಲ್‌ ಸ್ಕಲ್ಲಿಂಗ್‌ ಸಬ್‌ ಜೂನಿಯರ್‌ ರೋಯಿಂಗ್‌ ಟೂರ್ನಿಯಲ್ಲಿ ಎರಡು ಚಿನ್ನ ಗೆದ್ದಕರ್ನಾಟಕದ ಮೊದಲ ಪಟು ಎಂಬ ಹೆಗ್ಗಳಿಕೆ ತರುಣ್‌ ಅವರದು. 2017ರಲ್ಲಿ ಅವರು ಈ ಸಾಧನೆ ಮಾಡಿದ್ದರು.

ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ) ಸೇನಾ ತುಕಡಿಯ ಕೋಚ್‌ಗಳೇ ಇವರಿಗೂ ತರಬೇತಿ ನೀಡುತ್ತಾರೆ.

2015ರವರೆಗೆ ಎಂಇಜಿ ಕೇಂದ್ರದಲ್ಲಿಯೇ ನಾಗರಿಕರ ಮಕ್ಕಳಿಗೂ ರೋಯಿಂಗ್‌ ತಾಲೀಮು ನಡೆಸಲು ಅವಕಾಶ ಇತ್ತು. ಆ ಬಳಿಕ ಕೇವಲ ಯೋಧರ ಮಕ್ಕಳಿಗೆ ಮಾತ್ರ ತರಬೇತಿ ಎಂಬ ನಿಯಮ ಜಾರಿಯಾಯಿತು. ಆದ್ದರಿಂದ ಕೆ.ಆರ್‌.ಪುರಂ ಸಮೀಪದ ಮೇಡಳ್ಳಿಯಲ್ಲಿರುವ ಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ತಾಲೀಮು ನಡೆಸಲು ನಾಗರಿಕರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ.ತರುಣ್‌ ಸೇರಿ ಇತರ ರೋಯಿಂಗ್‌ ಪಟುಗಳು ಬೆಳಿಗ್ಗೆ ಆರು ಗಂಟೆಯಿಂದ ಪ್ರಾಕ್ಟೀಸ್‌ ಆರಂಭಿಸುತ್ತಾರೆ.

2022ರ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗುರಿಯಾಗಿಸಿಕೊಂಡಿರುವ ತರುಣ್‌, ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ‘ಥಾಯ್ಲೆಂಡ್‌ನಲ್ಲಿ ಗಳಿಸಿದ ಪದಕದ ಆಧಾರದ ಮೇಲೆ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗುವ ವಿಶ್ವಾಸವಿದೆ. ಏಷ್ಯಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿಬಂದರೆ 2024ರ ಒಲಿಂಪಿಕ್ಸ್‌ ಕನಸು ಸಾಕಾರವಾಗಬಹುದು’ ಎಂಬುದು ಅವರ ಅಂಬೋಣ.

ಇಲಾಖೆಯಿಂದ ಅನುಕೂಲ

‘ಸಬ್ ಜೂನಿಯರ್,ಜೂನಿಯರ್,ಸೀನಿಯರ್ ವಿಭಾಗಗಳಲ್ಲಿ ತರಬೇತಿ ಕೊಡುತ್ತಿದ್ದೇವೆ. ರಾಜ್ಯದಲ್ಲಿ ಶಿಬಿರಗಳು ಇದ್ದ ವೇಳೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅನುಕೂಲ ಕಲ್ಪಿಸುತ್ತದೆ. ಬೆಂಗಳೂರಿಗೇ ಸೀಮಿತವಾಗಿರುವ ರೋಯಿಂಗ್‌ ಕ್ರೀಡೆಯನ್ನು ರಾಜ್ಯದ ಎಲ್ಲ ಕಡೆ ವಿಸ್ತರಿಸುವ ವಿಶ್ವಾಸವಿದೆ’ ಎಂದು ಕರ್ನಾಟಕದಲ್ಲಿ ಕ್ರೀಡೆಯ ಬೆಳವಣಿಗೆಯಕುರಿತು ಕರ್ನಾಟಕ ಆಮೆಚೂರ್‌ ರೋಯಿಂಗ್‌ ಸಂಸ್ಥೆಯಲ್ಲಿ ಆಡಳಿತ ಅಧಿಕಾರಿಯಾಗಿರುವ ಶಾಮಣ್ಣ ಹೇಳುತ್ತಾರೆ.‘ರಾಷ್ಟ್ರದಲ್ಲಿ ಸಬ್‌ ಜೂನಿಯರ್‌ ಆರಂಭವಾಗಿದ್ದು 1998ರಲ್ಲಿ. 2001ರವರೆಗೆ ಕರ್ನಾಟಕ ಪ್ರಾಬಲ್ಯ ಸಾಧಿಸಿತ್ತು. ನಂತರ ಉಳಿದ ರಾಜ್ಯಗಳು ಬೆಳವಣಿಗೆ ಕಂಡರೂ ರಾಜ್ಯದ ಸಾಮರ್ಥ್ಯ ಕುಂಠಿತಗೊಂಡಿಲ್ಲ’ ಎನ್ನುತ್ತಾರೆ ಶಾಮಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT