ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೂರ’ ಓಟ: ಆರೋಗ್ಯಕ್ಕೂ ಆಹ್ಲಾದಕ್ಕೂ

Last Updated 16 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಂಗಕಲೆಯಲ್ಲಿ ತೊಡಗಿಸಿಕೊಂಡಿದ್ದಾಗ ಬರಿಗಾಲಲ್ಲಿ ವೇದಿಕೆಯೇರಿದ್ದ ಅವರು ಮುಂಬೈ ಮಹಾನಗರಕ್ಕೆ ಕಾಲಿಟ್ಟ ನಂತರ ಶೂ ತೊಟ್ಟು ಓಟದಲ್ಲಿ ಭಾಗಿಯಾದರು. ವಾಣಿಜ್ಯ ನಗರಿಯಿಂದ ಅಮೆರಿಕಕ್ಕೆ ನೆಗೆತ. ಅಲ್ಲಿ, ಪರಿಸ್ಥಿತಿ ಶೂ ಬಿಚ್ಚಿಡುವಂತೆ ಮಾಡಿತು. ಬರಿಗಾಲಲ್ಲೇ ಕಿಲೋಮೀಟರ್‌ಗಟ್ಟಲೆ ಓಡಿ ಗಮನ ಸೆಳೆದರು. ಆರೋಗ್ಯ ಮತ್ತು ಮನಸ್ಸಿನ ಆಹ್ಲಾದಕ್ಕಾಗಿ ಓಡುವುದನ್ನು ಹವ್ಯಾಸ ಮಾಡಿಕೊಂಡಿರುವ ಹಳಿಯಾಳದ ನೀಲಿಮಾ ಪೈ ಅಮೆರಿಕದಲ್ಲಿ ಓಟದೊಂದಿಗೆ ಭಾರತದ ಸಂಸ್ಕೃತಿಯನ್ನೂ ಬಿಂಬಿಸಲು ಆಯ್ಕೆ ಮಾಡಿಕೊಂಡದ್ದು ಸೀರೆ.

ಮಿಯಾಮಿ ಮ್ಯಾರಥಾನ್‌ನಲ್ಲಿ ಪ್ರತಿ ವರ್ಷ ಸೀರೆಯುಟ್ಟು ‘ಹಾಫ್ ಮ್ಯಾರಥಾನ್’ ಓಡುವ ಅವರು ‘ಬೇರ್‌ಫೂಟ್ ನೀಲಿಮಾ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಈ ಬಾರಿಯ ಮಿಯಾಮಿ ಓಪನ್ ಕಳೆದ ಭಾನುವಾರ (ಫೆಬ್ರುವರಿ 9) ನಡೆಯಿತು. ಇದು ನೀಲಿಮಾ ಮತ್ತು ಪತಿ ವಿವೇಕ್ ಪೈ ಪಾಲ್ಗೊಂಡ ಐದನೇ ಮಿಯಾಮಿ ಮ್ಯಾರಥಾನ್. ನೀಲಿಮಾ ಅವರಿಗೆ ಈಗ 45 ವರ್ಷ; ಪತಿಗೆ 49. ಉತ್ಸಾಹ, ಹುಮ್ಮಸ್ಸು ಮತ್ತು ಉದ್ದೇಶಗಳಿದ್ದರೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬ ತತ್ವದಡಿ ಹವ್ಯಾಸವನ್ನು ಬೆಳೆಸಿಕೊಂಡಿರುವ ನೀಲಿಮಾ ದಂಪತಿ ಅನಾರೋಗ್ಯವನ್ನು ದೂರ ಇರಿಸಲು ಮತ್ತು ಚಟುವಟಿಕೆಯಿಂದ ಕೂಡಿರಲು ಆಯ್ಕೆ ಮಾಡಿಕೊಂಡಿರುವುದು ಓಟ.

ಓಟದತ್ತ ಹೊರಳಿದ ಬಗೆ..

ಹಳಿಯಾಳದಲ್ಲಿ, ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ; ಮದುವೆಯಾದ ನಂತರ ಓಟದ ‘ಟ್ರ್ಯಾಕ್’ಗೆ ಇಳಿಯಲು ಕಾರಣವಾದವರು ಪತಿ ವಿವೇಕ್ ಎನ್ನುತ್ತಾರೆ ನೀಲಿಮಾ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಮುಂಬೈಗೆ ತೆರಳಿದ ಅವರಿಗೆ ಅಲ್ಲಿನ ‘ಡ್ರೀಮ್ ಮ್ಯಾರಥಾನ್’ ಪರಿಚಯಿಸಿದ್ದು ವಿವೇಕ್ ಪೈ. ಅಲ್ಲಿ ಜನರ ಉತ್ಸಾಹ ಕಂಡ ನಂತರ ತಾವೂ ಓಡಲು ಆರಂಭಿಸಿದರು. ಓಟವು ಆರೋಗ್ಯಕ್ಕೆ ಸಹಕಾರಿ ಎಂದು ತಿಳಿದದ್ದು ಆಗಲೇ. ಕೋಚ್‌ಗಳಾದ ಸ್ಟ್ರೈಡರ್ಸ್ ಮತ್ತು ಪ್ರಫುಲ್ ಉಚ್ಚಿಲ ಅವರ ಬಳಿ ಶಿಸ್ತುಬದ್ಧ ತರಬೇತಿ ಪಡೆಯಲು ಆರಂಭಿಸಿದ ನಂತರ ಆಸಕ್ತಿ ಇನ್ನೂ ಹೆಚ್ಚಾಯಿತು.

ಉದ್ಯೋಗದ ನಿಮಿತ್ತ ಮಿಯಾಮಿಗೆ ಸ್ಥಳಾಂತರವಾದ ನಂತರವೂ ಓಟ ಮುಂದುವರಿಯಿತು. ಅಲ್ಲಿ ಬರಿಗಾಲಲ್ಲಿ ಓಡುವುದು ಮತ್ತು ಸೀರೆಯುಟ್ಟು ಓಡುವುದೂ ರೂಢಿಯಾಯಿತು. ಇದರ ಹಿಂದಿನ ಕಥೆಯನ್ನು ನೀಲಿಮಾ ಅವರೇ ದೂರವಾಣಿ ಮೂಲಕ ವಿವರಿಸಿದರು.

‘ನನಗೆ ನೆಲದ ಮೇಲೆ ಪ್ರೀತಿ ಹೆಚ್ಚು. ತಾಯ್ನಾಡಿನಿಂದ ದೂರ ಇರುವ ಕಾರಣ ಮಣ್ಣಿನ ನೆನಪಿಗಾಗಿ ಬರಿಗಾಲಲ್ಲಿ ಓಡುತ್ತಿದ್ದೇನೆ. ಆರಂಭದಲ್ಲಿ ಇಲ್ಲಿ ಭಾರತೀಯರನ್ನು ಕೀಳಾಗಿ ಕಾಣುವ ಪರಿಸ್ಥಿತಿ ಇತ್ತು. ಆಗ, ಜನರ ಗಮನ ಸೆಳೆದು ದೇಶದ ಬಗ್ಗೆ ತಿಳಿಸುವುದಕ್ಕಾಗಿ ಸೀರೆ ಉಟ್ಟು ಓಡತೊಡಗಿದೆ. ಮೊದಲ ವರ್ಷ ಸೀರೆ ಬಾಡಿಗೆಗೆ ಪಡೆದಿದ್ದೆ. ನಂತರ ಒಂಬತ್ತು ಮೊಳದ ಸೀರೆ ತರಿಸಿದೆ. ಈ ವರ್ಷ ಅಜ್ಜಿಯ ಸೀರೆಯುಟ್ಟು ಓಡಿದೆ, ಭಾವುಕಳಾದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT