ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ–ಕೆನಡಾ ಸಮಬಲದ ಕಾದಾಟ

ಮೊದಲ ಗೋಲು ಗಳಿಸಿದ ಆ್ಯಂಟುಲಿ ನಕೊಬೈಲ್‌; ಸೂಪರ್ ಗೋಲು ಗಳಿಸಿದ ಸ್ಕಾಟ್ ತೂಪರ್‌
Last Updated 2 ಡಿಸೆಂಬರ್ 2018, 16:53 IST
ಅಕ್ಷರ ಗಾತ್ರ

ಭುವನೇಶ್ವರ: ದಕ್ಷಿಣ ಆಫ್ರಿಕಾ ಮತ್ತು ಕೆನಡಾ ನಡುವಿನ ಪಂದ್ಯ ಡ್ರಾದಲ್ಲಿ ಮುಕ್ತಾಯೊಗೊಂಡಿತು. ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲು ಗಳಿಸಿದವು.

ಎರಡೂ ತಂಡಗಳು ಮೊದಲ ಪಂದ್ಯಗಳಲ್ಲಿ ಸೋತಿದ್ದವು. ದಕ್ಷಿಣ ಆಫ್ರಿಕಾ, 0–5ರಿಂದ ಭಾರತಕ್ಕೆ ಮಣಿದಿತ್ತು. ಕೆನಡಾವನ್ನು ಬೆಲ್ಜಿಯಂ 2–1ರಿಂದ ಸೋಲಿಸಿತ್ತು. ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿಯ ಪೈಪೋಟಿ ನಡೆಸಿದವು. ಮೊದಲಾರ್ಧದಲ್ಲಿ ಗೋಲು ಗಳಿಸದೇ ನಿರಾಸೆಗೆ ಒಳಗಾದ ತಂಡಗಳು ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಒಂದೊಂದು ಗೋಲು ಗಳಿಸಿದವು.

ಮೊದಲ ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಕ್ರಮಣಕಾರಿ ಆಟವಾಡಿತು. ನಾಲ್ಕು ಬಾರಿ ಎದುರಾಳಿ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿತು. ಆದರೆ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿ ನಿರಾಸೆಗೆ ಒಳಗಾಯಿತು.

ಎರಡನೇ ಕ್ವಾರ್ಟರ್‌ನಲ್ಲೂ ದಕ್ಷಿಣ ಆಫ್ರಿಕಾದ ಪ್ರಾಬಲ್ಯ ಮುಂದುವರಿಯಿತು. ಆದರೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಮತ್ತೊಮ್ಮೆ ವಿಫಲವಾಯಿತು. ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಚೆಂಡು ಗುರಿ ಸೇರಿಸಲು ಕೆನಡಾ ಆಟಗಾರರು ಅವಕಾಶ ನೀಡಲಿಲ್ಲ.

ಕೆನಡಾ ತಿರುಗೇಟು: ಮೂರನೇ ಕ್ವಾರ್ಟರ್‌ನಲ್ಲಿ ಕೆನಡಾ ತಿರುಗೇಟು ನೀಡಿತು. ಐದು ಬಾರಿ ದಕ್ಷಿಣ ಆಫ್ರಿಕಾದ ಆವರಣ ಪ್ರವೇಶಿಸಿ ಪಂದ್ಯವನ್ನು ರೋಚಕಗೊಳಿಸಿತು. ದಕ್ಷಿಣ ಆಫ್ರಿಕಾಗೆ ಮೂರು ಮತ್ತು ಕೆನಡಾಗೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಈ ಹಂತದಲ್ಲಿ ಲಭಿಸಿದ್ದವು. 43ನೇ ನಿಮಿಷದಲ್ಲಿ ಆ್ಯಂಟುಲಿ ನಕೊಬೈಲ್‌ ಗಳಿಸಿದ ಗೋಲು ಹರಿಣಗಳ ನಾಡಿನ ತಂಡದಲ್ಲಿ ಸಂಭ್ರಮ ಮೂಡಿಸಿತು. ಆದರೆ ಎರಡೇ ನಿಮಿಷಗಳಲ್ಲಿ ಸ್ಕಾಟ್ ತೂಪರ್‌ ಗಳಿಸಿದ ಗೋಲಿನ ಮೂಲಕ ಕೆನಡಾ ಸಮಬಲ ಸಾಧಿಸಿತು. ಅಂತಿಮ ಕ್ವಾರ್ಟರ್‌ನಲ್ಲಿ ಮುನ್ನಡೆಗಾಗಿ ನಡೆಸಿದ ಪ್ರಯತ್ನಕ್ಕೆ ಉಭಯ ತಂಡಗಳಿಗೂ ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT