ಶುಭಾಂಕರ್‌ ಮುಡಿಗೆ ಕಿರೀಟ

7
ಸಾರ್ಲೋರ್‌ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಔಸೆಫ್‌ಗೆ ಆಘಾತ

ಶುಭಾಂಕರ್‌ ಮುಡಿಗೆ ಕಿರೀಟ

Published:
Updated:
Deccan Herald

ಸಾರ್‌ಬ್ರುಕೆನ್‌, ಜರ್ಮನಿ: ಬಲಿಷ್ಠ ಆಟಗಾರನ ಎದುರು ಕೆಚ್ಚೆದೆಯಿಂದ ಹೋರಾಡಿದ ಭಾರತದ ಶುಭಾಂಕರ್‌ ಡೇ, ಸಾರ್ಲೋರ್‌ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ಶುಭಾಂಕರ್‌ 21–11, 21–14ರ ನೇರ ಗೇಮ್‌ಗಳಿಂದ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ಗೆ ಆಘಾತ ನೀಡಿದರು. ಈ ಹೋರಾಟ 34 ನಿಮಿಷ ನಡೆಯಿತು.

ಶ್ರೇಯಾಂಕ ರಹಿತ ಆಟಗಾರ ಶುಭಾಂಕರ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 37ನೇ ಸ್ಥಾನದಲ್ಲಿರುವ ರಾಜೀವ್‌ ಎದುರು ಆಡಿದ ಮೊದಲ ಪಂದ್ಯ ಇದಾಗಿತ್ತು.

ಮೊದಲ ಗೇಮ್‌ನ ಆರಂಭದಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಭಾರತದ ಆಟಗಾರ, ದ್ವಿತೀಯಾರ್ಧದಲ್ಲಿ ಮೋಡಿ ಮಾಡಿದರು. ಸತತ ಏಳು ಪಾಯಿಂಟ್ಸ್‌ ಕಲೆಹಾಕಿದ ಶುಭಾಂಕರ್‌, ಔಸೆಫ್‌ ಅವರನ್ನು ತಬ್ಬಿಬ್ಬುಗೊಳಿಸಿದರು.

ಎರಡನೇ ಗೇಮ್‌ನಲ್ಲಿ ಔಸೆಫ್‌ ತಿರುಗೇಟು ನೀಡುಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಶುರುವಿನಲ್ಲಿ ಮಿಂಚಿದ ಇಂಗ್ಲೆಂಡ್‌ನ ಆಟಗಾರ ನಂತರ ಮಂಕಾದರು. ವಿರಾಮದ ನಂತರ ಪಾರಮ್ಯ ಮೆರೆದ ಶುಭಾಂಕರ್‌ ಸತತ ಐದು ಪಾಯಿಂಟ್ಸ್‌ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿಕೊಂಡರು. ನಂತರವೂ ಛಲದಿಂದ ಹೋರಾಡಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಶುಭಾಂಕರ್‌ 21–18, 11–21, 24–22ರಲ್ಲಿ ಚೀನಾದ ರೆನ್‌ ಪೆಂಗ್ಬೊ ಅವರನ್ನು ಸೋಲಿಸಿದ್ದರು. ಎರಡನೇ ಸುತ್ತಿನ ಪೈಪೋಟಿಯಲ್ಲಿ ಚೀನಾದ ಲಿನ್‌ ಡಾನ್ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು.

‘ರಾಜೀವ್‌, ವಿಶ್ವಶ್ರೇಷ್ಠ ಆಟಗಾರ. ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದು ಅತೀವ ಖುಷಿ ನೀಡಿದೆ. ಇದು ನನ್ನ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ. ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ ಎದುರಾಳಿಯನ್ನು ಮಣಿಸಲು ಸಾಧ್ಯವಾಯಿತು’ ಎಂದು ಶುಭಾಂಕರ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಫೈನಲ್‌ಗೂ ಮುನ್ನ ಕಠಿಣ ಅಭ್ಯಾಸ ನಡೆಸಿದ್ದೆ. ರಾಜೀವ್‌ ಈ ಹಿಂದೆ ಆಡಿದ್ದ ಪಂದ್ಯಗಳ ವಿಡಿಯೊಗಳನ್ನು ವೀಕ್ಷಿಸಿದ್ದೆ. ಎದುರಾಳಿ ತುಂಬಾ ಬಲಿಷ್ಠ ಎಂಬುದರ ಅರಿವು ಇತ್ತು. ಹೀಗಿದ್ದರೂ ಯಾವ ಹಂತದಲ್ಲೂ ವಿಚಲಿತನಾಗದೆ ತಾಳ್ಮೆಯಿಂದ ಹೋರಾಡಿದೆ’ ಎಂದೂ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !