ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್, ಹೆಲ್ಮೆಟ್ ಮತ್ತು ಆಚ್ರೇಕರ್ ಸರ್‌

Last Updated 6 ಜನವರಿ 2019, 19:30 IST
ಅಕ್ಷರ ಗಾತ್ರ

ಸಚಿನ್ ತೆಂಡೂಲ್ಕರ್ ತಾವು ಆಡಿದ ಯಾವುದೇ ಪಂದ್ಯದಲ್ಲಿಯೂ ಹೆಲ್ಮೆಟ್ ಅಥವಾ ಕ್ಯಾಪ್‌ ಇಲ್ಲದೇ ಕ್ರೀಸ್‌ಗೆ ಇಳಿದದ್ದೇ ಇಲ್ಲ. ಬೇಕಾದರೆ ಅವರ ರಣಜಿ, ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಪಂದ್ಯಗಳ ದಾಖಲೆಗಳನ್ನು ಪರಿಶೀಲಿಸಿ. ಇದರ ಹಿಂದಿನ ಕಾರಣ ರಮಾಕಾಂತ್ ಆಚ್ರೇಕರ್.

ಸಚಿನ್ 14 ವರ್ಷದವರಾಗಿದ್ದಾಗ ದಾದರ್ ಸಮೀಪದ ಮಾತುಂಗಾ ಸ್ಪೋರ್ಟ್‌ ಕ್ಲಬ್‌ ಮೈದಾನದಲ್ಲಿ ನಡೆದಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದರು. ಸುಮಾರು ನಲ್ವತ್ತು ರನ್‌ ಗಳಿಸಿ ರನ್‌ಔಟ್ ಆಗಿದ್ದರು. ಪಂದ್ಯದ ನಂತರ ಬೌಂಡರಿಲೈನ್ ಬಳಿ ಸಚಿನ್‌ ನನ್ನು ತಮ್ಮೆದುರಿಗೆ ನಿಲ್ಲಿಸಿಕೊಂಡಿದ್ದ ಆಚ್ರೇಕರ್ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಅವರ ಕಣ್ಣುಗಳಲ್ಲಿ ಸಿಟ್ಟು ತಾಂಡವವಾಡುತ್ತಿತ್ತು. ಅದನ್ನು ದೂರದಿಂದ ನೋಡಿದ್ದ ನನಗೆ ಅಚ್ಚರಿಯಾಯಿತು. ಅರೆ ಸಚಿನ್ ಚೆನ್ನಾಗಿಯೇ ಆಡಿದ್ದ. ರನ್‌ಔಟ್ ಆಗಿದ್ದಕ್ಕಾಗಿ ಇಷ್ಟೊಂದು ಬೈಬೇಕಾ ಎಂಬ ಪ್ರಶ್ನೆಗಳು ಮೂಡಿದವು. ಅವರ ಸಮೀಪಕ್ಕೆ ಹೋದೆ. ಅಲ್ಲಿ ಆಚ್ರೇಕರ್ ಅವರ ಮಾತುಗಳನ್ನುಕೇಳಿ ಬೆರಗಾದೆ.

‘ತಲೆ ಮೇಲೆ ಕ್ಯಾಪ್ ಇಲ್ಲದೇ ಆಡಿದ್ದೀಯಾ ನೀನು. ಏನ್‌ ದೊಡ್ಡ ಆಟಗಾರನಾ ನೀನು. ಬಿಸಿಲಿನಲ್ಲಿ ಆಡುವಾಗ ಹೆಲ್ಮೆಟ್ ಅಥವಾ ಕ್ಯಾಪ್ ಧರಿಸುವುದರಿಂದ ಮರ್ಯಾದೆ ಹೋಗುವುದಿಲ್ಲ. ಅದರಿಂದ ನಿನ್ನ ತಲೆಗೆ ಬಿಸಿಲಿನಿಂದ ರಕ್ಷಣೆ ಸಿಗುತ್ತದೆ. ಕಣ್ಣುಗಳಿಗೆ ಬಿಸಿಗಾಳಿ ತಾಕುವುದು ಕಡಿಮೆಯಾಗುತ್ತದೆ. ಅದರಿಂದ ನಿನ್ನ ಏಕಾಗ್ರತೆ ಮತ್ತು ಚೆಂಡಿನ ಚಲನೆ ನೋಡುವ ಸಾಮರ್ಥ್ಯ ಹೆಚ್ಚುತ್ತದೆ. ಆಗಲೇ ನಿನಗೆ ದೀರ್ಘ ಇನಿಂಗ್ಸ್‌ ಆಡಲು ಸಾಧ್ಯ’ ಎಂದು ಅಚ್ರೇಕರ್ ಬುದ್ಧಿವಾದ ಹೇಳುತ್ತಿದ್ದರು. ಆ ದಿನದ ನಂತರ ಸಚಿನ್ ಯಾವ ಪಂದ್ಯದಲ್ಲಿಯೂ ಬರೀ ತಲೆಯಲ್ಲಿ ಆಡಿದ್ದನ್ನು ನೋಡಿಲ್ಲ. ಬೌಲಿಂಗ್ ಮಾಡುವಾಗಷ್ಟೇ ಅವರು ಕ್ಯಾಪ್ ತೆಗೆಯುತ್ತಿದ್ದರು.

ಆಚ್ರೇಕರ್ ಅವರುಅಪಾರ ಶಿಸ್ತಿನ ಮನುಷ್ಯ.ಹುಡುಗರ ಪಾಲಿಗೆ ಸ್ಟ್ರಿಕ್ಟ್‌ ಹೆಡ್‌ಮಾಸ್ಟರ್ ಇದ್ದಂಗೆ. ನಮ್ಮ ಮುಂಬೈ ಭಾಷೆಯಲ್ಲಿ ಅವರನ್ನು ‘ಖಡೂಸ್’ ಅಂದರೆ ಕಟ್ಟುನಿಟ್ಟಿನ ಮನುಷ್ಯ ಅಂತಾರೆ. ತಮ್ಮ ಇಡೀ ಜೀವನವನ್ನು ಕ್ರಿಕೆಟ್‌ಗಾಗಿಯೇ ಮುಡಿ ಪಾಗಿಟ್ಟವರು. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು.

ವಿಕೆಟ್‌ಕೀಪರ್ ಆಗಿ ಆಡಿದವರು. ಅವರು ಶಿವಾಜಿ ಪಾರ್ಕ್ ಮತ್ತು ಆಜಾದ್ ಮೈದಾನದಲ್ಲಿ ಕೋಚಿಂಗ್ ಅಕಾಡೆಮಿ ನಡೆಸುತ್ತಿದ್ದರು. ತಮ್ಮ ಲ್ಯಾಂಬ್ರಟಾ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರು. ಅವರ ಪಾಲಿಗೆ ಸಚಿನ್ ‘ಟ್ರಂಪ್ ಕಾರ್ಡ್’ ಆಟಗಾರನಾಗಿದ್ದ.

ಅವರ ಕ್ಲಬ್‌ಗಳ ಎರಡು ಮೂರು ತಂಡಗಳು ಬೇರೆ ಬೇರೆ ಕಡೆ ಪಂದ್ಯಗಳನ್ನು ಆಡುತ್ತಿದ್ದವು. ಸಚಿನ್ ಅವರನ್ನು ಒಂದೇ ದಿನದಲ್ಲಿ ಮೂರು ಪಂದ್ಯಗಳಲ್ಲಿ ಆಡಿಸಿದ್ದೂ ಇದೆ.

ಒಮ್ಮೆ ಶಿವಾಜಿ ಪಾರ್ಕ್‌ನಲ್ಲಿ ಸಚಿನ್ ಆಡುತ್ತಿದ್ದರು. ಅತ್ತ ಆಜಾದ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಆಚ್ರೇಕರ್ ಅವರ ತಂಡವು ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಶಿವಾಜಿ ಪಾರ್ಕ್‌ನಿಂದ ಸಚಿನ್‌ನನ್ನು ತಮ್ಮ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಆಡಿಸಿದ್ದರು. ಸಚಿನ್ ಉತ್ತಮವಾಗಿ ಆಡಿದ್ದರು. ಈ ತರಹದ ಚಟುವಟಿಕೆಯಿಂದ ಸಚಿನ್‌ಗೆ ಆದ ಲಾಭ ಹೆಚ್ಚು. ಒಂದೇ ದಿನ ಮೂರು ವಿಭಿನ್ನ ಪಿಚ್, ವಾತಾವರಣದಲ್ಲಿ ಹಾಗೂ ತಂಡಗಳ ಎದುರು ಆಡುವ ಅವಕಾಶ ಸಿಗುತ್ತಿತ್ತು.

ಇನ್ನೊಂದು ಘಟನೆ ಇಲ್ಲಿ ನೆನಪಾಗುತ್ತಿದೆ. ಮುಂಬೈ ಮಟ್ಟ ಕ್ರಿಕೆಟ್ ಟೂರ್ನಿಯ ಪಂದ್ಯ ಅದು. ನಾನು ಅಂಪೈರಿಂಗ್ ಮಾಡುತ್ತಿದ್ದೆ. ಆಚ್ರೇಕರ್ ಅವರ ತಂಡದ ಬ್ಯಾಟ್ಸ್‌ಮನ್‌ ಗೆ ಎಲ್‌ಬಿಡಬ್ಲ್ಯು ತೀರ್ಪು ಕೊಟ್ಟಿದ್ದೆ. ಆ ಹುಡುಗ ಹೋಗಿ ಆಚ್ರೇಕರ್‌ ಅವರಿಗೆ ನನ್ನ ಬಗ್ಗೆ ದೂರು ನೀಡಿದ್ದ. ಆಗ ಅವರು ‘ಯಾರು ಆ ಅಂಪೈರ್?’ ಎಂದು ವಿಚಾರಿಸಿದ್ದರು. ಆಗ ನನ್ನ ಹೆಸರು ಹೇಳಿದ ಬಾಲಕನ ಕಪಾಳಕ್ಕೆ ಹೊಡೆದಿದ್ದ ಅವರು, ‘ಕುಟೊ ಎಲ್‌ಬಿಡಬ್ಲ್ಯು ಡಿಸಿಷನ್ ಕೊಡುವುದೇ ಅಪರೂಪ. ಅವರು ಕೊಟ್ಟಿದ್ದಾರೆಂದರೆ ಅದು ಸರಿಯಾಗಿಯೇ ಇದೆ. ಆಡುವುದನ್ನು ಕಲಿ ಹೋಗು’ ಎಂದು ಜೋರು ಮಾಡಿದ್ದರಂತೆ. ಈ ಘಟನೆಯ ಹಲವು ದಿನಗಳ ನಂತರ ಅವರ ಕ್ಲಬ್‌ನಲ್ಲಿರುವ ನನ್ನ ಆಪ್ತರು ಈ ವಿಷಯವನ್ನು ಹೇಳಿದ್ದರು. ಅವರ ಕಾರ್ಯವೈಖರಿ ಮತ್ತು ಅವರಲ್ಲಿ ಪಳಗಿದ ಹುಡುಗರ ಆಟವನ್ನು ಕಂಡಿದ್ದೇನೆ. ಆದರೆ ಅವರೊಂದಿಗೆ ಹೆಚ್ಚು ನೇರ ಸಂಪರ್ಕ ಇರಲಿಲ್ಲ. ಅವರನ್ನು ಮೊದಲು ಭೇಟಿಯಾಗಿದ್ದು ನನ್ನ ತಮ್ಮ ರಿಚಿಯನ್ನು ಶಾರದಾಶ್ರಮ ಶಾಲೆಗೆ ಸೇರಿಸುವ ಸಲುವಾಗಿ.

ಅವರು ಕೊಟ್ಟ ಒಂದು ಸಣ್ಣ ಚೀಟಿಯಿಂದಾಗಿ ಯಾವುದೇ ದುಬಾರಿ ಶುಲ್ಕ, ಡೊನೇಷನ್ ಇಲ್ಲದೇ ಸೀಟು ಸಿಕ್ಕಿತ್ತು. ನನ್ನ ತಮ್ಮನಂತಹ ಹಲವು ಹುಡುಗರಿಗೆ ಅವರು ಇದೇ ರೀತಿ ಸೀಟು ಕೊಡಿಸಿದ್ದರು. ಕ್ರಿಕೆಟ್‌ನಲ್ಲಿ ಪ್ರತಿಭಾವಂತರಾದ ಮಕ್ಕಳಿಗೆ ಎಲ್ಲ ಸಹಾಯವನ್ನೂ ಮಾಡುತ್ತಿದ್ದರು. ಹಣಕ್ಕಾಗಿ ದುಡಿದವರಲ್ಲ.

ಅವರ ಬಳಿ ಸಚಿನ್ ಬಂದು ಸೇರುವ ಮುನ್ನವೇ ಹಲವು ಕ್ರಿಕೆಟಿಗರು ಮುಂಬೈನಲ್ಲಿ ಉತ್ತಮ ಹೆಸರು ಮಾಡಲು ಕಾರಣರಾಗಿದ್ದರು. ನಿತಿನ್ ಖಾಡೆ ಮತ್ತಿತರರು ಬೆಳಗಿದ್ದರು. ಆದರೆ ಸಚಿನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮೇಲೆಯೇ ಆಚ್ರೇಕರ್ ಹೆಸರು ಮುಂಚೂಣಿಗೆ ಬಂದಿತು. ಸಚಿನ್‌ಗೂ ಮುನ್ನ ಮತ್ತು ನಂತರವೂ ಅವರು ಮಾತ್ರ ಬದಲಾಗಲಿಲ್ಲ.

ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದವು. ಆದರೆ ವ್ಯಕ್ತಿತ್ವ ಹಾಗೆಯೇ ಇತ್ತು. ಕೊನೆಯವರೆಗೂ ಮಧ್ಯಮ ವರ್ಗದ ಕುಟುಂಬದ ಸಭ್ಯ ವ್ಯಕ್ತಿಯಾಗಿಯೇ ಬಾಳಿದರು. ಅವರ ಮಗಳು ಕಲ್ಪನಾ ಅವರು ಈಗ ಶಿವಾಜಿ ಪಾರ್ಕ್‌ನ ಕ್ಲಬ್‌ ನಿರ್ವಹಿಸುತ್ತಿದ್ದಾರೆ.

ಕ್ರಿಕೆಟ್‌ ಜಗತ್ತಿಗೆ ಹಲವು ದಿಗ್ಗಜರನ್ನು ಕೊಟ್ಟಿರುವ ಅವರು ಸಭ್ಯರ ಆಟದ ಮೌಲ್ಯಗಳನ್ನೂ ತಿಳಿಸಿಹೋಗಿದ್ದಾರೆ. ಅವುಗಳನ್ನು ಉಳಿಸಿಕೊಂಡು ಹೋಗುವುದೇ ಅವರಿಗೆ ನಾವು ನೀಡುವ ಗೌರವ.

(ಮುಂಬೈನಲ್ಲಿರುವ ಬಿಸಿಸಿಐ ಪ್ಯಾನೆಲ್‌ನ ವಿಶ್ರಾಂತ ಅಂಪೈರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT