ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಧರ, ಅರ್ಚನಾಗೆ ಚಿನ್ನ

ಮಂಗಳೂರಿನಲ್ಲಿ ಸಹ್ಯಾದ್ರಿ 10 ಕೆ ರನ್
Last Updated 2 ಫೆಬ್ರುವರಿ 2020, 18:04 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಭಾನುವಾರ ನಡೆದ ‘ಸಹ್ಯಾದ್ರಿ 10 ಕೆ ಮಂಗಳೂರು’ ಸ್ಪರ್ಧೆಯ10ಕೆ ಎಲಿಟ್ ಓಟದಲ್ಲಿ ಆದೇಶ್‌ (32 ನಿಮಿಷ 03 ಸೆಕೆಂಡ್) ಹಾಗೂ ಅರ್ಚನಾ ಕೆ.ಎಂ. (36ನಿ.28ಸೆ.) ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದ ಮೊದಲಿಗರಾಗಿ, ಚಿನ್ನಕ್ಕೆ ಮುತ್ತಿಕ್ಕಿದರು.

ಪ್ರಮುಖವಾಗಿ ಎಂಟು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಎಲಿಟ್ ಸ್ಪರ್ಧೆಯು ವೃತ್ತಿಪರರಿಗಾಗಿ ಮೀಸಲಾಗಿತ್ತು. ಈ ಪೈಕಿ ಪುರುಷರ ವಿಭಾಗದಲ್ಲಿ ದಿನೇಶ್ (32 ನಿ. 19 ಸೆ.) ಹಾಗೂ ಪ್ರವೀಣ್ ಕಂಬಳ (32 ನಿ.23ಸೆ.) ರೋಮಾಂಚನಕಾರಿ ಸ್ಪರ್ಧೆಯೊಡ್ಡಿದರೂ, ದ್ವೀತಿಯ ಹಾಗೂ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕೇವಲ 20 ಸೆಕುಂಡುಗಳ ಅಂತರದಲ್ಲಿ ಮೂವರು ಸ್ಥಾನ ಹಂಚಿಕೊಂಡರೆ, ನಾಲ್ಕನೇ ಸ್ಪರ್ಧಿ ಶಿವಂ ಯಾದವ್‌ (32 ನಿ. 40ಸೆ.) ಮೂಲಕ 17 ಸೆಕುಂಡುಗಳಲ್ಲಿ ಪದಕ ವಂಚಿತರಾದರು.

ಮಹಿಳಾ ವಿಭಾಗದಲ್ಲಿ ಪ್ರಮೀಳಾ ಯಾದವ್ ಹಾಗೂ ಚೈತ್ರಾ ದೇವಾಡಿಗ ಉತ್ತಮ ಸ್ಪರ್ಧೆಯನ್ನು ನೀಡಿದರೂ, ದ್ವಿತೀಯ ಹಾಗೂ ತೃತೀಯ ಸ್ಥಾನ ಗೆದ್ದುಕೊಂಡರು.

10 ಕೆ ಪುರುಷರ ಮುಕ್ತ ವಿಭಾಗದಲ್ಲಿ ಶ್ರೀಧರ–1, ವಾಸು–2, ಚೆಂಗಪ್ಪ ಎ.ಬಿ.–3 ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಮಿತಾ ಡಿ.ಆರ್.–1., ತಿಪ‍್ಪವ್ವ ಸಣ್ಣಕ್ಕಿ–2, ದೀಕ್ಷಾ ಬಿ.–3 ಸ್ಥಾನ ಪಡೆದರು. ಈ ವಿಭಾಗದಲ್ಲಿ ಹವ್ಯಾಸಿ ಓಟಗಾರರೂ ಪಾಲ್ಗೊಂಡಿದ್ದರು.

ಕಾಲೇಜು ವಿಭಾಗಕ್ಕೆ ಹಮ್ಮಿಕೊಂಡ 10ಕೆ (ಹುಡುಗಿಯರು)–ಪ್ರಿಯಾ ಎಲ್‌.ಡಿ–1, ಹರ್ಷಿತಾ ಕೆ.–2, ಅಂಜಲಿ ಕೆ.ಎಸ್.–3 ಹಾಗೂ 10ಕೆ (ಹುಡುಗರು)–ಬಸವರಾಜ ನೀಲಪ್ಪ ಗೊದ್ದಿ–1, ರಾಹುಲ್ ಕುಮಾರ್ ಶುಕ್ಲಾ–2, ಬಬ್ಲು ಪತಿಂಗಾ ಚೌಹಾಣ್–3 ಸ್ಥಾನ ಪಡೆದರು.

5ಕೆ ಬಾಲಕಿಯರ ವಿಭಾಗದಲ್ಲಿ ಮಾನ್ಯ ಕೆ.ಎಂ.–1, ಚಿಕ್ಕಮ್ಮ ಎಂ.ಕೆ.–2, ಸಂಧ್ಯಾ ಕೆ.ಆರ್.–3 ಪಡೆದರು. ಈ ವಿಭಾಗದ ಬಾಲಕರ ಸ್ಪರ್ಧೆಯ ಫಲಿತಾಂಶವನ್ನು ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಾಥ್‌ ನೀಡಿದ್ದವು. ಪ್ರಾಯೋಜಕತ್ವವನ್ನು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ವಹಿಸಿಕೊಂಡಿತ್ತು. ರಾಯಭಾರಿಯಾಗಿದ್ದ ನಟ, ಸಂಗೀತ ನಿರ್ದೇಶಕ ಗುರುಕಿರಣ್ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಅಲ್ಲದೇ, ಭವಿಷ್ಯದ ಒಲಿಂಪಿಕ್‌ಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ 2ಕೆ 5 ಕೆ ಮಜಾ ರನ್, ಹೆಲ್ದಿ ರನ್ ಹಾಗೂ ಆರೋಗ್ಯದ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ವಚ್ಛತೆ, ಪರಿಸರ, ಹಸಿರು, ಉಸಿರು ಎಂಬ ಧ್ಯೇಯದ ಈ ಓಟಕ್ಕೆ ಸುಮಾರು 7 ಸಾವಿರ ಓಟಗಾರರು ಸಾಕ್ಷಿಯಾದರು.

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ 10 ಕೆ ಓಟಕ್ಕೆ ಹಸಿರು ನಿಶಾನೆ ತೋರಿದ್ದು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT