ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಸಿದ್ಧತೆ: 398 ಕೋಚ್‌ಗಳ ನೇಮಕ– ಸಾಯ್‌

Last Updated 16 ಫೆಬ್ರುವರಿ 2022, 14:08 IST
ಅಕ್ಷರ ಗಾತ್ರ

ನವದೆಹಲಿ: 2024ರ ಪ್ಯಾರಿಸ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳಿಗೆ ತಯಾರಿ ನಡೆಸಲು 21 ವಿಭಾಗಗಳಲ್ಲಿ ವಿವಿಧ ಹಂತಗಳಲ್ಲಿ 398 ತರಬೇತುದಾರರನ್ನು ನೇಮಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಬುಧವಾರ ತಿಳಿಸಿದೆ.‌

ತರಬೇತುದಾರರು ಮತ್ತು ಸಹಾಯಕ ತರಬೇತುದಾರರನ್ನು ಒಳಗೊಂಡ ಗುಂಪಿನಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ರೋಯಿಂಗ್‌ ಪಟು ಬಜರಂಗ್ ಲಾಲ್ ಥಕ್ಕರ್‌ ಸೇರಿದಂತೆ ಹಲವು ಪ್ರಮುಖರು ಇದ್ದಾರೆ. ಬಜರಂಗ್‌ ಅವರಿಗೆ ರೋಯಿಂಗ್ ತರಬೇತಿಯ ಹೊಣೆ ನೀಡಲಾಗಿದೆ.

ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ ಚಿನ್ನದ ಪದಕ ವಿಜೇತೆ ಕುಸ್ತಿಪಟು ಶಿಲ್ಪಿ ಶೆರಾನ್ ಅವರು ಕುಸ್ತಿಯ ಸಹಾಯಕ ಕೋಚ್‌ ಆಗಿ ಸೇರ್ಪಡೆಗೊಂಡರೆ, ಒಲಿಂಪಿಯನ್ ಜಿನ್ಸಿ ಫಿಲಿಪ್ ಅಥ್ಲೆಟಿಕ್ಸ್ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಣಾಮಿಕಾ ಬೋರಾ ಅವರು ಬಾಕ್ಸಿಂಗ್‌ ಕೋಚ್ ಆಗಿ ನೇಮಕಗೊಂಡಿದ್ದಾರೆ.

‘2024, 2028ರ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೂಟಗಳಿಗೆ ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸಲು ಸಚಿವಾಲಯದ ಪ್ರಯತ್ನದ ಭಾಗವಾಗಿ ಈ ನೇಮಕಾತಿ ನಡೆದಿದೆ’ ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

398 ಕೋಚ್‌ಗಳ ಪೈಕಿ 101 ಮಂದಿಯನ್ನು ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ಮತ್ತು ಸರ್ಕಾರದ ಇನ್ನುಳಿದ ಸಂಸ್ಥೆಗಳಿಂದ ನಿಯೋಜನೆ ಮಾಡಲಾಗಿದೆ.

‘ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಹಲವಾರು ಮಾಜಿ ಅಥ್ಲೀಟ್‌ಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವುದು ಸಂತಸ ತಂದಿದೆ‘ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT