ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಕೋಚ್‌ಗಳ ಸೇವೆ ವಿಸ್ತರಿಸಿದ ಭಾರತ ಕ್ರೀಡಾ ಪ್ರಾಧಿಕಾರ

Last Updated 22 ಜುಲೈ 2020, 14:50 IST
ಅಕ್ಷರ ಗಾತ್ರ

ನವದೆಹಲಿ: ಒಟ್ಟು 11 ವಿಭಾಗಗಳಲ್ಲಿ ತರಬೇತಿ ನೀಡುತ್ತಿರುವ 32 ವಿದೇಶಿ ಕೋಚ್‌ಗಳ ಸೇವಾ ಅವಧಿಯನ್ನು ವಿಸ್ತರಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಬುಧವಾರ ನಿರ್ಧರಿಸಿದೆ. ನವೀಕರಿಸಿದ ಒಪ್ಪಂದದ ಅವಧಿ ಮುಂದಿನ ವರ್ಷದ ಸೆಪ್ಟೆಂಬರ್ ವರೆಗೆ ಇರಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳ ತರಬೇತಿಗೆ ತೊಂದರೆಯಾಗಬಾರದು ಎಂದು ಸಾಯ್ ಈ ನಿರ್ಧಾರಕ್ಕೆ ಬಂದಿದೆ.

ಬಾಕ್ಸಿಂಗ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಯಾಂಟಿಯಾಗೊ ನೀವಾ ಮತ್ತು ರಾಫೆಲ್ ಬರ್ಗಮಸ್ಕೊ, ಪುರುಷರ ಹಾಕಿ ತಂಡದ ಗ್ರಹಾಂ ರೀಡ್‌, ಶೂಟಿಂಗ್ ಕೋಚ್ ಪವೆಲ್ ಶಿರ್ನೊವ್ ಒಪ್ಪಂದವನ್ನು ವಿಸ್ತರಿಸಿಕೊಳ್ಳುತ್ತಿರುವವರ ಪೈಕಿ ಪ್ರಮುಖರು. 32 ಕೋಚ್‌ಗಳ ಪೈಕಿ ಹೆಚ್ಚಿನವರ ಸೇವಾ ಅವಧಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುಗಿಯಲಿದೆ. ಭಾರತ ಫುಟ್‌ಬಾಲ್ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿಲ್ಲ. ಆದರೂ ತಂಡದ ಕೋಚ್ ಐಗರ್ ಸ್ಟಿಮ್ಯಾಕ್‌ ಅವರ ಸೇವೆಯನ್ನು ಕೂಡ ವಿಸ್ತರಿಸಲಾಗಿದೆ. ಎರಡು ವರ್ಷಗಳ ಒಪ್ಪಂದದ ಪ್ರಕಾರ ಅವರನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ನೇಮಕ ಮಾಡಲಾಗಿತ್ತು. ಮುಂದಿನ ವರ್ಷದ ಸೆಪ್ಟೆಂಬರ್ ವರೆಗೆ ಕೋಚ್‌ಗಳ ಒಪ್ಪಂದವನ್ನು ವಿಸ್ತರಿಸಲಾಗುವುದು ಎಂದು ಕ್ರೀಡಾ ಇಲಾಖೆ ಇತ್ತೀಚೆಗೆ ತಿಳಿಸಿತ್ತು.

‘ಟೋಕಿಯೊ ಒಲಿಂಪಿಕ್ಸ್ ಮುಂದೂಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೋಚ್‌ಗಳನ್ನು ಬದಲಿಸಿದರೆ ಕ್ರೀಡಾಪಟುಗಳ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸದ್ಯ ವಿದೇಶಿ ಕೋಚ್‌ಗಳ ಸೇವೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹೊಸ ಕೋಚ್‌ಗಳಿಗೆ ಕ್ರೀಡಾಪಟುಗಳನ್ನು ಅರಿತುಕೊಳ್ಳಲು ಸಮಯ ಬೇಕಾಗುತ್ತದೆ. ಕೋಚ್‌ಗಳ ತರಬೇತಿ ಮಾದರಿಯನ್ನು ತಿಳಿದುಕೊಳ್ಳಲು ಕ್ರೀಡಾಪಟುಗಳಿಗೂ ಸಮಯ ಬೇಕಾಗುತ್ತದೆ. ಇಂಥ ಬದಲಾವಣೆಗಳಿಗೆ ನಮ್ಮಲ್ಲಿ ಈಗ ಸಮಯಾವಕಾಶವಿಲ್ಲ‘ ಎಂದು ಅವರು ವಿವರಿಸಿದ್ದಾರೆ. ಕೋಚ್‌ಗಳ ವೇತನ ಮತ್ತು ಇತರ ಸೌಲಭ್ಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾಯ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT