ಬುಧವಾರ, ನವೆಂಬರ್ 13, 2019
25 °C
ಭಾರತದ ಸವಾಲು ಅಂತ್ಯ

ಚೀನಾ ಓಪನ್: ಸಿನಿಸುಕಗೆ ಮಣಿದ ಪ್ರಣೀತ್‌

Published:
Updated:
Prajavani

ಚಾಂಗ್‌ಜೌ: ಭಾರತದ ಬಿ.ಸಾಯಿ ಪ್ರಣೀತ್‌ ಅವರು ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಪ್ರಣೀತ್‌ 21–16, 6–21, 16–21ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನ ಹೊಂದಿರುವ ಅಂಥೋಣಿ ಸಿನಿಸುಕ ಜಿಂಟಿಂಗ್‌ ಎದುರು ಮಣಿದರು. ಈ ಹೋರಾಟ 55 ನಿಮಿಷ ನಡೆಯಿತು.

ಹೋದ ತಿಂಗಳು ಬಾಸೆಲ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದ ಪ್ರಣೀತ್‌, ಇಲ್ಲಿ ನಿರಾಸೆ ಕಂಡರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 15ನೇ ಸ್ಥಾನ ಹೊಂದಿರುವ ಪ್ರಣೀತ್‌, ಮೊದಲ ಗೇಮ್‌ನಲ್ಲಿ ಮಿಂಚಿದರು. ಶುರುವಿನಿಂದಲೇ ಚುರುಕಿನ ಸಾಮರ್ಥ್ಯ ತೋರಿದ ಅವರು 11–3 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಸಿನಿಸುಕ ಹಿನ್ನಡೆಯನ್ನು 11–14ಕ್ಕೆ ತಗ್ಗಿಸಿಕೊಂಡರು. ನಂತರ ಪುಟಿದೆದ್ದ ಪ್ರಣೀತ್‌ ಗೇಮ್ ಗೆದ್ದು 1–0 ಮುನ್ನಡೆ ಪಡೆದರು.

ಆರಂಭಿಕ ನಿರಾಸೆಯಿಂದ ಸಿನಿಸುಕ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ಇಂಡೊನೇಷ್ಯಾದ ಆಟಗಾರ 9–4 ಮುನ್ನಡೆ ಪಡೆದರು. ನಂತರ ಸತತ ಆರು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡ ಅವರು ಮುನ್ನಡೆಯನ್ನು 11–5ಕ್ಕೆ ಹೆಚ್ಚಿಸಿಕೊಂಡರು. ದ್ವಿತೀಯಾರ್ಧದಲ್ಲೂ ಆಕರ್ಷಕ ಆಟ ಆಡಿದ ಸಿನಿಸುಕ, ನಿರಾಯಾಸವಾಗಿ ಭಾರತದ ಆಟಗಾರನ ಸವಾಲು ಮೀರಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನ ಆರಂಭದಲ್ಲಿ ಪ್ರಣೀತ್‌ 2–6ರಿಂದ ಹಿಂದಿದ್ದರು. ಇದರಿಂದ ಕಿಂಚಿತ್ತೂ ಎದೆಗುಂದದ ಅವರು ಬಳಿಕ ಚುರುಕಿನ ಸರ್ವ್‌ಗಳನ್ನು ಮಾಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. 11–7 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಭಾರತದ ಆಟಗಾರ ದ್ವಿತೀಯಾರ್ಧದಲ್ಲಿ ಮಂಕಾದರು.

ಇಂಡೊನೇಷ್ಯಾದ ಆಟಗಾರನ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಹಿಂತಿರುಗಿಸಲು ಪರದಾಡಿದ ಪ್ರಣೀತ್‌ 12–13ರಿಂದ ಹಿನ್ನಡೆ ಕಂಡರು. ಬಳಿಕವೂ ಸುಲಭವಾಗಿ ಪಾಯಿಂಟ್ಸ್‌ ಬಿಟ್ಟುಕೊಟ್ಟು ಸೋಲಿನ ಸುಳಿಗೆ ಸಿಲುಕಿದರು.

ಮುಂದಿನ ಸುತ್ತಿನಲ್ಲಿ ಸಿನಿಸುಕ ಅವರು ಡೆನ್ಮಾರ್ಕ್‌ನ ಎಂಟನೇ ಶ್ರೇಯಾಂಕದ ಆಟಗಾರ ಆ್ಯಂಡರ್ಸ್‌ ಆ್ಯಂಟೊನ್‌ಸನ್‌ ಎದುರು ಸೆಣಸಲಿದ್ದಾರೆ. ಆ್ಯಂಡರ್ಸ್‌ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.

ಪ್ರತಿಕ್ರಿಯಿಸಿ (+)