ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಶೋಧಕ್ಕೆ ಮುನ್ನುಡಿ

ಪೈವಳಿಕೆಯಲ್ಲಿ ಕಂಬಳ ವೀಕ್ಷಿಸಿದ ‘ಸಾಯ್’ ಪ್ರತಿನಿಧಿಗಳು
Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀನಿವಾಸಗೌಡ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಕಂಬಳದ ಓಟಗಾರರ ಪ್ರತಿಭಾ ಶೋಧಕ್ಕೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಮುಂದಾಗಿದ್ದು, ವ್ಯವಸ್ಥಿತ ತರಬೇತಿಗೆ ಸದ್ಯದಲ್ಲೇ ಯೋಜನೆ ಸಿದ್ಧಗೊಳಿಸಲಿದೆ.

ಶನಿವಾರ ರಾತ್ರಿ ಮತ್ತು ಭಾನುವಾರ ಕಾಸರಗೋಡಿನ ಮಂಜೇಶ್ವರ ಬಳಿಯ ಪೈವಳಿಕೆಯಲ್ಲಿ ನಡೆದ ಈ ಋತುವಿನ 13ನೇ ‘ಅಣ್ಣ-ತಮ್ಮ ಜೋಡುಕರೆ ಕಂಬಳ’ವನ್ನು ಬೆಂಗಳೂರಿನ ಸಾಯ್ ದಕ್ಷಿಣ ಭಾರತ ಕೇಂದ್ರದ ನಿರ್ದೇಶಕ ಅಜಯ್‌ಕುಮಾರ್ ಬೆಹಲ್ ನಿಯೋಗವು ವೀಕ್ಷಿಸಿದ್ದು, ಓಟಗಾರರನ್ನು ಬೆಂಗಳೂರಿಗೆ ಕಳುಹಿಸುವಂತೆ ಸಂಘಟಕರನ್ನು ಕೋರಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಜಯ್‌ಕುಮಾರ್ ‘ಕಂಬಳ ಹೇಗೆ ನಡೆಯುತ್ತದೆ ಎಂಬು
ದನ್ನು ನೋಡಲು ಹೋಗಿದ್ದೆವು. ಅವರಲ್ಲಿ ಪ್ರತಿಭೆ ಇದೆ ಎಂಬುದು ಮೊದಲ ನೋಟಕ್ಕೆ ಗೊತ್ತಾಯಿತು. ಓಟಗಾರರಿಗೆ ಶಿಸ್ತುಬದ್ಧ ತರಬೇತಿ ನೀಡು
ವುದರಿಂದ ಪ್ರತಿಭೆಗಳು ಸಿಗಬಹುದು ಎಂದೆನಿಸಿತು. ಮುಂದಿನ ಯೋಜನೆಗಳ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಾಗುವುದು’
ಎಂದು ಹೇಳಿದರು.

ಸಾಯ್ ಅಥ್ಲೆಟಿಕ್ಸ್ ಕೋಚ್‌ಗಳಾದ ಕುರಿಯನ್ ಪಿ.ಮ್ಯಾಥ್ಯೂ ಮತ್ತು ಹರೀಶ್ ನಿಯೋಗದಲ್ಲಿದ್ದರು. ಪ್ರಾಧಿಕಾರ
ದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇದ್ದು ಪ್ರತಿಭೆಗಳಿಗೆ ತರಬೇತಿ ನೀಡಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸಲು ಯೋಜನೆಗಳಿವೆ. ಈ ಪೈಕಿ ಯಾವುದಾದರೂ ಒಂದರಡಿಯಲ್ಲಿ ಕಂಬಳ ಓಟಗಾರರ ವೇಗವನ್ನು ಹೆಚ್ಚಿಸುವುದು ಸಾಯ್‌ನ ಉದ್ದೇಶ.

ಓಟಗಾರರು ಮತ್ತು ಸಂಘಟಕರ ಜೊತೆ ಪ್ರತಿನಿಧಿಗಳು ಶನಿವಾರ ರಾತ್ರಿ ಮಾತುಕತೆ ನಡೆಸಿದರು. ಈ ಋತುವಿನ ಕಂಬಳ ಮಾರ್ಚ್ ಏಳಕ್ಕೆ ಮುಕ್ತಾಯಗೊಳ್ಳಲಿದ್ದು, ನಂತರವಷ್ಟೇ ಸಾಯ್ ಆಹ್ವಾನದ ಬಗ್ಗೆ ಕಂಬಳ ಸಂರಕ್ಷಣೆ ಮತ್ತು ನಿರ್ವಹಣೆ ಅಕಾಡೆಮಿ ನಿರ್ಧಾರ ಕೈಗೊಳ್ಳಲಿದೆ.

‘ಅಭ್ಯಾಸ’ಕ್ಕೆ ಚಿಂತನೆ: ಕಂಬಳ ಓಟಗಾರರನ್ನು ಬೆಂಗಳೂರಿಗೆ ಕರೆಸಲು ಸಾಯ್ ಚಿಂತನೆ ನಡೆಸಿದ್ದರೂ ದಕ್ಷಿಣ ಕನ್ನಡದಲ್ಲೇ ಪ್ರಾಥಮಿಕ ಹಂತದ ತರಬೇತಿ ನೀಡಿ ಕಂಬಳದ ’ಕರೆ’ಯಿಂದ ಓಟದ ಟ್ರ್ಯಾಕ್‌ಗೆ ಒಗ್ಗುತ್ತಾರೆಯೇ ಎಂದು ಪರೀಕ್ಷಿಸಲು ಅಕಾಡೆಮಿ ಚಿಂತನೆ ನಡೆಸಿದೆ.

‘ಕಂಬಳ ಓಟಗಾರರ ಬಗ್ಗೆ ಮುತುವರ್ಜಿ ವಹಿಸಿರುವುದಕ್ಕೆ ಅಕಾಡೆಮಿ ಅಭಾರಿ. ಆದರೆ ಓಟಗಾರರಲ್ಲಿ ಭರವಸೆ ಮೂಡಿಸುವ ಹಾಗೂ ಅವರು ಸಿಂಥೆಟಿಕ್ ಟ್ರ್ಯಾಕ್‌ ಮತ್ತು ಸ್ಪೈಕ್ಸ್‌ ಬೂಟುಗಳಿಗೆ ಒಗ್ಗಿಕೊಳ್ಳುವಂತೆ ಮಾಡುವ ಅಗತ್ಯವಿದೆ. ಆದ್ದರಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣ ಅಥವಾ ಆಳ್ವಾಸ್ ಕಾಲೇಜು ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಟ್ರಯಲ್ ನಡೆಸಲು ಚಿಂತನೆ ನಡೆದಿದೆ. ಹೀಗಾಗಿ ಸಾಯ್‌ನ ಪ್ರತಿನಿಧಿಗಳ ಬಳಿ ಎರಡು ತಿಂಗಳ ಸಮಯ ಕೋರಲಾಗಿದೆ’ ಎಂದು ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ತಿಳಿಸಿದರು.

ಲೇಸರ್ ಬೀಮ್ ತಂತ್ರಜ್ಞಾನ ಬಳಕೆ

ಕಂಬಳ ಓಟಗಾರರು ತೆಗೆದುಕೊಳ್ಳುವ ‘ಕಾಲ’ ಕುರಿತ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಕಂಬಳ ಸಂರಕ್ಷಣೆ ಮತ್ತು ನಿರ್ವಹಣೆ ಅಕಾಡೆಮಿ ‘ಸ್ಟಾರ್ಟಿಂಗ್‌ ಪಾಯಿಂಟ್‌’ನಲ್ಲೂ ಲೇಸರ್ ಬೀಮ್ ತಂತ್ರಜ್ಞಾನ ಬಳಸಲು ಮುಂದಾಗಿದೆ. ಪೈವಳಿಕೆಯಲ್ಲಿ ಮೊದಲ ಬಾರಿ ಇದು ಜಾರಿಗೆ ಬಂದಿದೆ.

‘ಲೇಸರ್ ಬೀಮ್ ತಂತ್ರಜ್ಞಾನವನ್ನು ಫಿನಿಷಿಂಗ್ ಪಾಯಿಂಟ್‌ನಲ್ಲಿ ಕೆಲವು ವರ್ಷಗಳಿಂದ ಬಳಸಲಾಗುತ್ತಿದೆ. ಪೈವಳಿಕೆಗೆ ಸಾಯ್ ಪ್ರತಿನಿಧಿಗಳು ಬರುವುದು ಗೊತ್ತಾದ ಕೂಡಲೇ ಸ್ಟಾರ್ಟಿಂಗ್ ಪಾಯಿಂಟ್‌ನಲ್ಲೂ ಇದನ್ನು ಬಳಸಲು ನಿರ್ಧರಿಸಿದೆವು. ಇನ್ನು ಎಲ್ಲ ಕಡೆ ಇರುತ್ತದೆ’ ಎಂದು ಗುಣಪಾಲ ಕಡಂಬ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT