ಮಂಗಳವಾರ, ಡಿಸೆಂಬರ್ 6, 2022
20 °C
ಪ್ರಣಯ್‌, ಸಾಯಿ ಪ್ರಣೀತ್‌ಗೆ ಗೆಲುವು

ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್: ಸೈನಾಗೆ ಮೊದಲ ಸುತ್ತಿನಲ್ಲೇ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆಕ್ಲೆಂಡ್‌: ಮೊದಲ ಸುತ್ತಿನಲ್ಲೇ ಸೋಲನುಭವಿಸಿದ ಭಾರತದ ಸೈನಾ ನೆಹ್ವಾಲ್ ಅವರು ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರಬಿದ್ದರು. ಬುಧವಾರ ನಡೆದ ಪಂದ್ಯದಲ್ಲಿ ಸೈನಾ ತಮಗಿಂತ 10 ಕಿರಿಯರಾದ ಮತ್ತು ವಿಶ್ವ ರ‍್ಯಾಂಕಿಂಗ್‌ನಲ್ಲಿ ತಮಗಿಂತ 203 ಸ್ಥಾನಗಳ ಹಿಂದಿರುವ ಚೀನಾದ ವಾಂಗ್‌ ಝಿಯಿ ಅವರಿಗೆ ಮಣಿದರು.

ಒಲಿಂಪಿಕ್ಸ್ ಪದಕ ವಿಜೇತೆ, 29 ವರ್ಷದ ಸೈನಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 212ನೇ ಸ್ಥಾನದಲ್ಲಿರುವ ವಾಂಗ್‌ಗೆ ಮೊದಲ ಗೇಮ್‌ನಲ್ಲಿ ಕಠಿಣ ಪ್ರತಿಸ್ಪರ್ಧೆ ಒಡ್ಡಿದರು. ಎರಡನೇ ಗೇಮ್‌ನಲ್ಲಿ ಗೆದ್ದು ಭರವಸೆ ಹೆಚ್ಚಿಸಿಕೊಂಡರು. ಆದರೆ ಮೂರನೇ ಗೇಮ್‌ನಲ್ಲಿ ಚೀನಾ ಆಟಗಾರ್ತಿ ಏಕಪಕ್ಷೀಯ ಜಯ ಸಾಧಿಸಿ ಪಂದ್ಯ ಗೆದ್ದರು. ಪಂದ್ಯ ಒಂದು ತಾಸು ಮತ್ತು ಏಳು ನಿಮಿಷ ನಡೆದ ಪಂದ್ಯದಲ್ಲಿ ಸೈನಾ 16–21, 23–21, 4–21ರಲ್ಲಿ ಸೋತರು.

ಪುರುಷರ ಸಿಂಗಲ್ಸ್‌ ಪಂದ್ಯಗಳಲ್ಲಿ ಎಚ್‌.ಎಸ್.ಪ್ರಣಯ್ ಮತ್ತು ಬಿ.ಸಾಯಿ ಪ್ರಣೀತ್ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು.  ಪ್ರಣಯ್‌, 21–15, 21–14ರಲ್ಲಿ ಕೀನ್ ಯೇ ಲೋಹ್‌ ಎದುರು ಗೆದ್ದರೆ, ಪ್ರಣೀತ್‌ 21–17, 19–21, 21–15ರಲ್ಲಿ ಶುಭಂಕರ್ ಡೇ ಅವರನ್ನು ಸೋಲಿಸಿದರು. ಈ ಪಂದ್ಯ 71 ನಿಮಿಷ ನಡೆಯಿತು.

ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಯುವ ಆಟಗಾರ ಲಕ್ಷ್ಯ ಸೇನ್‌ ಪ್ರಬಲ ಪೈಪೋಟಿಯ ಕೊನೆಯಲ್ಲಿ ಸೋಲೊಪ್ಪಿಕೊಂಡರು. ಒಂದು ತಾಸು ಎಂಟು ನಿಮಿಷಗಳ ಹಣಾಹಣಿಯಲ್ಲಿ ಅವರನ್ನು ತೈವಾನ್‌ನ ವಾಂಗ್ ಜು ವೀ 15–21, 21–18, 21–10ರಲ್ಲಿ ಸೋಲಿಸಿದರು.

ಅಶ್ವಿನಿ–ಸಿಕ್ಕಿ ರೆಡ್ಡಿ ಜೋಡಿಗೆ ಸೋಲು: ಮಹಿಳೆಯರ ಡಬಲ್ಸ್‌ನಲ್ಲೂ ಭಾರತದ ಆಟಗಾರ್ತಿಯರು ಭರವಸೆ ಈಡೇರಿಸಲಿಲ್ಲ. ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಚೀನಾದ ಲಿಯು ಕ್ಸುವಾನ್ ಕ್ಸುವಾನ್‌ ಮತ್ತು ಕ್ಇಯಾ ಯೂಟಿಂಗ್ ವಿರುದ್ಧ 14–21, 23–21, 14–21ರಿಂದ ಸೋತರು.

ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ ಮುಂದಿನ ಸುತ್ತು ಪ್ರವೇಶಿಸಿದರು. ಸ್ಥಳೀಯ ಆಟಗಾರರಾದ ಜೋಶುವಾ ಫೆಂಗ್ ಮತ್ತು ಜ್ಯಾಕ್‌ ಜಿಯಾಂಗ್‌ ವಿರುದ್ಧ ಅವರು 21–17, 21–10ರಿಂದ ಗೆಲುವು ಸಾಧಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ 15ನೇ ಕ್ರಮಾಂಕದ ಲಿ ಕ್ಸೆರುಯಿ ಎದುರು ಅನುರಾ ಪ್ರಭು ದೇಸಾಯಿ 9–21, 10–21ರಿಂದ ಸೋತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು