ಶನಿವಾರ, ಆಗಸ್ಟ್ 24, 2019
27 °C

ಥಾಯ್ಲೆಂಡ್‌ ಓಪನ್‌: ಸೈನಾ ನಿರ್ಗಮನ

Published:
Updated:

ಬ್ಯಾಂಕಾಕ್‌: ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌, ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಜಪಾನ್‌ನ ಸಯಾಕಾ ಟಾಕಾಹಶಿ ಎದುರು ಅನಿರೀಕ್ಷಿತ ಸೋಲನುಭವಿಸಿದರು.

ಎರಡು ತಿಂಗಳ ನಂತರ ಕೋರ್ಟ್‌ಗಿಳಿದಿದ್ದ ಸೈನಾ, ಬುಧವಾರ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ ಗೆದ್ದರೂ ಅಂತಿಮವಾಗಿ 21–16, 11–21, 14–21 ರಿಂದ ಟಾಕಾಹಶಿ ಎದುರು ಸೋಲನುಭವಿಸಿದರು. 48 ನಿಮಿಷಗಳಲ್ಲಿ ಪಂದ್ಯ ಮುಗಿದುಹೋಯಿತು.

ಕೊನೆಯ ಗಳಿಗೆಯಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಈ ಟೂರ್ನಿಯಿಂದ ಹಿಂದೆಸರಿದಿದ್ದರು. ಸೈನಾ ನಿರ್ಗಮನದೊಡನೆ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಗಾಯಳಾಗಿದ್ದ ಕಾರಣ ಸೈನಾ, ಈ ಟೂರ್ನಿಗೆ ಮೊದಲು ನಡೆದಿದ್ದ ಇಂಡೊನೇಷ್ಯಾ ಮತ್ತು ಜಪಾನ್‌ ಓಪನ್‌ ಟೂರ್ನಿಗಳಲ್ಲಿ ಆಡಿರಲಿಲ್ಲ.

ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಎಂಟರ ಘಟ್ಟಕ್ಕೆ ಮುನ್ನಡೆಯಿತು. ಇವರಿಬ್ಬರು 21–17, 21–19 ರಿಂದ ಇಂಡೊನೇಷ್ಯಾದ ಫಜರ್‌ ಅಲ್ಫಿಯಾನ್‌ ಮತ್ತು ಮೊಹಮ್ಮದ್‌ ರಿಯಾನ್‌ ಆರ್ಡಿಯಾಂಟೊ ಜೋಡಿಯನ್ನು ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಭಾರತದ ಆಟಗಾರರು, ಅರ್ಹತಾ ಸುತ್ತಿನಿಂದ ಬಂದಿರುವ ದಕ್ಷಿಣ ಕೊರಿಯಾದ ಚೊಯ್‌ ಸೊಲ್‌ಗ್ಯು– ಸಿಯೊ ಸಿಯುಂಗ್‌ ಜೇ ಜೋಡಿಯ ವಿರುದ್ಧ ಆಡಲಿದ್ದಾರೆ.

Post Comments (+)