ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟ ಪ್ರವೇಶಿಸಿದ ಸಿಂಧು, ಸೈನಾ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಮೀರ್‌ ವರ್ಮಾಗೆ ಲಾಂಗ್ ಆ್ಯಂಗಸ್ ವಿರುದ್ಧ ಗೆಲುವು
Last Updated 26 ಏಪ್ರಿಲ್ 2019, 5:48 IST
ಅಕ್ಷರ ಗಾತ್ರ

ವುಹಾನ್,ಚೀನಾ (ಪಿಟಿಐ): ನೇರ ಗೇಮ್‌ಗಳಿಂದ ಎದುರಾಳಿಗಳನ್ನು ಮಣಿಸಿದ ಭಾರತದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎಂಟರ ಘಟ್ಟ ಪ್ರವೇಶಿಸಿದರು. ಪುರುಷರ ವಿಭಾಗದ ಪಂದ್ಯದಲ್ಲಿ ಆಧಿಪತ್ಯ ಸ್ಥಾಪಿಸಿದ ಸಮೀರ್ ವರ್ಮಾ ಕೂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು.

ಗುರುವಾರ ಬೆಳಿಗ್ಗೆ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ಇಂಡೊನೇಷ್ಯಾದ ಖೌರುನ್ನಿಸಾ ಎದುರು 21–15, 21–19ರಲ್ಲಿ ಗೆದ್ದರು. ನಾಲ್ಕನೇ ಶ್ರೇಯಾಂಕ ಹೊಂದಿರುವ ಸಿಂಧು ಎದುರಾಳಿಯನ್ನು ಮಣಿಸಲು ಕೇವಲ 33 ನಿಮಿಷ ತೆಗೆದುಕೊಂಡರು. ಮುಂದಿನ ಸುತ್ತಿನಲ್ಲಿ ಅವರು ಚೀನಾದ ಕಾಯ್‌ ಯನ್ಯಾನ್‌ ಎದುರು ಸೆಣಸುವರು.

ಸಂಜೆ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್‌ ಗಾ ಯೂನ್ ಎದುರು ಗೆಲ್ಲಲು ಸೈನಾ ನೆಹ್ವಾಲ್‌ಗೆ 38 ನಿಮಿಷಗಳು ಸಾಕಾದವು. ಎದುರಾಳಿಯನ್ನು 21–13, 21–13ರಲ್ಲಿ ಸೋಲಿಸಿದ ಸೈನಾ ಮುಂದಿನ ಘಟ್ಟದಲ್ಲಿ ಪ್ರಬಲ ಎದುರಾಳಿ, ಜಪಾನ್‌ನ ಅಕಾನೆ ಯಮಗುಚಿ ಅವರ ವಿರುದ್ಧ ಸೆಣಸುವರು.

ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಮೀರ್ ವರ್ಮಾ ಹಾಂಕಾಂಗ್‌ನ ಲಾಂಗ್‌ ಆ್ಯಂಗಸ್ ವಿರುದ್ಧ 21–12, 21–19ರಲ್ಲಿ ಗೆಲುವು ಸಾಧಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ನಿರಾಸೆ: ಭಾರತದ ಮಿಶ್ರ ಡಬಲ್ಸ್ ವಿಭಾಗದ ಜೋಡಿ ಉತ್ಕರ್ಷ್‌ ಅರೋರ ಮತ್ತು ಕರಿಷ್ಮಾ ವಾಡ್ಕರ್ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಇಂಡೊನೇಷ್ಯಾದ ಫೈಜಲ್ ಮತ್ತು ಗ್ಲೋರಿಯಾ ಇಮಾನ್ಯುಯೆಲ್ ಎದುರು 10–21, 15–21ರಲ್ಲಿ ಭಾರತದ ಜೋಡಿ ಸೋತಿತು. ವೆಂಕಟ್ ಗೌರವ್ ಪ್ರಸಾದ್ ಮತ್ತು ಯೂಹಿ ದೇವಾಂಗಣ್ ಚೀನಾದ ವಾಂಗ್ ಇಲ್ಯು–ಹಾಂಗ್ ಡಾಂಗ್‌ಪಿಂಗ್ ಅವರಿಗೆ 21–10, 21–9ರಲ್ಲಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT