ಸಿಂಧು, ಸೈನಾ, ಶ್ರೀಕಾಂತ್‌ಗೆ ₹ 80 ಲಕ್ಷ

7
ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಆಟಗಾರರ ಹರಾಜು: ಬೆಂಗಳೂರು ರ‍್ಯಾಪ್ಟರ್ಸ್‌ಗೆ ಸಾಯಿ ಪ್ರಣೀತ್‌

ಸಿಂಧು, ಸೈನಾ, ಶ್ರೀಕಾಂತ್‌ಗೆ ₹ 80 ಲಕ್ಷ

Published:
Updated:

ನವದೆಹಲಿ: ಭಾರತದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ನಾಲ್ಕನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದಿದ್ದಾರೆ.

ಸೋಮವಾರ ನಡೆದ ಹರಾಜಿನಲ್ಲಿ ‘ಐಕಾನ್‌ ಪ್ಲೇಯರ್‌’ಗಳಿಗೆ ₹80 ಲಕ್ಷ ಗರಿಷ್ಠ ಬೆಲೆ ನಿಗದಿಪಡಿಸಲಾಗಿತ್ತು. ಈ ಮೊತ್ತಕ್ಕೆ ಸಿಂಧು, ಸೈನಾ ಮತ್ತು ಶ್ರೀಕಾಂತ್‌ ಅವರು ಕ್ರಮವಾಗಿ ಹೈದರಾಬಾದ್‌ ಹಂಟರ್ಸ್‌, ನಾರ್ತ್‌ಈಸ್ಟರ್ನ್‌ ವಾರಿಯರ್ಸ್‌ ಮತ್ತು ಬೆಂಗಳೂರು ರ‍್ಯಾಪ್ಟರ್ಸ್‌ ತಂಡಗಳ ಪಾಲಾದರು. ಪ್ರಣಯ್‌ ಅವರನ್ನು ಡೆಲ್ಲಿ ಡ್ಯಾಷರ್ಸ್‌ ತನ್ನದಾಗಿಸಿಕೊಂಡಿತು.

ಸೈನಾ ಅವರ ಪ್ರಿಯಕರ ಪರುಪಳ್ಳಿ ಕಶ್ಯಪ್ ಅವರನ್ನು ಚೆನ್ನೈ ಸ್ಮ್ಯಾಷರ್ಸ್‌ ತಂಡ ₹ 5 ಲಕ್ಷಕ್ಕೆ ಖರೀದಿಸಿತು.

ಸ್ಪೇನ್‌ನ ಆಟಗಾರ್ತಿ, ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕ್ಯಾರೋಲಿನ್‌ ಮರಿನ್‌ ಅವರನ್ನು ಲೀಗ್‌ನ ನೂತನ ತಂಡ ಪುಣೆ 7 ಏಸಸ್‌ ₹80 ಲಕ್ಷ ನೀಡಿ ತನ್ನತ್ತ ಸೆಳೆದುಕೊಂಡಿತು. ಹಿಂದಿನ ಆವೃತ್ತಿಯಲ್ಲಿ ಹೈದರಾಬಾದ್‌ ಹಂಟರ್ಸ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮರಿನ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿ ಪುಣೆ ತಂಡದ ಸಹ ಮಾಲಕಿ, ನಟಿ ತಾಪ್ಸಿ ಪೊನ್ನು ಹರಾಜಿನಲ್ಲಿ ಮರಿನ್‌ ಮೇಲೆ ಹೆಚ್ಚಿನ ಬಿಡ್‌ ಮಾಡಲು ಮುಂದಾದರು.

ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ (ಅಹಮದಾಬಾದ್‌ ಸ್ಮ್ಯಾಷ್‌ ಮಾಸ್ಟರ್ಸ್‌), ದಕ್ಷಿಣ ಕೊರಿಯಾದ ಸಂಗ್‌ ಜಿ ಹ್ಯೂನ್‌ (ಚೆನ್ನೈ ಸ್ಮ್ಯಾಷರ್ಸ್‌) ಮತ್ತು ಲೀ ಹೊಂಗ್‌ ಡೇ (ಮುಂಬೈ ರ‍್ಯಾಕೆಟ್ಸ್‌) ಅವರಿಗೂ ₹ 80 ಲಕ್ಷ ಲಭಿಸಿತು.

ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದ ಆಟಗಾರ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ₹52 ಲಕ್ಷ ಮೌಲ್ಯ ಪಡೆದು ಅಚ್ಚರಿ ಮೂಡಿಸಿದರು. ‘ನಾಕ್‌ ಐಕಾನ್‌ ಪ್ಲೇಯರ್‌’ ವಿಭಾಗದಲ್ಲಿದ್ದ ಅವರನ್ನು ಖರೀದಿಸಲು ಫ್ರಾಂಚೈಸ್‌ಗಳು ಪೈಪೋಟಿ ನಡೆಸಿದವು. ಅಂತಿಮವಾಗಿ ಅಹಮದಾಬಾದ್‌ ಮಾಸ್ಟರ್ಸ್‌ ತಂಡ ‘ಬಿಡ್‌’ ಗೆದ್ದಿತು.

ಇಂಡೊನೇಷ್ಯಾದ ಟಾಮಿ ಸುಗಿಯಾರ್ಟೊ ಅವರ ಮೇಲೂ ಫ್ರಾಂಚೈಸ್‌ಗಳು ಹೆಚ್ಚಿನ ಒಲವು ತೋರಿದವು. ಹೀಗಾಗಿ ಅವರ ಬೆಲೆ ಏರುಗತಿಯಲ್ಲೇ ಸಾಗಿತು. ಡೆಲ್ಲಿ ಡ್ಯಾಷರ್ಸ್‌ ತಂಡ ₹ 70 ಲಕ್ಷಕ್ಕೆ ಟಾಮಿ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಬಿ.ಸಾಯಿ ಪ್ರಣೀತ್‌, ಮಾರ್ಕಸ್‌ ಎಲ್ಲಿಸ್‌, ಹೆಂಡ್ರಾ ಸೆತಿಯವಾನ್‌ ಅವರನ್ನೂ ಬೆಂಗಳೂರು ಫ್ರಾಂಚೈಸ್‌ ಹೆಚ್ಚಿನ ಮೊತ್ತ ನೀಡಿ ಖರೀದಿಸಿತು.

ಕರ್ನಾಟಕದ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ₹32 ಲಕ್ಷಕ್ಕೆ ಅವಧ್‌ ವಾರಿಯರ್ಸ್‌ ತಂಡ ಸೇರಿದರು.

ನಾಲ್ಕನೇ ಆವೃತ್ತಿಯ ಲೀಗ್‌ಗೆ ಡಿಸೆಂಬರ್‌ 22ರಂದು ಮುಂಬೈನಲ್ಲಿ ಚಾಲನೆ ಸಿಗಲಿದೆ. ಫೈನಲ್‌ ಪಂದ್ಯ 2019ರ ಜನವರಿ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಆಟಗಾರರನ್ನು ಖರೀದಿಸಲು ಫ್ರಾಂಚೈಸ್‌ಗಳಿಗೆ ಗರಿಷ್ಠ ₹2.6 ಕೋಟಿ ಮೊತ್ತ ನಿಗದಿಮಾಡಲಾಗಿತ್ತು. ಈ ಪೈಕಿ ಅವಧ್‌ ವಾರಿಯರ್ಸ್‌ ಮತ್ತು ಮುಂಬೈ ರ‍್ಯಾಕೆಟ್ಸ್‌ ತಂಡಗಳು ತಮ್ಮ ಪಾಲಿನ ಹಣವನ್ನು ವಿನಿಯೋಗಿಸಿದವು. ಪುಣೆ ತಂಡ ₹14 ಲಕ್ಷ ಉಳಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !