ಗುರುವಾರ , ಡಿಸೆಂಬರ್ 8, 2022
18 °C
ಬ್ಯಾಸ್ಕೆಟ್‌ಬಾಲ್‌: ಹೈಸ್ಕೂಲ್ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಬಾಲಕ–ಬಾಲಕಿಯರ ತಂಡಗಳಿಗೆ ಗೆಲುವು

ಬ್ಯಾಸ್ಕೆಟ್‌ಬಾಲ್‌: ಸೇಂಟ್ ಜೋಸೆಫ್ಸ್‌, ನಿಟ್ಟೆ ತಂಡಗಳ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಸೇಂಟ್ ಜೋಸೆಫ್ಸ್ ಮತ್ತು ನಿಟ್ಟೆ ಕಾಲೇಜು ತಂಡಗಳು ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಆಶ್ರಯದ ನಿಟ್ಟೆ ಯುನಿವರ್ಸಿಟಿ ಕಪ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಜಯ ಸಾಧಿಸಿದವು.

ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನ ಪುರುಷರ ಲೀಗ್ ಪಂದ್ಯದಲ್ಲಿ ಸೇಂಟ್ ಜೋಸೆಫ್ಸ್ ತಂಡ 40–34ರಲ್ಲಿ ಸೇಂಟ್ ಅಲೋಷಿಯಷ್ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ 22–11ರ ಮುನ್ನಡೆ ಗಳಿಸಿದ್ದ ಜೋಸೆಫ್ಸ್‌ ತಂಡ ದ್ವಿತೀಯಾರ್ಧದಲ್ಲಿ ಪಟ್ಟು ಇನ್ನಷ್ಟು ಬಿಗಿಗೊಳಿಸಿತು. ತಂಡದ ಆಲ್ಡೆನ್ 11 ಪಾಯಿಂಟ್ ಗಳಿಸಿದರು. ಸೇಂಟ್ ಅಲೋಷಿಯಸ್‌ನ ಪ್ರದೀಪ್ ಗಳಿಸಿದ 23 ಪಾಯಿಂಟ್‌ಗಳಿಗೆ ಫಲ ಸಿಗಲಿಲ್ಲ. 

ಮಹಿಳೆಯರ ವಿಭಾಗದಲ್ಲಿ ಹೊನ್ನುಶ್ರೀ ತಂದುಕೊಟ್ಟ ಭರ್ಜರಿ 18 ಪಾಯಿಂಟ್‌ಗಳ ನೆರವಿನಿಂದ ನಿಟ್ಟೆ ಕ್ಯಾಂಪಸ್ ತಂಡ ಸೇಂಟ್ ಅಲೋಷಿಯಸ್ ತಂಡವನ್ನು 61–14ರಲ್ಲಿ ಮಣಿಸಿತು. ಮೊದಲಾರ್ಧದಲ್ಲಿ 29 ಪಾಯಿಂಟ್ ಗಳಿಸಿದ್ದ ನಿಟ್ಟೆ ತಂಡ 12 ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿತ್ತು.

ಮೌಂಟ್ ಕಾರ್ಮೆಲ್, ಅಲೋಷಿಯಸ್‌ಗೆ ಜಯ

ಹೈಸ್ಕೂಲ್ ವಿಭಾಗದಲ್ಲಿ ಮಂಗಳೂರಿನ ಮೌಂಟ್ ಕಾರ್ಮೆಲ್ ಬಾಲಕ ಮತ್ತು ಬಾಲಕಿಯರ ತಂಡಗಳು ಜಯ ಸಾಧಿಸಿದವು. ಬಾಲಕರ ವಿಭಾಗದಲ್ಲಿ ಡೇಲ್ ಗಳಿಸಿದ 13 ಪಾಯಿಂಟ್‌ಗಳ ಬಲದಿಂದ ಕಾರ್ಮೆಲ್ ತಂಡ ಸೇಂಟ್ ಅಲೋಷಿಯಸ್ ಗೊನ್ಜಾಗ ತಂಡವನ್ನು 31–16ರಲ್ಲಿ ಮಣಿಸಿತು. ಅಲೋಷಿಯಸ್ ಪರ ಜೊಯೆಲ್ ಮತ್ತು ಕೇತ್ ತಲಾ 5 ಪಾಯಿಂಟ್ ಕಲೆ ಹಾಕಿದರು. ಶಾನುಯಿ (5) ಅವರ ಅಮೋಘ ಆಟದ ಬಲದಿಂದ ಬಾಲಕಿಯರ ವಿಭಾಗದಲ್ಲಿ ಕಾರ್ಮೆಲ್ ತಂಡ ಅಲೋಷಿಯಸ್ ಗೊನ್ಜಾಗ ವಿರುದ್ಧ 16–8ರ ಜಯ ಸಾಧಿಸಿತು. ಪ್ರಥಮಾರ್ಧದಲ್ಲೂ ದ್ವಿತೀಯಾರ್ಧದಲ್ಲೂ ತಲಾ 4 ಪಾಯಿಂಟ್ ಮಾತ್ರ ಗಳಿಸಿದ ಅಲೋಷಿಯಸ್ ಗೊನ್ಜಾಗ ದ್ವಿತೀಯಾರ್ಧದಲ್ಲಿ 2 ಪಾಯಿಂಟ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿತು. ತಂಡದ ಪರ ಶಿನೀದ್‌ ಒಟ್ಟು 6 ಪಾಯಿಂಟ್ ಗಳಿಸಿದರು.

ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ಅಲೋಷಿಯಸ್ ಗೊನ್ಜಾಗ ತಂಡ ನಿಟ್ಟೆ ತಂಡವನ್ನು 21–19ರಲ್ಲಿ ಮಣಿಸಿತು. ಅಲೋಷಿಯಸ್ ಪರ ಆ್ಯಷ್ಟನ್ 11 ಮತ್ತು ನಿಟ್ಟೆ ಪರ ಸುಚಿತ್ 8 ಪಾಯಿಂಟ್ ಗಳಿಸಿದರು. ಮೊದಲ ಪಂದ್ಯದಲ್ಲಿ ಅಲೋಷಿಯಸ್ ಗೊನ್ಜಾಗ 7–23ರಲ್ಲಿ ಮೌಂಟ್ ಕಾರ್ಮೆಲ್‌ ತಂಡಕ್ಕೆ ಮಣಿದಿತ್ತು. ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ 38–10ರಲ್ಲಿ ಸೇಂಟ್ ಆ್ಯಗ್ನೆಸ್‌ ಎದುರು ಗೆದ್ದಿತು. ಅಹಾನ 12 ಪಾಯಿಂಟ್ ಗಳಿಸಿ ಕಾರ್ಮೆಲ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು