ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಮರಳಲ್ಲಿ ಅರಳುವ ಫಿಟ್‌ನೆಸ್

Last Updated 16 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

‘ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ ನಾನು ದಿನದ 10 ಗಂಟೆ ಕುಳಿತು ಕೆಲಸ ಮಾಡುವ ಅನಿವಾರ್ಯತೆಯಿದೆ. ಕೆಲ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ದೇಹದಲ್ಲಿ ನಿತ್ರಾಣ, ಕೆಲಸದಲ್ಲಿ ನಿರಾಸಕ್ತಿ, ಆರೋಗ್ಯದಲ್ಲಿ ಏರುಪೇರು ಕಂಡುಬಂತು. ಈ ಸಂದರ್ಭ ಸ್ನೇಹಿತರೊಬ್ಬರ ಸಲಹೆಯಂತೆ ಪ್ರತಿದಿನ ಸಮುದ್ರ ತೀರದ ಮರಳಿನ ಮೇಲೆ ಯೋಗ, ವ್ಯಾಯಾಮ, ದೈಹಿಕ ಕಸರತ್ತು ಮಾಡಲು ಆರಂಭಿಸಿದೆ. ಇದು ನನ್ನ ಜೀವನವನ್ನೇ ಬದಲಿಸಿತು. ಕಡಲ ಮರಳಿನಿಂದ ಬದುಕಿಗೆ ಹೊಸ ಚೈತನ್ಯ ಸಿಕ್ಕಿದೆ. ಹೀಗಾಗಿ, ಪ್ರತಿದಿನ ಬೆಳ್ಳಂಬೆಳಿಗ್ಗೆ ನನ್ನ ಹೆಜ್ಜೆ ಮಂಗಳೂರು ಸಮೀಪದ ಪಣಂಬೂರು ಬೀಚ್‍ನತ್ತ...’ ಎನ್ನುತ್ತಾರೆ ಮಂಗಳೂರಿನ ಜಗನ್ನಾಥ್.

ಇಂದಿನ ಫಾಸ್ಟ್‌ಪುಡ್ ಸಂಸ್ಕೃತಿ, ವ್ಯಾಯಾಮದ ಕೊರತೆ, ವಾಯುಮಾಲಿನ್ಯ, ಕೆಲಸದ ಒತ್ತಡದಿಂದ ದಿನದಿಂದ ದಿನಕ್ಕೆ ಮನುಷ್ಯ ಆರೋಗ್ಯದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾನೆ. ಇದರ ಮುಂದುವರಿದ ಭಾಗವಾಗಿ ತನ್ನ ದುಡಿಮೆಯ ಬಹುತೇಕ ಪಾಲನ್ನು ಆರೋಗ್ಯ ವೃದ್ಧಿಗಾಗಿ ಖರ್ಚು ಮಾಡುತ್ತಾನೆ. ಕಡೆಗೆ ಆದಾಯ ಮತ್ತು ಖರ್ಚನ್ನು ಸಮತೋಲನ ಮಾಡಲಾಗದೆ ಒದ್ದಾಟ ನಡೆಸುತ್ತಾನೆ. ಈ ಸಮಸ್ಯೆಯ ಸುಳಿಯಿಂದ ಹೊರಬರಲು ಕರಾವಳಿಯ ಸಮುದ್ರ ತೀರ (ಬೀಚ್)ದಲ್ಲಿ ವಿಶೇಷ ಔಷಧಿಯಿದೆ.

ಅರಬ್ಬಿ ಸಮುದ್ರದೊಂದಿಗೆ ಬೆಸೆದುಕೊಂಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಬೀಚ್‍ಗಳಿವೆ. ಪ್ರಕೃತಿಯ ಅದ್ಭುತ ಸೃಷ್ಟಿಗಳಲ್ಲಿ ಇದೂ ಒಂದು. ಇಲ್ಲಿ ಸದಾ ಪ್ರಶಾಂತವಾದ ವಾತಾವರಣ ಇರುತ್ತದೆ. ಪರಿಶುದ್ಧವಾದ ಗಾಳಿ ಬೀಸುತ್ತಿರುತ್ತದೆ. ನೀರಿನ ಅಲೆಗಳ ಸದ್ದು ಮನಸಿಗೆ ಮುದ ನೀಡುತ್ತದೆ. ಮಾತ್ರವಲ್ಲ, ಇಲ್ಲಿನ ಮರಳಿನ ಮೇಲೆ ಮಾಡುವ ಕಸರತ್ತು, ವ್ಯಾಯಾಮ, ಯೋಗ ಮನುಷ್ಯನ ದೈಹಿಕ ಮತ್ತು ಮಾನಸಿಕ ಕ್ಷಮತೆ ವೃದ್ಧಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯ ಬಹುತೇಕ ಬೀಚ್‍ಗಳು ದೈಹಿಕ ಕಸರತ್ತಿನ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿದೆ. ರಜಾದಿನಗಳಲ್ಲಂತೂ ನಸುಕಿನಲ್ಲಿ ತಂಡೋಪ
ತಂಡವಾಗಿ ಸಾವಿರಾರು ಮಂದಿ ಸಮುದ್ರ ತೀರಕ್ಕೆ ಲಗ್ಗೆ ಹಾಕುತ್ತಾರೆ.

‘29 ವರ್ಷಗಳಿಂದ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡುತ್ತಿದ್ದೇನೆ. ಈ ಪೈಕಿ ಹಲವರು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪದಕಗಳಿಗೆ ಮುತ್ತಿಕ್ಕಿದ್ದಾರೆ. ಇದು ಸಾಧ್ಯವಾಗಿದ್ದು ಕರಾವಳಿಯ ಕಡಲ ಕಿನಾರೆಯಲ್ಲಿ ಮರಳಿನ ಮೇಲೆ ಮಾಡಿದ ಕ್ರೀಡಾಭ್ಯಾಸ, ಕಸರತ್ತಿನಿಂದ. ಮರಳಿನಲ್ಲಿ 500 ಮೀಟರ್ ಓಡುವುದು, ಟ್ರಾಕ್ ನಲ್ಲಿ ಐದು ಕಿಲೋ ಮೀಟರ್ಸ್ ಓಟಕ್ಕೆ ಸಮ ಎಂಬ ಸತ್ಯವನ್ನು ನಾನು ಕಂಡುಕೊಂಡಿದ್ದೇನೆ. ಹೀಗಾಗಿ, ಪ್ರತಿ ಭಾನುವಾರ ಮತ್ತು ರಜಾದಿನಗಳಲ್ಲಿ ನನ್ನ ವಿದ್ಯಾರ್ಥಿಗಳಿಗೆ ಕನಿಷ್ಠ ಮೂರು ಗಂಟೆ ಮರಳಿನ ಮೇಲೆ ಕಸರತ್ತು ಮಾಡಿಸುತ್ತೇನೆ’ ಎನ್ನುತ್ತಾರೆ ಮಂಗಳೂರು ಮಂಗಳಾ ಅಥ್ಲೀಟ್ಸ್‌ನ ಕೋಚ್ ದಿನೇಶ್ ಕುಂದರ್.

‘ಸೃಜನಾತ್ಮಕವಾಗಿ ಯೋಚನೆ ಮಾಡಿದರೆ ಮರಳಿನ ಮೇಲೆ ಸಾಕಷ್ಟು ಕಸರತ್ತು ಮಾಡಬಹುದು. ಮರಳಿನಲ್ಲಿ ಓಡುವುದರಿಂದ ಕಾಲಿಗೆ ಚಲನೆ ಸಿಗುವುದಲ್ಲದೆ ಬೆರಳಿಗೂ ಚಲನೆ ಸಿಗುತ್ತದೆ. ಮಕ್ಕಳನ್ನು ನಾನು ಬೆಳ್ಳಂಬೆಳಿಗ್ಗೆ ನೀರಿನ ತೆರೆಯ ಮೇಲೆ ಓಡಿಸುತ್ತೇನೆ. ಈ ವೇಳೆ ಒಂದೆಡೆ ತೆರೆಯು ಕಾಲಿಗೆ ಬಡಿಯುತ್ತದೆ, ಮತ್ತೊಂದೆಡೆ ಕಾಲಿನ ಅಡಿಯ ಮರಳು ಕೊಚ್ಚಿ ಹೋಗುತ್ತಿರುತ್ತದೆ. ಆ ಸಂದರ್ಭ ಮಕ್ಕಳು ಮಾಡುವ ಬ್ಯಾಲೆನ್ಸ್ ಅವರನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. ಅಲ್ಲದೆ, ಸೊಂಟಕ್ಕೆ ಎಲಾಸ್ಟಿಕ್ ಹಾಕಿ, ಟ್ರಾಲಿಯನ್ನು ಸೊಂಟಕ್ಕೆ ಕಟ್ಟಿ ಮಕ್ಕಳನ್ನು ಓಡಿಸಲಾಗುತ್ತದೆ. 3ನೇ ತರಗತಿ ವಿದ್ಯಾರ್ಥಿಯಿಂದ ಹಿಡಿದು ರೈಲ್ವೆಯಲ್ಲಿ ಉದ್ಯೋಗಿಯಾಗಿರುವವರು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಎಲ್ಲ ಕಸರತ್ತುಗಳನ್ನು ವಿದ್ಯಾರ್ಥಿಗಳು ಇಷ್ಟಪಟ್ಟು ಮಾಡುತ್ತಾರೆ’ ಎಂದು ಹೇಳುತ್ತಾರೆ ಅವರು.

‘ಯೋಗವನ್ನು ನಾಲ್ಕು ಗೋಡೆಗಳ ಮಧ್ಯೆ ಮಾಡುವುದಕ್ಕಿಂತ ಪ್ರಕೃತಿಯ ಮಡಿಲಿನಲ್ಲಿ ಮಾಡಿದರೆ ಹೆಚ್ಚು ಲಾಭದಾಯಕ. ಅದರಲ್ಲೂ ಪ್ರಶಾಂತವಾದ ವಾತಾವರಣ, ಶುದ್ಧಗಾಳಿ ಸಿಗುವ ಸಮುದ್ರ ತೀರದ ಮರಳಿನಲ್ಲಿ ಮಾಡಿದರೆ ಅದರ ಸುಖವನ್ನು ಅನುಭವಿಸಿದವನೇ ಬಲ್ಲ. ಯೋಗವನ್ನು ನೆಲದ ಮೇಲೆ ಮಾಡುವುದಾದರೆ ಎಷ್ಟು ದಪ್ಪ ಬಟ್ಟೆ ಹಾಕಿದರೂ ಕೆಲವು ಆಸನ ಕ್ಲಿಷ್ಟಕರವಾಗುತ್ತದೆ. ಅದೇ ಮರಳಿನಲ್ಲಿ ಎಂತಹ ಕ್ಲಿಷ್ಟಕರ ಆಸನವನ್ನು ತುಂಬ ಸುಲಭವಾಗಿ ಮಾಡಬಹುದು. ಶಿರ್ಷಾಸನ ಮತ್ತಿತರ ಆಸನ ಮಾಡುವಾಗ ಆಯ ತಪ್ಪಿ ಬಿದ್ದರೂ ಅಪಾಯ ತುಂಬಾ ಕಡಿಮೆ. ಮರಳಿನ ಮೇಲಿನ ಯೋಗಾಸನದ ಮಹತ್ವವನ್ನು ಅರಿವಿದೆ. ಹೀಗಾಗಿ, ಮಂಗಳೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಗಾಗ ಸಮುದ್ರ ತೀರದಲ್ಲಿ ಯೋಗ ತರಬೇತಿ ಮತ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೇಳುತ್ತಾರೆ ಸಮಿತಿಯ ನೇತ್ರಾವತಿ ವಲಯ ಸಂಚಾಲಕ ಹರೀಶ್ ಕೋಟ್ಯಾನ್.

‘ಪಣಂಬೂರು ಬೀಚ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಪ್ರೇಕ್ಷಣೀಯ ಸ್ಥಳ. ಇಲ್ಲಿಗೆ ಪ್ರತಿದಿನ ಸರಾಸರಿ 6 ಸಾವಿರ ಮಂದಿ ಭೇಟಿ ನೀಡುತ್ತಾರೆ. ಭಾನುವಾರ ಸರಾಸರಿ 25 ಸಾವಿರ ಜನ ಬೀಚ್‍ನಲ್ಲಿ ಕುಣಿದು ಕುಪ್ಪಳಿಸುತ್ತಾರೆ. ರಜಾದಿನಗಳಲ್ಲಿ ನಸುಕಿನಲ್ಲಿ ಮತ್ತು ರಾತ್ರಿ ಬೀಚ್‍ನಲ್ಲಿ ಹೊಸ ಪ್ರಚಂಚ ಅನಾವರಣವಾಗುತ್ತದೆ. ಒಂದು ಕಡೆ ವ್ಯಾಯಾಮ, ದೈಹಿಕ ಕಸರತ್ತು, ಯೋಗ ಕಾಣಸಿಗುತ್ತದೆ. ಮತ್ತೊಂದು ಕಡೆ ಓಟ, ವೇಗದ ನಡಿಗೆ, ಕುಸ್ತಿ ನಡೆಯುತ್ತಿರುತ್ತದೆ. ಇನ್ನೊಂದು ಕಡೆ ವಾಲಿಬಾಲ್, ಫುಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಪಂದ್ಯದ ಸಂಭ್ರಮ. ಈ ಎಲ್ಲದರ ಉದ್ದೇಶ ದೈಹಿಕ ಫಿಟ್‌ನೆಸ್‌’ ಎನ್ನುತ್ತಾರೆ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್‌, ಸಸಿಹಿತ್ಲು, ಪಡುಬಿದ್ರಿ, ಕಾಪು, ಪಡುಕೆರೆ, ತ್ರಾಸಿ– ಮರವಂತೆ, ಮಲ್ಪೆ ಮುಂತಾದ ಬೀಚ್‌ಗಳಿವೆ. ಇವುಗಳಲ್ಲಿ ಶುಚಿತ್ವ ಕಾಪಾಡುವುದೇ ದೊಡ್ಡ ಸವಾಲು. ಬೀಚ್‌ ಶುಚಿಯಾಗಿದ್ದರೆ ಹೆಚ್ಚು ಮಂದಿ ಬರುತ್ತಾರೆ. ಪಣಂಬೂರು ಬೀಚನ್ನು ಪ್ರತಿದಿನ ಬೆಳಿಗ್ಗೆ ಶುಚಿ ಮಾಡಲಾಗುತ್ತದೆ. ಹೀಗಾಗಿ, ದೈಹಿಕ ಕಸರತ್ತು, ವ್ಯಾಯಾಮ ಮಾಡುವವರಿಗೂ ಉತ್ತಮ ವಾತಾವರಣ ಇರುತ್ತದೆ ಎಂದು ಹೇಳುತ್ತಾರೆ ಅವರು.

1 ಗಂಟೆ ಕಸರತ್ತು, 23 ಗಂಟೆ ಉಲ್ಲಾಸ!

ಬೆಳಿಗ್ಗೆಯ ಒಂದು ಗಂಟೆ ಸಮಯವನ್ನು ಸಮುದ್ರ ತೀರದಲ್ಲಿ ಕಳೆಯಲು ನಾನು ಮೀಸಲಿಟ್ಟಿದ್ದೇನೆ. ಅರ್ಧಗಂಟೆ ಮರಳಿನಲ್ಲಿ ನಡೆಯುತ್ತೇನೆ, ಉಳಿದ ಅರ್ಧ ಗಂಟೆಯಲ್ಲಿ ವ್ಯಾಯಾಮ ಮಾಡುತ್ತೇನೆ. ಒಂದು ಗಂಟೆ ಸಮುದ್ರ ತೀರದಲ್ಲಿ ಕಳೆಯುವುದರಿಂದ ದಿನದ ಉಳಿದ 23 ಗಂಟೆ ದೈಹಿಕ ಮತ್ತು ಮಾನಸಿಕ ಉಲ್ಲಾಸ ಸಿಗುತ್ತದೆ. ಎಷ್ಟೆ ಕೆಲಸ ಮಾಡಿದರೂ ಸುಸ್ತಾಗುವುದಿಲ್ಲ, ರಾತ್ರಿಯೂ ಚೆನ್ನಾಗಿ ನಿದ್ದೆ ಬರುತ್ತದೆ’ ಎಂಬುದು ಮಂಗಳೂರಿನಲ್ಲಿ ವೀಲ್ ಲೋಡ್‌ ಆಪರೇಟರ್ ಆಗಿರುವ ತಾರಾನಾಥ್ ಅವರ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT